ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ

ತಾಯಿಯ ಹಾಲು ಅಮೃತಕ್ಕೆ ಸಮಾನ
Last Updated 8 ಆಗಸ್ಟ್ 2021, 4:39 IST
ಅಕ್ಷರ ಗಾತ್ರ

ದೇವನಹಳ್ಳಿ:ಇತ್ತೀಚಿನ ದಿನಗಳಲ್ಲಿ ಮಹಿಳೆಯರು ನಗರೀಕರಣಕ್ಕೆ ಮಾರುಹೋಗಿ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ವಿಷಾದನೀಯ. ಮಕ್ಕಳ ಬೆಳವಣಿಗೆಗೆ ಪೂರಕವಾಗಿರುವ ತಾಯಿಯ ಹಾಲು ಅಮೃತವಾಗಿದ್ದು, ಸ್ತನ್ಯಪಾನದ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ದೇವನಹಳ್ಳಿ ತಾಲ್ಲೂಕು ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈದ್ಯರ ಸಲಹೆ ಮೇರೆಗೆ ಮಕ್ಕಳ ಲಾಲನೆ, ಪಾಲನೆ ಕುರಿತು ಆರೋಗ್ಯ ಕಾಯಕರ್ತರು ತಿಳಿವಳಿಕೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಯಡಿ ಗರ್ಭಿಣಿ, ಬಾಣಂತಿಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಉತ್ತಮ ಆಹಾರ ಧಾನ್ಯಗಳು ಹಾಗೂ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ ಎಂದರು.

ತಾಯಿಯಾಗುವುದು, ಮಗುವಿನ ಪಾಲನೆ ಮಾಡುವುದು, ಪ್ರತಿಯೊಬ್ಬ ಮಹಿಳೆಯರ ಸಂತಸದ ಕ್ಷಣಗಳಾಗಿದ್ದು, ಹೆಮ್ಮೆ ಪಡಬೇಕು. ಕೋವಿಡ್ ಮೊದಲ ಹಾಗೂ ಎರಡನೇ ಅಲೆ ತಡೆಯಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕೋವಿಡ್ ಮೂರನೇ ಅಲೆ ಆರಂಭವಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ನಿಯಮ ಪಾಲಿಸುವಂತೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ತನ್ಯಪಾನ ಕುರಿತು ಜನರಿಗೆ ಮಾಹಿತಿ ನೀಡಬೇಕು. ಮಗು ಹುಟ್ಟಿದ ಆರು ತಿಂಗಳು ಬೇರೆ ಯಾವುದೇ ಆಹಾರ ನೀಡದೇ ಕೇವಲ ತಾಯಿಯ ಎದೆ ಹಾಲು ಮಾತ್ರ ನೀಡಬೇಕು. ಇದರಿಂದ ಮಗುವಿನ ಜೀರ್ಣಕ್ರಿಯೆ ಉತ್ತಮವಾಗಿರಲಿದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದರು.

ತಾಯಿ, ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ. ಅಲರ್ಜಿ, ಆಸ್ತಮದಂತಹ ಸಮಸ್ಯೆ ಇರುವುದಿಲ್ಲ. ಮಗುವಿಗೆ ಎದೆಹಾಲು ಉಣಿಸದ ತಾಯಂದಿರು ಸ್ತನ ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗ ಬೇಕಾಗುತ್ತದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ತಾಯಿಯ ಹಾಲಿನಲ್ಲಿಯೇ ಮಗುವಿಗೆ ಬೇಕಾದ ಎಲ್ಲ ರೀತಿಯ ಪೋಷಕಾಂಶಗಳು ದೊರೆಯುವುದರಿಂದ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಸಹಕಾರಿಯಾಗಲಿದೆ. ಮಗುವಿನ ಮೆದುಳು ಕ್ರೀಯಾಶೀಲವಾಗುತ್ತದೆ ಎಂದು ತಿಳಿಸಿದರು.

ಮಗು ಜನಿಸಿದ ಒಂದು ಗಂಟೆಯ ಒಳಗೆ ಕೇವಲ ಶೇ 44.6 ರಷ್ಟು ತಾಯಂದಿರು ಮಾತ್ರ ಮಗುವಿಗೆ ಹಾಲುಣಿಸುತ್ತಿರುವುದು ನೋವಿನ ಸಂಗತಿಯಾಗಿದೆ. ಯಾವುದೇ ಮಗು ಸ್ತನ್ಯಪಾನದಿಂದ ವಂಚಿತವಾಗಬಾರದು ಎಂದು ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT