ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಪಕ್ಕದ ಮರಗಳು ತೆರವುಗೊಳಿಸಲು ರೈತರ ಒತ್ತಾಯ

Published 7 ಡಿಸೆಂಬರ್ 2023, 14:45 IST
Last Updated 7 ಡಿಸೆಂಬರ್ 2023, 14:45 IST
ಅಕ್ಷರ ಗಾತ್ರ

ವಿಜಯಪುರ (ದೇವನಹಳ್ಳಿ): ವೆಂಕಟಗಿರಿಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಂಗವಾರ ಗ್ರಾಮದಲ್ಲಿ ರಾಜಕಾಲುವೆ ಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ತೆರವುಗೊಳಿಸಬಾರದು ಎಂದು ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿರುವ ರೈತರು, ಜಮೀನಿನ ಬದುಗಳಲ್ಲಿ ಹೊಂಗೆ, ಹುಣಸೆ, ತೆಂಗು, ತೇಗ, ಹಲಸಿನಮರಗಳನ್ನು ಬೆಳೆಸಿದ್ದೇವೆ. ರಾಜಕಾಲುವೆ ಅಭಿವೃದ್ಧಿಪಡಿಸುವ ನೆಪದಲ್ಲಿ 30ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಅಭಿಪ್ರಾಯ ಪಡೆಯದೆ ಏಕಾಏಕಿ ಹರಾಜು ಮಾಡಿದ್ದಾರೆ ಎಂದು ರೈತರು ದೂರಿದರು.

ಸ್ಥಳೀಯ ರೈತ ನಾಗರಾಜ್ ಮಾತನಾಡಿ, ರಾಜಕಾಲುವೆ ಮುಚ್ಚಿಕೊಂಡಿತ್ತು. ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವುದಕ್ಕೆ ಅನುಕೂಲ ಮಾಡಿಕೊಡಲು ಮನವಿ ಸಲ್ಲಿಸಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಿರುವ ಮರಗಳನ್ನು ಹರಾಜು ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಮರಗಳು ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದರು.

ರೈತ ಪಿಳ್ಳೇಗೌಡ ಮಾತನಾಡಿ, ರಾಜಕಾಲುವೆ ಅಭಿವೃದ್ಧಿಪಡಿಸಲು ನರೇಗಾ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿತ್ತು. ಕಾಲುವೆ ಎರಡೂ ಇಕ್ಕೆಲುಗಳಲ್ಲಿ ಕಲ್ಲಿನ ಕಟ್ಟಡ ನಿರ್ಮಾಣ ಮಾಡಿ ಮರಗಳ ಸುತ್ತಲೂ ಕಟ್ಟೆ ನಿರ್ಮಾಣ ಮಾಡಿದರೆ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವುದರ ಜತೆಗೆ ಮರಗಳನ್ನು ಉಳಿಸಿಕೊಳ್ಳಲು ಅವಕಾಶವಾಗಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹರಾಜು ರದ್ದುಗೊಳಿಸಿ ಮರಗಳನ್ನು ಉಳಿಸಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್ ಮಾತನಾಡಿ, ಮರಗಳು ಹರಾಜು ಮಾಡಿರುವ ವಿಚಾರದ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಮರಗಳ ಹರಾಜು ಮಾಡಿದ್ದರೆ ಹರಾಜು ರದ್ದುಗೊಳಿಸಿ ಬಿಡ್ ದಾರರ ಹಣ ಹಿಂತಿರುಗಿಸಲು ಕ್ರಮ ವಹಿಸುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ತಿಳಿಸಲಾಗುವುದು ಎಂದರು.

ಸ್ಥಳೀಯ ರೈತರಾದ ಮೋಹನ್ ಬಾಬು, ಎಸ್.ಬಿ.ಮುನಿಸೊಣ್ಣಪ್ಪ, ಚಂದ್ರಶೇಖರ್, ದೊಡ್ಡನಂಜೇಗೌಡ, ವೇಣು, ನವೀನ್ ಕುಮಾರ್, ಮುನಿನಂಜೇಗೌಡ, ಹರೀಶ್, ವರುಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT