ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸೌಲಭ್ಯ ಕಾಣದ ಕುಗ್ರಾಮಗಳು

Last Updated 1 ಆಗಸ್ಟ್ 2019, 14:42 IST
ಅಕ್ಷರ ಗಾತ್ರ

ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಬೆಂಡಿಗಾನಹಳ್ಳಿ- ನಂದಗುಡಿ, ಬೆಂಡಿಗಾನಹಳ್ಳಿ-ಹಿಂಡಿಗನಾಳ ನಡುವೆ ಇರುವ ಗ್ರಾಮಗಳು ಇಂದಿಗೂ ಬಸ್‌ ಸೌಲಭ್ಯಗಳಿಲ್ಲದ ಕುಗ್ರಾಮಗಳಾಗಿವೆ.

ಸುಮಾರು 25 ವರ್ಷಗಳ ಹಿಂದೆ ಸೂಲಿಬೆಲೆ ಇಂದ ನಂದಗುಡಿಗೆ ಅನುಪಹಳ್ಳಿ, ಚೀಮಸಂದ್ರ, ರಾಮ ಗೋವಿಂದಪುರ ಮಾರ್ಗವಾಗಿ ಬೆಳಿಗ್ಗೆ ಮತ್ತು ಸಂಜೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಬೆಂಗಳೂರು 3 ನೇ ಘಟಕದ ಬಸ್‌ ಸಂಚರಿಸುತ್ತಿತ್ತು. ಕೆಲವು ವರ್ಷಗಳಿಂದ ಬಿ.ಎಂ.ಟಿ.ಸಿ. ಬಸ್‌ಗಳು ಹೊಸಕೋಟೆ ವ್ಯಾಪ್ತಿಯಲ್ಲಿ ಸಂಚರಿಸಲು ಪ್ರಾರಂಭವಾದಾಗ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುವುದನ್ನು ನಿಲ್ಲಿಸಲಾಯಿತು.

ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಬಸ್‌ಗಳು ಸ್ಥಗಿತಗೊಂಡ ನಂತರ ಹೊಸಕೋಟೆ ಇಂದ ನಂದಗುಡಿಗೆ ಸೂಲಿಬೆಲೆ, ಬೆಂಡಿಗಾನಹಳ್ಳಿ, ಚೀಮಸಂದ್ರ, ರಾಮ ಗೋವಿಂದಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಬಿ.ಎಂ.ಟಿ.ಸಿ. ಬಸ್‌ ಸಂಚರಿಸುತ್ತಿದ್ದು ಕೆಲವು ವರ್ಷಗಳಿಂದ ಅದು ನಿಂತುಹೋಗಿದೆ.

ಸುತ್ತಮುತ್ತಲ ಗ್ರಾಮಗಳಿಂದ ಹಲವಾರು ವಿದ್ಯಾರ್ಥಿನಿಯರು ಹೊಸಕೋಟೆ, ಕೃಷ್ಣರಾಜಪುರ, ಬೆಂಗಳೂರು, ಚಿಂತಾಮಣಿ, ಕೋಲಾರದ ಕಾಲೇಜುಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರತಿನಿತ್ಯ ಹೋಗಿಬರುತ್ತಿದ್ದಾರೆ. ಆದರೆ ಸರ್ಕಾರಿ ಸಂಸ್ಥೆಯ ಬಸ್‌ ಇಲ್ಲದ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರನ್ನು ಕಾಡಿ ಬೇಡಿ ಡ್ರಾಪ್ ತೆಗೆದುಕೊಂಡು ಹೋಗಬೇಕಾಗಿದೆ ಎಂದು ಸ್ಥಳೀಯ ಗ್ರಾಮದ ವಿದ್ಯಾರ್ಥಿನಿಯರು ಅಳಲನ್ನು ಹೇಳಿಕೊಂಡಿದ್ದಾರೆ.

ಹಳೆವೂರು ಗ್ರಾಮದ ನಿವಾಸಿಯೊಬ್ಬರು ಬಸ್‌ ಸೌಲಭ್ಯ ಇಲ್ಲದಿರುವ ಬಗ್ಗೆ ಹೇಳಿಕೊಳ್ಳುತ್ತ, ಸೂಲಿಬೆಲೆ ಗ್ರಾಮಕ್ಕೆ ಅನುಪಹಳ್ಳಿ ಮಾರ್ಗವಾಗಿ ಹೋದರೆ ಕೇವಲ 10 ಕಿ.ಮೀ ಆಗುತ್ತದೆ. ಆದರೆ ಈ ಮಾರ್ಗದಲ್ಲಿ ಬಸ್ ಇಲ್ಲದ ಕಾರಣ ನಂದಗುಡಿ, ಹೊಸಕೋಟೆ ಅಥವಾ ನಂದಗುಡಿ, ಎಚ್.ಕ್ರಾಸ್, ಜಂಗಮಕೋಟೆ ಮಾರ್ಗವಾಗಿ 40 ಕಿ.ಮೀ ಸುತ್ತು ಸಾಗಬೇಕಾಗುತ್ತದೆ. ಇದರಿಂದ ಬಡವರು, ರೈತರು ತೊಂದರೆಗೆ ಒಳಗಾಗಿದ್ದಾರೆ ಎಂದರು.

ಬಸ್‌ ಮಾರ್ಗವನ್ನು ರದ್ದುಪಡಿಸಿರುವ ಹೊಸಕೋಟೆಯ ಬಿ.ಎಂ.ಟಿ.ಸಿ. ಘಟಕ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ, ‘ಈ ಮಾರ್ಗದಲ್ಲಿ ಆದಾಯವು ಕಿ.ಮೀ ಗೆ ₹ 10 ಕಡಿಮೆ ಇರುವ ಕಾರಣ ಮಾರ್ಗವನ್ನು ರದ್ದುಪಡಿಸಲಾಗಿದೆ ಎನ್ನುತ್ತಾರೆ. ಸಂಸ್ಥೆಗೆ ಸರ್ಕಾರದಿಂದ ಬರುವ ಅನುದಾನ ವಿದ್ಯಾರ್ಥಿ ಪಾಸುಗಳಿಗೆ ಸರಿಹೋಗುತ್ತದೆ. ಸಂಸ್ಥೆಯೇ ಆದಾಯ ಗಳಿಸಿಕೊಂಡು ಸಾಗಬೇಕು. ನಾವೇ ದುಡಿದು ನಮ್ಮ ಸಂಬಳ ಪಡೆದುಕೊಳ್ಳುವ ಪರಿಸ್ಥಿತಿ ಇದೆ. ಆದ್ದರಿಂದ ಆದಾಯ ಕಡಿಮೆ ಬರುವ ಮಾರ್ಗಗಳನ್ನು ರದ್ದುಪಡಿಸಲಾಗಿದೆ’ ಎಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT