ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಬದುಕು ಕಟ್ಟಿಕೊಟ್ಟ ಪತ್ರಿಕಾ ವಿತರಣೆ

Published : 4 ಸೆಪ್ಟೆಂಬರ್ 2024, 6:32 IST
Last Updated : 4 ಸೆಪ್ಟೆಂಬರ್ 2024, 6:32 IST
ಫಾಲೋ ಮಾಡಿ
Comments

ದೊಡ್ಡಬಳ್ಳಾಪುರ: ‘ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ಘಟನೆಯು ಕ್ಷಣಾರ್ಧದಲ್ಲಿ ಅಂಗೈಯಲ್ಲಿಯೇ ನೋಡುವ, ಓದುವ ಅವಕಾಶ ಇಂದಿನ ಡಿಜಿಟಲ್‌ ಯುಗದಲ್ಲಿ ಇದೆ. ಆದರೆ, ಇಷ್ಟೆಲ್ಲ ಇದ್ದರೂ ಬೆಳಿಗ್ಗೆ ಕಾಫಿ ಕುಡಿಯುತ್ತಾ ಪತ್ರಿಕೆ ಓದಿದಷ್ಟು ಸಮಾಧಾನ ಹಾಗೂ ಓದಿದ ವಿಷಯದ ಬಗ್ಗೆ ನಮ್ಮದೇ ಆದ ವಿಚಾರ ಮೂಡುವುದು ಮುದ್ರಣ ಮಾಧ್ಯಮದಿಂದ ಮಾತ್ರ ಸಾಧ್ಯ’. 

ಇಂದಿಗೂ ದಿನ ಪತ್ರಿಕೆಗಳು ತಮ್ಮ ಮಹತ್ವ ಮತ್ತು ತಮ್ಮ ಸ್ಥಾನ ಉಳಿಸಿಕೊಂಡಿವೆ ಎಂದು ತಮ್ಮ ಪತ್ರಿಕಾ ಓದಿನ ಅನುಭವ ಹಂಚಿಕೊಂಡವರು ದೊಡ್ಡಬೆಳವಂಗಲ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಎಂ.ಬಿ.ನವೀನ್‌ ಕುಮಾರ್‌.

ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸುವ ಕೆಲಸ ಮಾಡುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದು ಆರೋಗ್ಯ ದೃಷ್ಟಿಯಿಂದ ಹಾಗೂ ಸ್ವಂತ ದುಡಿಮೆ ಮಹತ್ವ ಅರ್ಥವಾಗಿಸುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಪತ್ರಿಕೆ ವಿತರಿಸುವ ಕೆಲಸ ಮಾಡಿರುವ ಅದೆಷ್ಟೋ ಜನ ಇಂದು ಉನ್ನತ ಹುದ್ದೆಗಳಲ್ಲಿದ್ದಾರೆ.

‘ಬಹುತೇಕ ವಿದ್ಯಾರ್ಥಿಗಳು ತಮ್ಮ ತಿಂಗಳ ಖರ್ಚಿಗೆ ಆಗುವಷ್ಟು ಹಣವನ್ನು ಪತ್ರಿಕೆಗಳನ್ನು ಓದುಗರ ಮನೆಗಳಿಗೆ ತಲುಪಿಸುವ ಮೂಲಕವೇ ಸಂಪಾದಿಸಿಕೊಳ್ಳುತ್ತಿದ್ದಾರೆ. ಪತ್ರಿಕೆಗಳನ್ನು ಮನೆಗಳಿಗೆ ಹಾಕುವ ವೃತ್ತಿಯಿಂದ ಬರುವ ಸಂಪಾದನೆ ಕಡಿಮೆಯೇ. ಆದರೆ, ಬದುಕಿನಲ್ಲಿ ಆರ್ಥಿಕ ಸ್ವಾವಲಂಬನೆ ಪಾಠ ಕಲಿಸುತ್ತದೆ. ಎರಡೂವರೆ ದಶಕಗಳ ಪತ್ರಿಕಾ ವಿತರಕ ವೃತ್ತಿಯಲ್ಲಿ ಸಾಕಷ್ಟು ಜನ ವಿದ್ಯಾರ್ಥಿಗಳು ಪತ್ರಿಕೆಗಳನ್ನು ಹಾಕುವ ಮೂಲಕ ತಮ್ಮ ಬದುಕು ರೂಪಿಸಿಕೊಂಡಿರುವ ನಿದರ್ಶನ ಮುಂದಿದೆ ಎನ್ನುತ್ತಾರೆ’ ಪತ್ರಿಕಾ ವಿತರಕ ದೇವನಾಥ್‌.

