ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮೇಲಿನ ದೌರ್ಜನ್ಯ ತಡೆ ಎಲ್ಲರ ಹೊಣೆ

Last Updated 18 ಫೆಬ್ರುವರಿ 2021, 8:05 IST
ಅಕ್ಷರ ಗಾತ್ರ

ವಿಜಯಪುರ: ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. 2 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡುವುದು, ಅಸಭ್ಯವಾಗಿ ವರ್ತಿಸುವುದು ಅಪರಾಧವಾಗುತ್ತದೆ ಎಂದು ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಶರಣಪ್ಪ ತಿಳಿಸಿದರು.

ಚನ್ನರಾಯಪಟ್ಟಣ ಹೋಬಳಿ ತೆಲ್ಲೋಹಳ್ಳಿಯಲ್ಲಿ ಮಕ್ಕಳ ಸಹಾಯವಾಣಿ 1098 ಗ್ರಾಮಾಂತರ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವನಹಳ್ಳಿಯ ಸ್ಪರ್ಶ ಕೊಲಾಟ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ತೆರೆದ ಮನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳ ರಕ್ಷಣೆ ಹಾಗೂ ಹಕ್ಕಿಗಾಗಿ ಪ್ರತ್ಯೇಕ ಕಾಯ್ದೆಗಳಿವೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ 2012ರಲ್ಲಿ ಪೋಕ್ಸೊ ಕಾಯ್ದೆ ಜಾರಿಗೆ ಬಂದಿದೆ. ಸಾರ್ವಜನಿಕರು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಕಂಡುಬಂದಾಗ ಪೊಲೀಸರಿಗೆ ಮಾಹಿತಿ ನೀಡಬೇಕು. ಪ್ರಾಪ್ತ ವಯಸ್ಸಿನ ಬಾಲಕಿಯರು ಮೊಬೈಲ್‌ ಮುಂತಾದ ಸಾಮಾಜಿಕ ಜಾಲತಾಣದ ಪ್ರಭಾವಕ್ಕೆ ಒಳಗಾಗಬಾರದು. ಮೊಬೈಲ್‌ ಬಳಕೆಯಿಂದ ಬಾಲಕಿಯರ ಜೀವನ ಹಾಳಾಗುತ್ತದೆ. ಮಕ್ಕಳ ರಕ್ಷಣೆಗಾಗಿರುವ ಪೋಕ್ಸೊ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದರು.

ಮಕ್ಕಳ ಸಹಾಯವಾಣಿ ಜಿಲ್ಲಾ ಘಟಕದ ಸಂಯೋಜಕ ಎಸ್.ಪಿ. ಮಂಜುನಾಥ್ ಮಾತನಾಡಿ, 14 ವರ್ಷದೊಳಗಿನ ಪ್ರತಿಯೊಂದು ಮಗು ಕಡ್ಡಾಯವಾಗಿ ಶಾಲೆಗೆ ಹೋಗಬೇಕು. ಶಾಲೆಬಿಟ್ಟ ಮಕ್ಕಳನ್ನು ಗುರ್ತಿಸಿ ಅವರನ್ನು ಶಾಲೆಗೆ ಕಳುಹಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ ರಮೇಶ್ ಮಾತನಾಡಿ, ಮಕ್ಕಳ ರಕ್ಷಣೆ, ದೌರ್ಜನ್ಯ ಸೇರಿದಂತೆ ಬಾಲ್ಯವಿವಾಹ ತಡೆಗಟ್ಟುವ ಸಲುವಾಗಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಮಕ್ಕಳ ರಕ್ಷಣೆ ಸಮಿತಿ ಇರುತ್ತದೆ. ಬಾಲ್ಯವಿವಾಹವನ್ನು ಸಂಪೂರ್ಣವಾಗಿ ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಮತ್ತು ಚೈಲ್ಡ್‌ಲೈನ್‌ ಸಂಸ್ಥೆ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯಿತಿಯಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಾಷಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಧಕೃಷ್ಣ, ಸಿ.ಆರ್.ಪಿ ಲಕ್ಷ್ಮೀನಾರಾಯಣ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಮುನಿರಾಜು, ಇಂದಿರಾ, ಮುಖ್ಯಶಿಕ್ಷಕ ಗಂಗಾಂಜನಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅನಿತಾಲಕ್ಷ್ಮಿ, ಮಕ್ಕಳ ಸಹಾಯವಾಣಿ ಸಂಚಾಲಕ ಮುರಳಿಮೋಹನ್
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT