ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಇಲ್ಲಿನ ಬಡಾವಣೆಗಳಿಗೆ ಸೌಕರ್ಯ ಕಲ್ಪಿಸಿ

ಬಿಡದಿ ಜಿಲ್ಲೆಯ ಕೈಗಾರಿಕಾ ನಗರವಾಗಿ ಕ್ಷಿಪ್ರವಾಗಿ ಬೆಳವಣಿಗೆ * ಕಸ ವಿಲೇವಾರಿಯೇ ದೊಡ್ಡ ಸಮಸ್ಯೆ
Last Updated 9 ಮೇ 2019, 19:45 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಜಿಲ್ಲೆಯ ಕೈಗಾರಿಕಾ ನಗರವಾಗಿ ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರ. ಗ್ರಾಮ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ಇಲ್ಲಿನ ಸಮಸ್ಯೆಗಳಿಗೆ ಮಿತಿಯೇ ಇಲ್ಲ. ಸರ್ಕಾರಿ ಆಸ್ಪತ್ರೆಯ ಹಿಂಭಾಗ ಇರುವ ಹೊಂಬಯ್ಯ ಮತ್ತು ಬಸವರಾಜ ಬಡಾವಣೆಗಳು ಪುರಸಭೆ ನಿರ್ವಹಣೆಯಿಂದ ವಂಚಿತವಾಗಿವೆ.

20ಕ್ಕೂ ಹೆಚ್ಚು ವರ್ಷಗಳ ಹಿಂದೆ ಈ ಬಡಾವಣೆಗಳ ರಚನೆಯಾಗಿದೆ. 60ಕ್ಕೂ ಹೆಚ್ಚು ಮನೆಗಳಿವೆ. ಸದ್ಯ ಪುರಸಭೆ ವಾರ್ಡ್ 15ರ ವ್ಯಾಪ್ತಿಯಲ್ಲಿದೆ. ರಸ್ತೆ, ಚರಂಡಿ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಲ್ಲ. ಕಸ ವಿಲೇವಾರಿಯಂತೂ ಆಗುವುದೇ ಇಲ್ಲ. ನೀರು ಸರಬರಾಜು, ವಿದ್ಯುತ್‌ ಸರಬರಾಜು ಸಮಸ್ಯೆಯೂ ಇದೆ. ಎರಡು ದಶಕಗಳ ಕಾಲ ಸಮಸ್ಯೆಗಳ ಸರಮಾಲೆಯಲ್ಲಿ ಹೈರಾಣಾಗಿರುವ ಇಲ್ಲಿ ವಾಸಿಸುವ ಕುಟುಂಬಗಳು ಬಿಡದಿ ಪುರಸಭೆಯಾದ ನಂತರ ಅಭಿವೃದ್ಧಿಯಾಗಬಹುದು ಎಂದು ನಂಬಿದ್ದರು.

ಆದರೆ, ಅವರ ನಂಬಿಕೆ ಹುಸಿಯಾಗಿದೆ. ಪುರಸಭೆ ರಚನೆಯಾಗಿ 2 ವರ್ಷ ಕಳೆದರೂ ಇಲ್ಲಿನ ಸಮಸ್ಯೆಗಳಿಗೆ ಸ್ಪಲ್ಪವೂ ಮುಕ್ತಿ ಸಿಕ್ಕಿಲ್ಲ. ಚುನಾಯಿತ ಪ್ರತಿನಿಧಿಗಳು ಕಣ್ಣೊರೆಸುವ ಮತ್ತು ಮೂಗಿಗೆ ತುಪ್ಪ ಸವರುವ ಮಾತುಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಅಧಿಕಾರಿಗಳ ಬಗ್ಗೆ ಹೇಳುವುದೇ ಬೇಡ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

ರಸ್ತೆಗಳ ಮಧ್ಯೆ ವಿದ್ಯುತ್‌ ಕಂಬಗಳು: ಬಸವರಾಜ ಬಡಾವಣೆ ಮತ್ತು ಹೊಂಬಯ್ಯ ಬಡಾವಣೆಯಲ್ಲಿ ಕೆಲ ರಸ್ತೆಗಳ ಮಧ್ಯೆ ವಿದ್ಯುತ್‌ ಕಂಬಗಳಿವೆ. ನೀರು ಪೂರೈಕೆ ವ್ಯವಸ್ಥೆಯ ಭಾಗವಾಗಿರುವ ಕೊಳವೆ ಬಾವಿ ಕೂಡ ರಸ್ತೆ ಮಧ್ಯೆ ಇದೆ. ಕೊಳವೆ ಬಾವಿಗೆ ಅಳವಡಿಸಿರುವ ಸ್ವಿಚ್‌ ಬೋರ್ಡ್‌, ಇದಕ್ಕೆ ಕಲ್ಪಿಸಿರುವ ವಿದ್ಯುತ್‌ ಸಂಪರ್ಕ ಸುಸ್ಥಿತಿಯಲ್ಲಿಲ್ಲ. ಬೆಸ್ಕಾಂ ಮತ್ತು ಪುರಸಭೆ ಎಂಜಿನಿಯರ್‌ಗಳ ನಡುವೆ ಸಮನ್ವಯತೆ ಇಲ್ಲ ಎನ್ನುತ್ತಾರೆ ಸ್ಥಳೀಯರು.

ಒಳಚರಂಡಿ ವ್ಯವಸ್ಥೆ ಇಲ್ಲ: ಹೊಂಬಯ್ಯ ಮತ್ತು ಬಸವರಾಜು ಬಡಾವಣೆಗಳು ಒಳಚರಂಡಿ ವ್ಯವಸ್ಥೆಯಿಂದ ವಂಚಿತವಾಗಿವೆ. ಚರಂಡಿಗಳ ಮೂಲಕವೇ ಎಲ್ಲಾ ಕಲ್ಮಶಗಳು ಸಾಗುತ್ತಿವೆ. ಚರಂಡಿಗಳ ಮೇಲೆ ಸ್ಲಾಬ್‌ಗಳನ್ನು ಮುಚ್ಚದೆ ಇರುವುದರಿಂದ ಗಬ್ಬು ವಾಸನೆ ಬಡಾವಣೆಗಳನ್ನು ಆವರಿಸಿರುತ್ತದೆ. ಸೊಳ್ಳೆ ಮುಂತಾದ ಕ್ರಿಮಿಕೀಟಗಳು ಆವಾಸ ಸ್ಥಾನವಾಗಿದೆ. ಅಲ್ಲದೆ, ಚರಂಡಿಗಳ ಮೂಲಕ ಸಾಗುವ ಮಲೀನ ನೀರು ನೇರ ಶೇಖರಣೆಯಾಗುತ್ತಿರುವುದು ಸರ್ಕಾರಿ ಆಸ್ಪತ್ರೆ ಆವರಣದ ಹಿಂಭಾಗದಲ್ಲಿ. ಮಲಿನ ನೀರು ಶೇಖರಣೆಯಾಗಿ ಆಸ್ಪತ್ರೆಯ ರೋಗಿಗಳನ್ನು ಬಾಧಿಸುತ್ತಿದೆ.

ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಈ ಬಡಾವಣೆಗಳಲ್ಲಿ ಕಸ ವಿಲೇವಾರಿದ್ದು ಸಮಸ್ಯೆಯೇ. ಅಪರೂಪಕ್ಕೊಮ್ಮೆ ಇಲ್ಲಿ ಕಸ ವಿಲೇವಾರಿಯಾಗುತ್ತಿದೆ. ಸಮಸ್ಯೆಗಳ ಸರಮಾಲೆಯಲ್ಲೇ ನರಳುತ್ತಿರುವ ಈ ಬಡಾವಣೆಗಳ ಕುಟುಂಬಗಳು ಪದೇ ಪದೆ ಪುರಸಭೆಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಗಮನ ಸೆಳೆದರೂ ಉಪಯೋಗವಾಗಿಲ್ಲ ಎಂದು ಸ್ಥಳೀಯರಾದ ರವಿಕುಮಾರ್ ದೂರಿದರು.

ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿದ ನಾಗರಿಕರು
ಬಿಡದಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಓವರ್‌ ಹೆಡ್‌ ನೀರಿನ ಟ್ಯಾಂಕ್‌ ಇದೆ. ಇದನ್ನು ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದ್ದವು. ಸದರಿ ಟ್ಯಾಂಕ್‌ನಿಂದಲೇ ಆಸ್ಪತ್ರೆಗೆ ಮತ್ತು ಬಸವರಾಜು ಬಡಾವಣೆಗೆ ನೀರು ಪೂರೈಕೆಯಾಗುತ್ತಿತ್ತು. ಕಾಂಕ್ರಿಟ್ ಟ್ಯಾಂಕ್‌ ನಿರ್ವಹಣೆ ಇಲ್ಲದೆ ಗಿಡಗಂಟಿಗಳು, ಬಳ್ಳಿಗಳಿಂದ ಆವೃತ್ತವಾಗಿದ್ದವು.

ಟ್ಯಾಂಕ್‌ ಸ್ವಚ್ಛತೆಗೆಆಸ್ಪತ್ರೆ, ಪುರಸಭೆ ಅಧಿಕಾರಿಗಳಾಗಲಿ ಗಮನ ಹರಿಸಲಿಲ್ಲ. ಹೀಗಾಗಿ ಬಡಾವಣೆಯ ನಾಗರಿಕರೇ ಪರಸ್ಪರ ಸಹಕಾರದಲ್ಲಿ ಸಂಪನ್ಮೂಲ ಕ್ರೂಢೀಕರಿಸಿ ಟ್ಯಾಂಕ್‌ ಸ್ವಚ್ಛಗೊಳಿಸಿದ್ದಾರೆ.

ಮೈಸೂರು ಅರಸರು ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳವಾದ್ದರಿಂದ ಈ ಸ್ಥಳಕ್ಕೆ 'ಬಿಡದಿ' ಎಂದು ಹೆಸರು ಬಂದಿದೆ ಎಂಬುದು ಇಲ್ಲಿನ ಹಿರಿಯರ ಹೇಳಿಕೆ. ಅರಸರು ವಿಶ್ರಾಂತಿ ಪಡೆಯುತ್ತಿದ್ದ ಸ್ಥಳ ಇಂದು ಸ್ವಚ್ಛ ಪರಿಸರ ಕಳೆದುಕೊಳ್ಳುತ್ತಿದೆ. ಜಿಲ್ಲಾಡಳಿತ ತಕ್ಷಣ ಇತ್ತ ಗಮನ ಹರಿಸಿ ಬಿಡದಿಯನ್ನು ಉಳಿಸಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT