ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಕೇಂದ್ರ ಆರಂಭ: ಎಲ್ಲ ಅರ್ಜಿ ಒಂದೇ ಕಡೆ ಸ್ವೀಕಾರ

Last Updated 12 ಡಿಸೆಂಬರ್ 2019, 13:39 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಸಾರ್ವಜನಿಕರು ಅರ್ಜಿ ಸಲ್ಲಿಸಿ, ಅಲೆದಾಡುವುದನ್ನು ತಪ್ಪಿಸಲು ತಾಲ್ಲೂಕು ಕೇಂದ್ರದಲ್ಲಿ ಇ–ಕೇಂದ್ರ ಆರಂಭಿಸಲಾಗಿದ್ದು ಪ್ರತಿಯೊಂದು ಅರ್ಜಿ ಇ–ಕೇಂದ್ರದಲ್ಲಿಯೇ ಸ್ವೀಕೃತಗೊಂಡು ಸಕಾಲದಲ್ಲಿ ಸ್ಪಂದನೆ ಸಿಗಲಿದೆ’ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಹೇಳಿದರು.

ಇ–ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಾರ್ವಜನಿಕರು ನೀಡುವ ವಿವಿಧ ಕಂದಾಯ ದಾಖಲಾತಿ ಅರ್ಜಿಗಳನ್ನು ಇ–ಕೇಂದ್ರದಲ್ಲಿ ಸ್ಕ್ಯಾನ್ ಮಾಡಿದ ನಂತರ ಸಂದೇಶ ರವಾನೆಯಾಗಿ ಅರ್ಜಿದಾರರಿಗೆ ಒಂದು ಕೋಡ್ ಸಂಖ್ಯೆ ಬರಲಿದೆ. ನಂತರ ಯಾವ ಶಾಖೆಗೆ ಅರ್ಜಿಗಳು ತಲುಪಬೇಕು ಎಂದು ಇ–ಕೇಂದ್ರದಲ್ಲಿನ ತಂತ್ರಾಂಶ ಲಾಗಿನ್ ಮೂಲಕ ಆಯಾ ಶಾಖೆಯ ಸಂಬಂಧಿಸಿದ ಸಿಬ್ಬಂದಿ ವರ್ಗ ಕಾರ್ಯ ನಿರ್ವಹಿಸುವ ಕಂಪ್ಯೂಟರ್‌ಗೆ ರವಾನಿಸುತ್ತದೆ. ಅಲ್ಲಿನ ಅಧಿಕಾರಿ ಅರ್ಜಿಯ ಸಂಪೂರ್ಣ ಮಾಹಿತಿ ಪರಿಶೀಲಿಸಿ ಸಂಬಂಧಿಸಿದ ಶಿರಸ್ತೆದಾರ್‌ಗೆ ರವಾನಿಸಬೇಕು. ನಂತರ ತಹಶೀಲ್ದಾರ್ ಅಂತಿಮವಾಗಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಅರ್ಜಿದಾರರಿಗೆ ನೀಡಬೇಕು. ಮೊದಲ ಬಾರಿಗೆ ಜಿಲ್ಲೆಯ ನೆಲಮಂಗಲ ತಾಲ್ಲೂಕು ನಂತರ ದೇವನಹಳ್ಳಿ ತಾಲ್ಲೂಕಿನಲ್ಲಿ ಆರಂಭಿಸಲಾಗಿದೆ’ ಎಂದು ಹೇಳಿದರು.

‘ಪ್ರತಿ ಅರ್ಜಿಯೂ ಇ–ಕೇಂದ್ರದಲ್ಲಿ ಅಪ್ ಲೋಡ್ ಆದ ತಕ್ಷಣ ಸಂಬಂಧಿಸಿದ ಶಾಖೆಗಳಿಗೆ ಡಿಸ್ ಪ್ಲೇ ಆಗಲಿದೆ. ಇದನ್ನು ಯಾವುದೇ ರೀತಿಯಿಂದ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ತಂತ್ರಾಂಶ ಬದಲಿಸಲು ಸಹ ಸಾಧ್ಯವಾಗುವುದಿಲ್ಲ. ಆಯಾ ಶಾಖೆಯ ಸಂಬಂಧಿಸಿದ ಅರ್ಜಿಗಳ ಮಾರ್ಗಸೂಚಿಯನ್ನು ಗೆರೆ ಮೂಲಕ ಸೂಚಿಸುತ್ತದೆ’ ಎಂದರು.

‘ಕಡತ ಯಾವ ಹಂತದಲ್ಲಿದೆ ಎಂಬುದನ್ನು ಅರ್ಜಿದಾರರು ಮನೆಯಲ್ಲೇ ತಿಳಿದುಕೊಳ್ಳಬಹುದು. ಸಿಟಿಜನ್ ಲಾಗಿನ್ ಅರ್ಜಿದಾರರಿಗೆ ನೀಡಲಾಗುತ್ತದೆ. ಸರ್ಕಾರದ ಸಕಾಲದಲ್ಲಿನ ಗಡುವಿನೊಳಗೆ ಅರ್ಜಿ ವಿಲೇವಾರಿ ಆಗಲೇಬೇಕು. ವಿಳಂಬವಾಗಿರುವುದಕ್ಕೆ ಕಾರಣವನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಬೇಜವಾಬ್ದಾರಿ, ನಿರ್ಲಕ್ಷ್ಯ ಮತ್ತು ಹಾರಿಕೆ ಉತ್ತರಕ್ಕೆ ಅವಕಾಶ ಇಲ್ಲ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT