ಗುರುವಾರ , ಡಿಸೆಂಬರ್ 3, 2020
23 °C

ಪರಿಸರ ಸ್ವಚ್ಛತೆ: ವಿದ್ಯಾರ್ಥಿಗಳಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ಸಾಧಿಸುವ ಕಡೆಗೆ ಚಿಂತನೆ ನಡೆಸಬೇಕು. ಜೊತೆಗೆ, ತಾವು ಬದುಕುತ್ತಿರುವ ಪರಿಸರದ ಸ್ವಚ್ಛತೆಗೂ ಒತ್ತು ನೀಡಬೇಕು’ ಎಂದು ಬೆಂಗಳೂರು ಪರಿಸರ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ.ರ.ಗೋ. ನಡಾದೂರ್ ಸಲಹೆ ನೀಡಿದರು.

ಹೋಬಳಿಯ ನಾರಾಯಣಪುರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಂಗಳೂರು ಪರಿಸರ ಸಂಘ, ದೇವನಹಳ್ಳಿಯ ಆಕ್ಸ್‌ಫರ್ಡ್ ಇಂಗ್ಲಿಷ್ ಶಾಲೆ, ಸಿಟ್ರಿಕ್ಸ್ ಆರ್ ಮತ್ತು ದಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗ್ರಾಮಾಂತರ ಟ್ರಸ್ಟ್‌ನಿಂದ ನಿರ್ಮಾಣ ಮಾಡಿರುವ 23 ಸಾವಿರ ಲೀಟರ್ ಸಾಮರ್ಥ್ಯದ ಮಳೆನೀರು ಸಂಗ್ರಹದ ನೀರಿನ ಸಂಪ್‌ ಅನ್ನು ಶಾಲೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಪರಿಸರವನ್ನು ಬಳುವಳಿಯಾಗಿ ನೀಡಬೇಕಿರುವುದು ಎಲ್ಲರ ಕರ್ತವ್ಯ. ಶುದ್ಧ ಕುಡಿಯುವ ನೀರು, ಆಟದ ಮೈದಾನ, ಕಲಿಕೆಗೆ ಪೂರಕವಾಗಿರುವ ಉತ್ತಮ ಕೊಠಡಿಗಳು ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಿಕೊಡಲು ಸಂಘವು ಸರ್ಕಾರದೊಟ್ಟಿಗೆ ನಿರಂತರವಾಗಿ ಸಂಪರ್ಕದಲ್ಲಿದೆ. ನೀರಿನ ಕೊರತೆ ಹೆಚ್ಚಾಗಿರುವ ಈ ಭಾಗದಲ್ಲಿ ಮಳೆನೀರು ಸಂಗ್ರಹಿಸಿ ಉಪಯೋಗಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು‌.

ಗ್ರಾಮಾಂತರ ಟ್ರಸ್ಟ್‌ನ ಮುಖ್ಯಸ್ಥೆ ಉಷಾ ಶೆಟ್ಟಿ ಮಾತನಾಡಿ, ಕಲಿಕೆ ನಿರಂತರವಾಗಿರಬೇಕು. ಮಕ್ಕಳು ತಮಗೆ ಸಿಗಬೇಕಾಗಿರುವ ಹಕ್ಕುಗಳನ್ನು ಕೇಳಿ ಪಡೆಯುವಷ್ಟು ಸಮರ್ಥರಾಗ
ಬೇಕು. ಶಿಕ್ಷಕರು ಕೂಡ ಮಕ್ಕಳಿಗೆ ಅವರ ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು. ಮಕ್ಕಳು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಜೊತೆಗೆ ಇತರರನ್ನು ಸ್ವಚ್ಛತೆಯ ಕಡೆಗೆ ಪ್ರೇರಣೆ ಮಾಡಬೇಕು. ಸ್ವಚ್ಛತೆಯಿಂದ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.

ಮುಖ್ಯಶಿಕ್ಷಕಿ ಶಾಂತಕುಮಾರಿ ಮಾತನಾಡಿ, ‘ವಿದ್ಯಾರ್ಥಿಗಳು ಸಂಘ–ಸಂಸ್ಥೆಗಳು ಮತ್ತು ಸ್ಥಳೀಯರಿಂದ ಶೈಕ್ಷಣಿಕ ಪ್ರಗತಿಗೆ ಸಿಗುವಂತಹ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಲಭಿಸುತ್ತವೆ’ ಎಂದು ಹೇಳಿದರು.

ಪೋಷಕರು ಮಕ್ಕಳ ಕಲಿಕೆಗೆ ಉತ್ತಮ ಪ್ರೋತ್ಸಾಹ ನೀಡಬೇಕು. ಆ ಮೂಲಕ ಅವರನ್ನು ಉತ್ತಮ ಪ್ರಜೆ
ಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.

ನೀರಿನ ಸದ್ಬಳಕೆ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು. ಬೆಂಗಳೂರು ಪರಿಸರ ಸಂಘದ ಪದಾಧಿಕಾರಿಗಳಾದ ಭಾಸ್ಕರ್, ಕುಮಾರಸ್ವಾಮಿ, ತಿರುಮಲ, ಅಭಿಷೇಕ್, ಸಹಶಿಕ್ಷಕ ಆಂಜನೇಯರೆಡ್ಡಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.