ನಗರ ಪ್ರದೇಶದಲ್ಲಿ ಓದುಗರ ಬಹುತೇಕ ಮನೆಗಳು ಸಮೀಪದಲ್ಲೇ ಇರುತ್ತವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಒಂದು ಗ್ರಾಮಕ್ಕೆ ನಾಲ್ಕರಿಂದ ಐದು ಪತ್ರಿಕೆ ತರಿಸುತ್ತಾರೆ. ಒಂದು ಪತ್ರಿಕೆ ಬೇಕು ಅಂದರು ನಾವು ಹಾಕಬೇಕಾಗುತ್ತದೆ. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಏಜೆನ್ಸಿ ಪಡೆದಿರುವ ವಿತರಕರೇ ಎಲ್ಲ ಪತ್ರಿಕೆಗಳನ್ನು ಓದುಗರಿಗೆ ತಲುಪಿಸಬೇಕು. ಅದೂ, ಬೆಳಿಗ್ಗೆ 7ರೊಳಗೆ. ಹೀಗಾಗಿ ನಗರ ಪ್ರದೇಶದ ವಿತರಕರಿಗಿಂತಲೂ ಗ್ರಾಮೀಣ ಪ್ರದೇಶದ ವಿತರಕರ ಕೆಲಸ ಒಂದಿಷ್ಟು ಭಿನ್ನ ಎನ್ನುತ್ತಾರೆ ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಭಾಗದ ಪತ್ರಿಕಾ ವಿತರಕ ಸಂತೋಷ್‌.

‘ಬದುಕು ಕಟ್ಟಿಕೊಂಡಿರುವೆ’

ನಾಲ್ಕು ದಶಕಗಳಿಂದಲೂ ಮನೆಗಳಿಗೆ ಪತ್ರಿಕೆ ತಲುಪಿಸುವ ವೃತ್ತಿ ಮಾಡುತ್ತಿರುವುದು ಆರ್ಥಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಅನುಕೂಲವಾಗಿದೆ. ಪತ್ರಿಕ ವಿತರಣೆ ಹಾಗೂ ಬಸ್‌ ನಿಲ್ದಾಣದಲ್ಲಿ ಪತ್ರಿಕೆಗಳನ್ನು ಮಾರುವುದನ್ನೇ ವೃತ್ತಿಯಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವೆ. ಎಲ್ಲ ವೃತ್ತಿಯಂತೆ ಪತ್ರಿಕಾ ವಿತರಣೆ ವೃತ್ತಿಯಲ್ಲೂ ಕಷ್ಟಗಳು ಇವೆ. ಅವುಗಳನ್ನು ನಿವಾರಿಸಿಕೊಂಡು ಮುನ್ನಡೆಯಬೇಕು. ನಂಜುಂಡಪ್ಪ ಹಿರಿಯ ಪತ್ರಿಕಾ ವಿತಕರದೊಡ್ಡಬಳ್ಳಾಪುರ

'ಆರ್ಥಿಕ ಶಿಸ್ತು ಮುಖ್ಯ’

ಪ್ರತಿ ತಿಂಗಳ ಕೊನೆ ದಿನ ನಮ್ಮ ಅರಿವಿಗೆ ಬಾರದಲೇ ಬಂದೇ ಬಿಡುತ್ತದೆ. ನಮ್ಮಲ್ಲಿ ಆರ್ಥಿಕ ಶಿಸ್ತು ಇದ್ದರೆ ಮಾತ್ರ ಪತ್ರಿಕಾ ವೃತ್ತಿಯಲ್ಲಿ ಮುಂದುವರಿಯಲು ಬದುಕು ರೂಪಿಸಿಕೊಳ್ಳಲು ಸಾಧ್ಯ. ದೇವನಾಥ್‌ ಪತ್ರಿಕಾ ವಿತರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT