ಆನೇಕಲ್: ‘ದೇಶದ ಅಭಿವೃದ್ಧಿಯಲ್ಲಿ ಎಂಜಿನಿಯರ್‌ಗಳ ಪಾತ್ರ ಪ್ರಮುಖವಾದುದ್ದು. ಬೃಹತ್ ಯೋಜನೆಗಳು ಜಾರಿಯಾಗಲು, ಕೈಗಾರಿಕೆಗಳ ಅಭಿವೃದ್ಧಿಯಾಗಲು ಎಂಜಿನಿಯರ್‌ಗಳ ಸೃಜನಶೀಲ ಚಿಂತನೆಗಳು, ತಂತ್ರಜ್ಞಾನದಿಂದ ಮಾತ್ರ ಸಾಧ್ಯ. ಹಾಗಾಗಿ ಇಂಜಿನಿಯರ್‌ಗಳ ದಿನಾಚರಣೆ ಅರ್ಥಪೂರ್ಣ ಆಚರಣೆಯಾಗಿದೆ’ ಎಂದು ಬೊಮ್ಮಸಂದ್ರ ಕೈಗಾರಿಕೆಗಳ ಸಂಘದ ಅಧ್ಯಕ್ಷ ಎ.ಪ್ರಸಾದ್ ತಿಳಿಸಿದರು.
ಅವರು ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ಕೈಗಾರಿಕೆಗಳ ಸಂಘದ ವತಿಯಿಂದ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ನಾಡು ಕಂಡ ಶ್ರೇಷ್ಠ ಎಂಜಿನಿಯರ್, ಚಿಂತಕ, ದೂರದೃಷ್ಟಿಯುಳ್ಳ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಎಂಜಿನಿಯರ್‌ಗಳ ದಿನವನ್ನಾಗಿ ಆಚರಿಸುತ್ತಿರುವುದು ಅವರ ಚಿಂತನೆಗಳಿಗೆ ದೊರೆತ ಗೌರವ. ಕನ್ನಂಬಾಡಿ ಅಣೆಕಟ್ಟೆಯನ್ನು ಕಟ್ಟುವ ಮೂಲಕ ಸಾವಿರಾರು ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಿದ ಅನ್ನದಾತರಾಗಿದ್ದಾರೆ. ಮೈಸೂರು ಬ್ಯಾಂಕ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಹಲವಾರು ಪ್ರಗತಿಪರ ಕಾರ್ಯಕ್ರಮಗಳಿಗೆ ರೂಪು ನೀಡಿದ ಮಹಾನ್ ಚಿಂತಕ ಸರ್.ಎಂ.ವಿಶ್ವೇಶ್ವರಯ್ಯ ಅವರು ಭಾರತದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ’ ಎಂದರು.
‘ಕೈಗಾರಿಕೆಗಳಿಂದ ಮಾತ್ರ ದೇಶದ ಅಭಿವೃದ್ಧಿ ಇಲ್ಲವಾದಲ್ಲಿ ದೇಶ ಅಭಿವೃದ್ಧಿಯಾಗುವುದಿಲ್ಲ ಎಂಬ ದೂರದೃಷ್ಟಿಯ ಮೂಲಕ ಹಲವಾರು ಕೈಗಾರಿಕೆಗಳ ಸ್ಥಾಪನೆಗೆ ಸರ್.ಎಂ.ವಿ. ಅವರು ಕಾರಣರಾಗಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ಬೊಮ್ಮಸಂದ್ರ ಕೈಗಾರಿಕ ಪ್ರದೇಶದ ವೃತ್ತಕ್ಕೆ ನಾಮಕರಣ ಮಾಡಲು ಪುರಸಭೆ ಮತ್ತು ಸರ್ಕಾರದೊಂದಿಗೆ ಸಂಘವು ಚರ್ಚಿಸಲಿದೆ’ ಎಂದರು.
ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಇಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು. ಬೊಮ್ಮಸಂದ್ರ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳಾದ ನರೇಂದ್ರಕುಮಾರ್, ಸಂಜೀವ್ ಸಾವಂತ್, ಮುರಳೀಧರ್, ವಾಸು, ಚಂದ್ರಶೇಖರ್, ಪ್ರದೀಪ್ ನಾಯರ್, ನಾಗರಾಜಶೆಟ್ಟಿ, ಅಶ್ವಥ್, ನೀಲಕಂಠಯ್ಯ, ವ್ಯವಸ್ಥಾಪಕ ಶಿವಕುಮಾರ್ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.