ಆನೇಕಲ್: ಬನ್ನೇರುಘಟ್ಟ ಉದ್ಯಾನದಲ್ಲಿ ಜಿಂಕೆಗಳ ಸರಣಿ ಸಾವು ಮುಂದುವರೆದಿದ್ದು, ಕಳೆದ ನಾಲ್ಕು ದಿನಗಳಿಂದ ನಾಲ್ಕು ಜಿಂಕೆಗಳು ಮೃತಪಟ್ಟಿವೆ. ಇದರೊಂದಿಗೆ ಜಿಂಕೆಗಳ ಸಾವಿನ ಸಂಖ್ಯೆ 23ಕ್ಕೆ ಏರಿಕೆ ಆಗಿದೆ.
ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಉದ್ಯಾನದಿಂದ 37 ಚುಕ್ಕೆ ಜಿಂಕೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಆಗಸ್ಟ್ 17ರಂದು ತರಲಾಗಿತ್ತು. ಆಗಸ್ಟ್ 22ರಿಂದ ಸೆಪ್ಟಂಬರ್ 19ರವರೆಗೆ 13 ಜಿಂಕೆ ಮೃತಪಟ್ಟಿದ್ದವು. ಸೆ.21ರ ವೇಳೆಗೆ ಆ ಸಂಖ್ಯೆ 19ಕ್ಕೆ ಏರಿಕೆಯಾಗಿತ್ತು.
ಅರಣ್ಯ ಸಚಿವ ಈಶ್ವರ ಖಂಡ್ರೆ ಉದ್ಯಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೋಂಕಿನಿಂದ ಬಳಲುತ್ತಿರುವ ಜಿಂಕೆಗಳ ಸ್ಥಿತಿಯನ್ನು ಸುಧಾರಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು.
ಪಶುವೈದ್ಯಕೀಯ ಆರೈಕೆಯ ಹೊರತಾಗಿಯೂ ನಾಲ್ಕು ಜಿಂಕೆಗಳು ಮೃತಪಟ್ಟಿವೆ. ನುರಿತ ಪಶುವೈದ್ಯರ ತಂಡವು ಕ್ವಾರೆಂಟೈನ್‌ನಲ್ಲಿರುವ ಉಳಿದ ಜಿಂಕೆಗಳಿಗೆ ಅಗತ್ಯ ವೈದ್ಯೋಪಚಾರ ಮತ್ತು ಆರೈಕೆ ಮಾಡುತ್ತಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.