ಮಂಗಳವಾರ, ಮಾರ್ಚ್ 9, 2021
28 °C
ದೊಡ್ಡಬಳ್ಳಾಪುರ: ಹುಲಿಕುಂಟೆಯಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ

ತ್ವರಿತ ಚಿಕಿತ್ಸೆ; ಕಾಳಜಿ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ‘ತಾಲ್ಲೂಕಿನಲ್ಲಿ 2,400 ಕೋವಿಡ್‌-19 ಪ್ರಕರಣಗಳು ದಾಖಲಾಗಿದ್ದು, ಸಾವಿನ ಪ್ರಮಾಣಗಳು ಸಹ ಹೆಚ್ಚಾಗುತ್ತಿವೆ. ಕೊರೊನಾ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗಲು ನಿರ್ಲಕ್ಷ್ಯ ಹಾಗೂ ತ್ವರಿತವಾಗಿ ಚಿಕಿತ್ಸೆ ಪಡೆಯದಿರುವುದೇ ಕಾರಣವಾಗಿದ್ದು, ಎಲ್ಲರೂ ಎಚ್ಚರ ವಹಿಸಬೇಕಿದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಸರ್ಕಾರಿ ವೈದ್ಯರಿಂದ ಅಥವಾ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಲ್ಲಿ ಸಾವಿನ ಪ್ರಕರಣ ತಡೆಗಟ್ಟಬಹುದು ಎಂದ ಅವರು, ಕೊರೊನಾ ಸೋಂಕಿನ ಕುರಿತು ನಿರ್ಲಕ್ಷ್ಯ ಮಾಡದೇ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆದಲ್ಲಿ ಸೋಂಕಿನಿಂದ ಪಾರಾಗಬಹುದು’ ಎಂದರು.

‘ಆಸ್ಪತ್ರೆ ಕಟ್ಟಡ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವುದು ಗುತ್ತಿಗೆದಾರನ ಜವಾಬ್ದಾರಿ. ಗುಣಮಟ್ಟದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತುರ್ತು ಚಿಕಿತ್ಸಾ ಸೌಲಭ್ಯ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ವಾರ್ಡ್, ಹೆರಿಗೆ ವಾರ್ಡ್ ಸೇರಿದಂತೆ ಅಧುನಿಕ ವಿಧಾನದ ಸೌಲಭ್ಯವನ್ನು ಈ ಆಸ್ಪತ್ರೆ ಒಳಗೊಂಡಿರಲಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮಾತನಾಡಿ, ‘ಹುಲಿಕುಂಟೆ ವ್ಯಾಪ್ತಿಗೆ ಬಹುದಿನಗಳ ಕೊರತೆಯಾಗಿದ್ದ ಸರ್ಕಾರಿ ಆಸ್ಪತ್ರೆಗೆ ನೂತನ ಕಟ್ಟಡದ ಕೊರತೆ ಕೆಲವೇ ದಿನಗಳಲ್ಲಿ ನೀಗಲಿದೆ. ₹1.80 ಕೋಟಿ ಅನುದಾನ ಹಾಗೂ ಹಳೆಯ ಆಸ್ಪತ್ರೆಯ ₹32 ಲಕ್ಷ ಬಾಕಿ ಸೇರಿ ಸುಮಾರು ₹ 2.12 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕಟ್ಟದಲ್ಲಿ ಈ ವ್ಯಾಪ್ತಿಯ ಜನತೆಗೆ ಉತ್ತಮ ಚಿಕಿತ್ಸಾ ಸೌಲಭ್ಯ ದೊರಕಲಿದೆ’ ಎಂದರು.

ಇದೇ ವೇಳೆ ಸುಮಾರು ₹ 36 ಲಕ್ಷ ಅನುದಾನದಲ್ಲಿ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಸಹ ಚಾಲನೆ ನೀಡಲಾಯಿತು. ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಜಯರಾಂ, ಉಪಾಧ್ಯಕ್ಷೆ ಪದ್ಮಾವತಿ ಅಣ್ಣಯ್ಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ಮುಖಂಡರಾದ ಅಪಕಾರನಹಳ್ಳಿ ಶ್ರೀನಿವಾಸ್, ರಾಜಗೋಪಾಲ್‌, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಮಂಜುಳದೇವಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು