ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರ ಕ್ಷೇತ್ರ | ಕೊರಿಯರ್ ಮೂಲಕ ಮತದಾರರಿಗೆ ಉಡುಗೊರೆ!

ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಭಾವಚಿತ್ರ ಇರುವ ಗಿಫ್ಟ್‌ ಬಾಕ್ಸ್‌ ಜಪ್ತಿ
Published 16 ಮೇ 2024, 16:11 IST
Last Updated 16 ಮೇ 2024, 16:11 IST
ಅಕ್ಷರ ಗಾತ್ರ

ದೇವನಹಳ್ಳಿ: ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರು ಕೊರಿಯರ್ ಮೂಲಕ ಪದವೀಧರ ಮತದಾರರಿಗೆ ಕಳುಹಿಸಿದ್ದಾರೆ ಎನ್ನಲಾದ ಉಡುಗೊರೆಗಳನ್ನು ಚುನಾವಣಾ ನಿಗಾ ಘಟಕದ (ಎಫ್‌ಎಸ್‌ಟಿ) ಸಿಬ್ಬಂದಿ ಗುರುವಾರ ಜಪ್ತಿ ಮಾಡಿಕೊಂಡಿದ್ದಾರೆ.

ಖಚಿತ ಸುಳಿವಿನ ಮೇರೆಗೆ ಪಟ್ಟಣದ ಹೊಸ ಬಸ್‌ ನಿಲ್ದಾಣದ ಹಿಂಭಾಗದಲ್ಲಿರುವ ಡಿಟಿಡಿಸಿ ಕೊರಿಯರ್‌ ಕಚೇರಿ ಮೇಲೆ ದಾಳಿ ನಡೆಸಿದ  ಚುನಾವಣಾ ನಿಗಾ ಘಟಕದ ಅಧಿಕಾರಿಗಳ ತಂಡವು ಮತದಾರರ ವಿಳಾಸಕ್ಕೆ ರವಾನೆಯಾಗಬೇಕಿದ್ದ ಉಡುಗೊರೆಗಳ ಬಾಕ್ಸ್‌ಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. 

ಡಿನ್ನರ್‌ ಸೆಟ್‌ ಸೇರಿದಂತೆ ಅಡುಗೆ ಮನೆ ಸಾಮಗ್ರಿಗಳಿರುವ 109ಕ್ಕೂ ಹೆಚ್ಚು ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿ ಬಾಕ್ಸ್‌ ಮೇಲೆ ರಾಮೋಜಿ ಗೌಡ ಭಾವಚಿತ್ರ ಅಚ್ಚು ಹಾಕಿಸಲಾಗಿದೆ. ಮತ ನೀಡುವಂತೆ ಮನವಿ ಮಾಡಿದ ಕರಪತ್ರ ಅಂಟಿಸಲಾಗಿದೆ.

‘ಕೊರಿಯರ್ ಮೂಲಕ ಮತದಾರರ ಮನೆಗೆ ನೇರವಾಗಿ ಉಡುಗೊರೆ ತಲುಪಿಸುವ ‌ತಂತ್ರ ರೂಪಿಸಲಾಗಿತ್ತು. ಅದನ್ನು ವಿಫಲಗೊಳಿಸಲಾಗಿದೆ. ಈ ಉಡುಗೊರೆ ಬಾಕ್ಸ್‌ಗಳು ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡರಿಗೆ ಸೇರಿವೆ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಮೋಜಿ ಗೌಡ ವಿರುದ್ಧ ದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉಡುಗೊರೆ ಬಾಕ್ಸ್ ಮೇಲೆ ಕಂಡು ಬಂದ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಭಾವಚಿತ್ರ
ಉಡುಗೊರೆ ಬಾಕ್ಸ್ ಮೇಲೆ ಕಂಡು ಬಂದ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಭಾವಚಿತ್ರ
ಉಡುಗೊರೆ ಬಾಕ್ಸ್‌ನಲ್ಲಿ ಕಂಡಬಂದ ಕರಪತ್ರ
ಉಡುಗೊರೆ ಬಾಕ್ಸ್‌ನಲ್ಲಿ ಕಂಡಬಂದ ಕರಪತ್ರ
ಆನೇಕಲ್‌ ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯ ಕಾಂಗ್ರೆಸ್‌ ಅಭ್ಯರ್ಥಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದೆ ಎನ್ನಲಾದ ಗಿಫ್ಟ್‌ ಬಾಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಪ್ರದರ್ಶಿಸಿದರು
ಆನೇಕಲ್‌ ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯ ಕಾಂಗ್ರೆಸ್‌ ಅಭ್ಯರ್ಥಿ ಮತದಾರರಿಗೆ ಹಂಚಲು ಸಂಗ್ರಹಿಸಲಾಗಿದೆ ಎನ್ನಲಾದ ಗಿಫ್ಟ್‌ ಬಾಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಪ್ರದರ್ಶಿಸಿದರು
ಆನೇಕಲ್‌ ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯಲ್ಲಿ ಮತದಾರರಿಗೆ ಹಂಚಲು ತರಲಾಗಿದ್ದ ಉಡುಗೊರೆ
ಆನೇಕಲ್‌ ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯಲ್ಲಿ ಮತದಾರರಿಗೆ ಹಂಚಲು ತರಲಾಗಿದ್ದ ಉಡುಗೊರೆ

ಖಚಿತ ಮಾಹಿತಿ ಮೇರೆಗೆ ಎಫ್‌ಎಸ್‌ಟಿ ತಂಡ ದಾಳಿ ಮಾಡಿ ಮತದಾರರಿಗೆ ಹಂಚಲು ಇಟ್ಟಿದ್ದ ಉಡುಗೊರೆಗಳನ್ನು ಜಪ್ತಿ ಮಾಡಿದೆ. ಪೊಲೀಸ್‌ ಇಲಾಖೆಗೆ ಪ್ರಕರಣ ದಾಖಲು ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

-ಶಿವರಾಜ್‌ ತಹಶೀಲ್ದಾರ್‌ ದೇವನಹಳ್ಳಿ

ಆನೇಕಲ್‌ನಲ್ಲೂ ಸಾವಿರಾರು ಉಡುಗೊರೆ ಬಾಕ್ಸ್‌ ಜಪ್ತಿ

ಆನೇಕಲ್: ಪದವೀಧರ ಕ್ಷೇತ್ರದ ಮತದಾರರಿಗೆ ಹಂಚಲು ತಾಲ್ಲೂಕಿನ ನೆರಳೂರು ಸಮೀಪದ ತಿರುಮಗೊಂಡನಹಳ್ಳಿಯ ಡಿಟಿಡಿಸಿ ಕೊರಿಯರ್ ಗೋದಾಮಿನಲ್ಲಿದ್ದ ನೂರಾರು ಗಿಫ್ಟ್‌ ಬಾಕ್ಸ್‌ಗಳನ್ನು ಬಿಜೆಪಿ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಗಿಫ್ಟ್‌ ಬಾಕ್ಸ್‌ ಕೂಡ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಅವರಿಗೆ ಸೇರಿವೆ ಎನ್ನಲಾಗಿದ್ದು ಅತ್ತಿಬೆಲೆ ಪೊಲೀಸರು ಮತ್ತು ಚುನಾವಣೆ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬುಧವಾರ ರಾತ್ರಿ ಬಿಜೆಪಿ ಕಾರ್ಯಕರ್ತರು ತಿರುಮಗೊಂಡನಹಳ್ಳಿ ಬಳಿಯ ಡಿಟಿಡಿಸಿ ಗೋದಾಮ ಬಳಿ ಜಮಾಯಿಸಿದ್ದರು. ಕೋರಿಯರ್ ಮೂಲಕ ಮತದಾರರಿಗೆ ಹಂಚಲು ಕಳುಹಿಸುತ್ತಿದ್ದಾರೆ ಎನ್ನಲಾದ ನೂರಾರು ಬಾಕ್ಸ್‌ ಡಿಟಿಡಿಸಿ ಗೋದಾಮನಲ್ಲಿರುವುದು ಕಂಡು ಬಂದ ಕೂಡಲೇ ಅತ್ತಿಬೆಲೆ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಗುರುವಾರ ಬೆಳಗ್ಗೆ ಸ್ಥಳಕ್ಕೆ ಬಂದ ಅಧಿಕಾರಿಗಳು ಡಿಟಿಡಿಸಿ ಕೊರಿಯರ್ ಗೋದಾಮಿಗೆ ಬಾಗಿಲು ಹಾಕಿ ತಪಾಸಣೆ ನಡೆಸಿದ್ದಾರೆ. ಕೋರಿಯರ್ ಕಚೇರಿ ಒಳಗಡೆ ಇದ್ದ ರಾಮೋಜಿ ಗೌಡ ಚುನಾವಣೆ ಪ್ರಚಾರದ ಭಿತ್ತಿ ಪತ್ರಗಳು ಹಾಗೂ  ಬಂಟಿಂಗ್ಸ್‌ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT