ಬುಧವಾರ, ಆಗಸ್ಟ್ 10, 2022
21 °C

ಚುನಾವಣೆ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆ ಪ್ರಾರಂಭವಾಗಿನಿಂದಲೂ ನಮ್ಮ ಕಾಲೊನಿ ಒಮ್ಮೆಯೂ ಮೀಸಲು ಕ್ಷೇತ್ರವಾಗಿಲ್ಲ. ಸಾಮಾನ್ಯ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಲಾಗದೆ ಪಾಲ್‌ಪಾಲ್‌ದಿನ್ನೆ ಕಾಲೊನಿ ನಿವಾಸಿಗಳು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕಿನ ಎಸ್.ಎಸ್.ಘಾಟಿ (ಮೇಲಿನ ಜೂಗನಹಳ್ಳಿ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲ್‌ಪಾಲ್‌ದಿನ್ನೆ ಸುಮಾರು 80 ಮನೆಗಳಿರುವ ಕಾಲೊನಿಯಾಗಿದೆ. 200ಕ್ಕೂ ಹೆಚ್ಚು ಮತದಾರರಿದ್ದಾರೆ. ಇಲ್ಲಿನ ಎಲ್ಲಾ ಕುಟುಂಬಗಳು ಪರಿಶಿಷ್ಟ ಜಾತಿಗೆ ಸೇರಿದವರು. ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪವಿದೆ.

ಮನೆಗಳ ನಿರ್ಮಾಣಕ್ಕೆ ಸೂಕ್ತ ನಿವೇ‍ಶನ, ಸ್ಥಳ ಇಲ್ಲದೆಯೇ 40 ವರ್ಷಗಳಿಂದ ವಾಸವಾಗಿದ್ದೇವೆ. ಗ್ರಾಮದ ಪಕ್ಕದಲ್ಲಿನ ಸರ್ವೇ ನಂ. 135ರಲ್ಲಿ 5.20 ಎಕರೆ ಸರ್ಕಾರಿ ಗೋಮಾಳ ಇದೆ. ಈ ಜಾಗದಲ್ಲಿ ನಿವೇಶನ ಕೊಡುವಂತೆ ಮನವಿ ಮಾಡಿದ್ದರು ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ನಮ್ಮದೆ ಕಾಲೊನಿ ಜನಪ್ರತಿನಿಧಿ ಆಯ್ಕೆಯಾಗಿದ್ದರೆ ನಿವೇಶನಕ್ಕಾಗಿ ಪಟ್ಟು ಹಿಡಿದು ಕೇಳಬಹುದಿತ್ತು. ನಮ್ಮ ಜನಾಂಗದವರು ಪಂಚಾಯಿತಿ ಸದಸ್ಯರಾಗಿಲ್ಲದೆ ಇರುವುದರಿಂದ ಸಮಸ್ಯೆಗಳನ್ನು ಯಾರೂ ಆಲಿಸುತ್ತಿಲ್ಲ ಎಂದು ಗ್ರಾಮದ ನಿವಾಸಿ ಯಶೋದಮ್ಮ ದೂರಿದ್ದಾರೆ.

ಪ್ರತಿ ಬಾರಿಯ ಚುನಾವಣೆಯಲ್ಲೂ ಮತ ಕೇಳುವುದಕ್ಕೆ ಬರುವ ಸ್ವರ್ಧಿಗಳು ಚುನಾಯಿತರಾದ ನಂತರ ತಮ್ಮ ಕಾಲೊನಿಯ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದಿಲ್ಲ. ಹೀಗಾಗಿ ಕಾಲೊನಿ ಮೀಸಲು ಕ್ಷೇತ್ರವಾಗಬೇಕು. ನಮ್ಮದೇ ಪ್ರತಿನಿಧಿಯನ್ನು ಚುನಾಯಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಈ ಬಾರಿ ಚುನಾವಣೆ ಬಹಿಷ್ಕಾರ ಹಾಕುವ ಮೂಲಕ ಮೀಸಲು ಕ್ಷೇತ್ರ ಮಾಡುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಗ್ರಾಮಸ್ಥ ರಮೇಶ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.