ಸಮುದಾಯದ ಅಭಿವೃದ್ಧಿಗೆ ಸರ್ಕಾರ ನೆರವು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್

ದೇವನಹಳ್ಳಿ: ‘ತಮ್ಮ ವೃತ್ತಿ ಮೂಲಕ ಸಮಾಜದ ಪ್ರೀತಿಗೆ ಪಾತ್ರವಾಗಿರುವ ಸವಿತಾ ಸಮಾಜದ ಭವನ ಸೇರಿದಂತೆ ಅಭಿವೃದ್ಧಿಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ಎಕರೆ ಭೂಮಿ ಗುರುತಿಸಿ 15 ದಿನದೊಳಗೆ ಆದೇಶ ಪತ್ರ ನೀಡಲು ಜಿಲ್ಲಾಧಿಕಾರಿ ಕ್ರಮವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸೂಚಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ರಾಜ್ಯಮಟ್ಟದ ಸವಿತಾ ಮಹರ್ಷಿ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಅನಾದಿ ಕಾಲದಿಂದಲೂ ಶುಭ ಕಾರ್ಯಗಳಿಗೆ ಮಂಗಳವಾದ್ಯ ನುಡಿಸುವ ಮೂಲಕ ದೇವರ ಪ್ರೀತಿಗೂ ಈ ಸಮುದಾಯ ಪಾತ್ರವಾಗಿದೆ. ಇಂತಹ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.
‘ಸವಿತಾ ಬಂಧು; ನಾವೆಲ್ಲಾ ಒಂದು’ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆರಂಭಿಸಿದ ಸಚಿವರು, ಈ ಸಮುದಾಯದಲ್ಲಿ 27 ಉಪ ಜಾತಿಗಳಿವೆ. ಕ್ಷೌರಿಕ ವೃತ್ತಿ ಮಾಡುವ ಮತ್ತು ದೇವರ ಆರಾಧನೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಮಂಗಳವಾದ್ಯ ಇಲ್ಲದೆ ಯಾವುದೇ ಕಾರ್ಯಕ್ರಮ ನಡೆಯಲು ಸಾಧ್ಯವಿಲ್ಲ. ಇಂತಹ ಸಮುದಾಯಕ್ಕೆ ಅಗತ್ಯ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮುದಾಯಕ್ಕೆ ಬಲ ನೀಡುವ ಕೆಲಸ ಸರ್ಕಾರದಿಂದ ಆಗಲಿದೆ. ಸರ್ಕಾರ ಸಮಾಜದ ಪರವಿದೆ ಎಂದು ಘೋಷಿಸಿದರು.
ಸಮುದಾಯಕ್ಕೆ ವಿಶೇಷ ಸೌಲಭ್ಯ ನೀಡುವ ಉದ್ದೇಶದಿಂದ ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಆರಂಭದಲ್ಲಿ ಕೇವಲ ₹ 2 ಕೋಟಿ ಅನುದಾನವನ್ನು ಮಾತ್ರ ಈ ನಿಗಮಕ್ಕೆ ನೀಡಲಾಗುತ್ತಿತ್ತು. ಈಗ ₹ 10 ಕೋಟಿ ನೀಡಲಾಗಿದೆ. ನಿಗಮದ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಲು ಮುಖಂಡರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾಮವೇದ ರಚಿಸಿದ ಸವಿತಾ ಮಹರ್ಷಿ: ನಾಲ್ಕು ವೇದಗಳಲ್ಲಿ ಸಂಗೀತಕ್ಕಾಗಿ ಸಾಮವೇದ ಇದೆ. ಇದರಲ್ಲಿ 1,540 ಶ್ಲೋಕಗಳಿವೆ. ಅರ್ಥಗರ್ಭಿತವಾಗಿ ಸಾಮವೇದ ರಚಿಸಿದ್ದು ಸವಿತಾ ಮಹರ್ಷಿಯ ಹೆಗ್ಗಳಿಕೆ ಹೇಳಿದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಭಾರತದಲ್ಲಿ ಹಲವು ಚಿಕ್ಕ ಚಿಕ್ಕ ಸಮುದಾಯವನ್ನು ನಿರ್ಲಕ್ಷಿಸಲಾಗಿದೆ. 21ನೇ ಶತಮಾನದಲ್ಲಿಯೂ ಶ್ರಮ ಸಂಸ್ಕೃತಿಯ ಸಮುದಾಯಗಳು ಹಿಂದುಳಿದಿರುವುದು ವಿಷಾದನೀಯ ಎಂದರು.
ರಾಜ್ಯಮಟ್ಟದ ಕಾರ್ಯಕ್ರಮವನ್ನು ಇನ್ನೂ ಅದ್ದೂರಿಯಾಗಿ ಆಚರಣೆ ಮಾಡಬೇಕಿತ್ತು. ಜಿಲ್ಲಾಡಳಿತ ಸವಿತಾ ಸಮುದಾಯಕ್ಕೆ ಭೂಮಿ ಒದಗಿಸಿದರೆ ₹ 5 ಲಕ್ಷ ಅನುದಾನ ನೀಡಿ ಭವನ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಆರ್. ಲತಾ, ಸಮಾಜದಲ್ಲಿ ಎಲ್ಲಾ ಸಮುದಾಯದ ಜೊತೆಗೆ ಸವಿತಾ ಸಮಾಜದವರು ಸಂಪರ್ಕದಲ್ಲಿರುತ್ತಾರೆ. ಎಲ್ಲರೊಂದಿಗೆ ಸ್ನೇಹಜೀವಿಗಳಾಗಿದ್ದಾರೆ. 15 ದಿನಗಳಿಗೂ ಮೊದಲೇ 1 ಎಕರೆ ಭೂಮಿ ಮಂಜೂರು ಮಾಡಲಾಗುವುದು. ಶಾಸಕರು ಆರ್ಥಿಕ ನೆರವು ನೀಡಿದರೆ ಅಂದೇ ಭೂಮಿಪೂಜೆಯನ್ನೂ ನೆರವೇರಿಸಲಾಗುವುದು ಎಂದು
ತಿಳಿಸಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇಗುಲದಿಂದ ಅಂಬೇಡ್ಕರ್ ಭವನದವರೆಗೂ ಬೆಳ್ಳಿರಥದಲ್ಲಿ ಸವಿತಾ ಮಹರ್ಷಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ಪೂರ್ಣಕುಂಭ ಕಳಶ ಹೊತ್ತ ಮಹಿಳೆಯರು, ಕಲಾವಿದರು, ವಾದ್ಯಗೋಷ್ಠಿ ಕಲಾವಿದರು ಪಾಲ್ಗೊಂಡಿದ್ದರು.
ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷ ನರೇಶ್ ಕುಮಾರ್, ಸವಿತಾ ಸಮಾಜದ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯಾಧ್ಯಕ್ಷ ಕಿರಣ್ ಕುಮಾರ್, ಮುತ್ತುರಾಜ್, ತ್ಯಾಗರಾಜ್, ಪುರಸಭಾ ಅಧ್ಯಕ್ಷೆ ಗೋಪಮ್ಮ, ಉಪಾಧ್ಯಕ್ಷೆ ಕೆ. ಗೀತಾ ಶ್ರೀಧರ್, ತಹಶೀಲ್ದಾರ್ ಶಿವರಾಜ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.