ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಟ್ರಸ್ಟ್‌ ಕಾಯ್ದೆಗೆ ಸರ್ಕಾರ ಚಿಂತನೆ: ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ತೆರಿಗೆ ಸಲಹೆಗಾರರಿಗೆ ಭರವಸೆ
Last Updated 28 ನವೆಂಬರ್ 2021, 5:44 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ದೇಶದ ಪ್ರಗತಿಯಲ್ಲಿ ತೆರಿಗೆ ಪದ್ಧತಿಯ ಪಾತ್ರ ಮಹತ್ವದ್ದಾಗಿದೆ. ಶ್ರೀಮಂತರು ಹಾಗೂ ಬಡವರ ಮಧ್ಯೆ ಅಂತರ ಕಡಿಮೆ ಮಾಡಬೇಕಿದ್ದು, ಉಳ್ಳವರು ಇಲ್ಲದವರಿಗೆ ನೀಡಬೇಕಿದೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನಗರದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಶನಿವಾರ ನಡೆದ ರಾಷ್ಟ್ರೀಯ ತೆರಿಗೆ ಸಲಹೆಗಾರರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಕಳಕಳಿಯಿಂದ ತೆರಿಗೆದಾರರಿಗೆ ಅಗತ್ಯ ಮಾಹಿತಿ ನೀಡಿ ತೆರಿಗೆ ಸೋರಿಕೆಯಾಗದಂತೆ ನೋಡಿಕೊಳ್ಳಬೇಕಿದೆ.ಬಾಂಬೆ ಟ್ರಸ್ಟ್ ಕಾಯ್ದೆ ಉಳಿಸಿಕೊಂಡಿಲ್ಲದಿರುವುದು ದುರದೃಷ್ಟಕರ. ಇದರಿಂದ ತೆರಿಗೆ ಸಲಹೆಗಾರರಿಗೆ ಆಗಿರುವ ತೊಂದರೆ ಬಗ್ಗೆ ನನ್ನ ಸಹಮತವಿದೆ. ರಾಜ್ಯಕ್ಕೆ ಪ್ರತ್ಯೇಕ ಟ್ರಸ್ಟ್ ಕಾಯ್ದೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಕೆಲವು ಬಾರಿ ಅಮಾಯಕರಿಗೂ ತೆರಿಗೆ ಹೊರೆಯಾಗಬಹುದು. ದೇಶದ ತೆರಿಗೆ ವ್ಯವಸ್ಥೆ ಸದೃಢವಾಗಿದ್ದರೆ ಪ್ರಗತಿಯು ವೇಗ ಪಡೆಯಲಿದೆ. ಎಲ್ಲರೂ ತೆರಿಗೆ ಕಟ್ಟುವಂತಾದರೆ ತೆರಿಗೆಯ ಹಂತಗಳನ್ನು ಕಡಿಮೆ ಮಾಡಬಹುದಾಗಿದೆ ಎಂದು
ಹೇಳಿದರು.

ತೆರಿಗೆ ಸಲಹೆಗಾರರೇ ತನಿಖೆ ಮತ್ತು ಸಮಾಲೋಚಕರಾಗುವುದು ಸರಿಯಲ್ಲ. ನಿರ್ಧಾರ ಸಹ ಒಬ್ಬರೇ ಮಾಡುವುದು ಸರಿಯಲ್ಲ. ನಿಮ್ಮ ಸಲಹೆ ಇದ್ದು, ಅಧಿಕಾರಿಗಳು ಕ್ರಮಕೈಗೊಳ್ಳಲಿ. ಈಗಾಗಲೇ ತೆರಿಗೆದಾರರು ನೇರವಾಗಿ ತೆರಿಗೆ ಪಾವತಿಸುವಂತೆ ತೆರಿಗೆ ಸರಳೀಕರಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಂಘ, ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ತೆರಿಗೆ ಸಲಹೆಗಾರರೇ ಮಾಡುವುದು ಸಮ್ಮತವಲ್ಲ. ಸಂಘ, ಸಂಸ್ಥೆಗಳ ಲೆಕ್ಕ ಪರಿಶೋಧನೆಯನ್ನು ಪರಿಣತರೇ ಮಾಡುವುದು ಸೂಕ್ತ. ಪ್ರತಿದಿನವೂ ಕಲಿಕೆಯ ದಿನವಾಗಬೇಕಿದ್ದು, ತೆರಿಗೆ ಸಲಹೆಗಾರರಿಗೂ ಇದು ಅನ್ವಯಿಸುತ್ತದೆ ಎಂದರು.

ಅಮಾಯಕರಿಗೆ ತೆರಿಗೆ ಬಗ್ಗೆ ಗೊತ್ತಿಲ್ಲದೇ ದಂಡ ಕಟ್ಟುವ ಸಂದರ್ಭ ಎದುರಾಗಿದೆ. ಇಂತಹವರನ್ನು ನೀವು ರಕ್ಷಿಸಬೇಕಿದೆ. ಟ್ರಸ್ಟ್ ಕಾಯ್ದೆಗೆ ತಿದ್ದುಪಡಿ, ಸರಕು ಸೇವಾ ತೆರಿಗೆಯಲ್ಲಿ(ಜಿಎಸ್‍ಟಿ) ಕೆಲವು ಮಾರಾಟ ವಸ್ತುಗಳ ತೆರಿಗೆ ಬಗ್ಗೆ ರಾಜ್ಯಗಳಿಗೆ ಇರುವ ಗೊಂದಲ ಕುರಿತು ಚರ್ಚೆ ನಡೆಯುತ್ತಿದ್ದು, ಶೀಘ್ರವೇ ಸಮಸ್ಯೆಗಳು ಬಗೆಹರಿಯಲಿವೆಎಂದರು.

ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ಸರ್ಕಾರ ಹಾಗೂ ದೇಶದ ಪ್ರಜೆಗಳ ಮಧ್ಯೆ ಕೊಂಡಿಯಂತೆ ಇರುವ ತೆರಿಗೆ ಸಲಹೆಗಾರರು ಹಾಗೂ ಲೆಕ್ಕ ಪರಿಶೋಧಕರು ತಮ್ಮ ಹೊಣೆಗಾರಿಕೆಯನ್ನು ಕಾನೂನಿನಡಿ ನಿರ್ವಹಿಸಬೇಕಿದೆ. ತೆರಿಗೆಯಿಂದಲೇ ಸರ್ಕಾರದ ಕೆಲಸ ನಡೆಯಬೇಕಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ₹ 64 ಕೋಟಿ ಜಿಎಸ್‍ಟಿ ಸಂಗ್ರಹವಾಗುತ್ತಿದೆ ಎಂದು ಹೇಳಿದರು.

ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್. ನಂಜುಂಡಪ್ರಸಾದ್ ಅಧ್ಯಕ್ಷತೆವಹಿಸಿದ್ದರು. ಚಾಮರಾಜನಗರದ ವೆಂಕಟೇಶ್ ಅವರಿಗೆ ‘ವೃಕ್ಷಮಿತ್ರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯದ ಹಿರಿಯ ತೆರಿಗೆ ಸಲಹೆಗಾರರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷೆ ಎಸ್‌. ಸುಧಾರಾಣಿ ಲಕ್ಷ್ಮೀನಾರಾಯಣ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಬಿ.ವಿ. ಮುರಳಿಕೃಷ್ಣ, ಎ.ವಿ. ಚೇತನ್, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಕಾರ್ಯದರ್ಶಿ ವಿಷ್ಣುತೀರ್ಥ ಜಮಖಂಡಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪಿ. ಲಕ್ಷ್ಮೀನಾರಾಯಣ, ತೆರಿಗೆ ಸಲಹೆಗಾರ ಎಸ್.ಡಿ. ಪರ್ವತಯ್ಯ, ತೆರಿಗೆ ಸಲಹೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಎನ್. ಪ್ರಸಾದ್, ಉಪಾಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕ ಎ.ಎನ್. ಜಗದೀಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT