ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿ; ಕಡಿವಾಣಕ್ಕೆ ಆಗ್ರಹ

Published 20 ಜೂನ್ 2023, 6:28 IST
Last Updated 20 ಜೂನ್ 2023, 6:28 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ವಸೂಲಿ ಹಾಗೂ ಆಟದ ಮೈದಾನಗಳೇ ಇಲ್ಲದಿರುವ ಶಾಲೆಗಳ ಪರವಾನಿಗಿಯನ್ನು ರದ್ದು ಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಬಣ) ರಾಜ್ಯ ಅಧ್ಯಕ್ಷ ಬಿ.ಎಸ್‌.ಚಂದ್ರಶೇಖರ್‌ ಆಗ್ರಹಿಸಿದರು.

ನಗರದಲ್ಲಿ ಸೋಮವಾರ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶ್ರೀಕಂಠ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, 1ನೇ ತರಗತಿಯಿಂದ 10ನೇ ತರಗತಿವರೆಗೂ ಒಂದೇ ಬಾರಿ ಹಣ ಪಾವತಿ ಮಾಡಿಸಿಕೊಳ್ಳಲಾಗುತ್ತಿದೆ. ಇದು ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.

ನಗರದ ಕೆಲ ಖಾಸಗಿ ಶಾಲೆಗಳು ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 9ನೇ ತರಗತಿಗೆ ವರ್ಗಾವಣೆ ಪತ್ರಗಳನ್ನು (ಟಿಸಿ) ನೀಡಿ ಬೇರೆ ಶಾಲೆಗಳಲ್ಲಿ ದಾಖಲಾಗುವಂತೆ ಪೋಷಕರ ಮೇಲೆ ಒತ್ತಡ ಹಾಕುತ್ತಿವೆ. 1ನೇ ತರಗತಿಯಿಂದ 8ನೇ ತಗತಿವರೆಗೆ ಸರಿಯಾಗಿ ವಿದ್ಯೆ ಕಲಿಸುವುದು ಶುಲ್ಕ ಪಡೆಯುವ ಶಾಲೆಗಳ ಕರ್ತವ್ಯ. ಆದರೆ 10ನೇ ತರಗತಿಯಲ್ಲಿ ಶೇ 100ರಷ್ಟು ಫಲಿತಾಂಶ ಪಡೆಯುವ ಉದ್ದೇಶದಿಂದ ಕಡಿಮೆ ಅಂಕ ಪಡೆಯುವ, ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಟಿಸಿ ನೀಡಿ ಸರ್ಕಾರಿ ಶಾಲೆಗಳಲ್ಲಿ ದಾಖಲಾಗುವುಂತೆ ಒತ್ತಡ ಹಾಕುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪೋಷಕರು ಲಿಖಿತವಾಗಿ ದೂರು ನೀಡಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ.ಇಂತಹ ಶಾಲೆಯ ಪರವಾನಿಗಿಯನ್ನು ರದ್ದುಪಡಿಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಖಾಸಗಿ ಶಾಲೆಗಳಲ್ಲಿ ಅವರು ಹೇಳಿದಷ್ಟು ಬೆಲೆ ನೀಡಿ ಪುಸ್ತಕ, ಬ್ಯಾಗ್‌, ಸಮವಸ್ತ್ರ ಖರೀದಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಈ ಬಗ್ಗೆಯು ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಈ ಹಿಂದೆ ಪ್ರತಿ ವರ್ಷವು ಪೋಷಕರ ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರ ಸಭೆಗಳನ್ನು ನಡೆಸುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುತಿತ್ತು. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆ ನಡೆಸುವುದನ್ನೇ ನಿಲ್ಲಿಸಿದ್ದಾರೆ ಎಂದು ದೂರಿದರು.

ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ರಂಗಪ್ಪ, ಕರವೇ(ಕನ್ನಡಿಗರ ಬಣ)ದ ರಾಜ್ಯ ಕಾರ್ಯರ್ದರ್ಶಿ ಆರ್‌.ರಮೇಶ್‌, ರಾಜ್ಯ ಖಜಂಚಿ ಚೇನ್‌ಗೌಡ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ತ.ನ.ರಂಜಿತ್‌ಗೌಡ, ಕಾರ್ಮಿಕ ಘಕದ ಮುಖಂಡ ವಾಸು ಇದ್ದರು.

ಸೂಚನೆ ನೀಡಲು ಅವಕಾಶ ಇಲ್ಲ: ಡಿಡಿಪಿಐ

ಹತ್ತಿರದಲ್ಲೇ ಶಾಲೆಗಳು ಇರಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ಹಿಂದೆ ಖಾಸಗಿಯವರು ಶಾಲೆ ಪ್ರಾರಂಭಿಸಲು ಅನುಮಿತಿ ನೀಡಿದ್ದರು. ಆ ಸಮಯದಲ್ಲಿ ಇದ್ದ ನಿಮಯಗಳಂತೆ ಶಾಲೆಗಳು ಪ್ರಾರಂಭವಾಗಿವೆ. ಆದರೆ ಬದಲಾದ ಕಾಲಮಾನದಲ್ಲಿ ಖಾಸಗಿ ಶಾಲಾ ಅನುಮತಿಗಳ ನಿಮಯದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಆದರೆ ಈ ಹಿಂದೆ ಪ್ರಾರಂಭವಾಗಿರುವ ಶಾಲೆಗಳಿಗೂ ಹೊಸ ನಿಯಮವನ್ನೇ ಪಾಲಿಸುವಂತೆ ಸೂಚನೆ ನೀಡಲು ಬರುವುದಿಲ್ಲ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶ್ರೀಕಂಠ ಹೇಳಿದರು. 

ಆದರೆ ಹೆಚ್ಚಿನ ಶುಲ್ಕ ವಸೂಲಿ ಶಾಲೆಗಳಲ್ಲಿ ಬುಕ್ಸ್‌ ಸಮವಸ್ತ್ರ ಮಾರಾಟ ಮಾಡುವುದು ತಪ್ಪು. ಈ ಕುರಿತಂತೆ ಜುಲೈ ಎರಡನೇ ವಾರದಲ್ಲಿ ಸಭೆ ನಡೆಸಿ ಸೂಕ್ತ ಸೂಚನೆ ನೀಡಲಾಗುವುದು. ಈಗಾಗಲೇ ಪೋಷಕರಿಂದ ಹಾಗೂ ಸಂಘಟನೆಗಳಿಂದ ಬಂದಿರುವ ಲಿಖಿತ ದೂರುಗಳ ಕುರಿತಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಂದ ಸ್ಪಷ್ಟನೆ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT