ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ | ಅಪಾಯಕಾರಿ ಸಿಡಿಮದ್ದು, ಬೀಳುವುದೇ ಅಂಕುಶ ?

ಬಳ್ಳಾರಿ ಕಲ್ಲಿದ್ದಲು ಗಣಿ ಮೀರಿಸುವಷ್ಟು ಸ್ಫೋಟಕ ಬಳಕೆ * ತೈಲಗೆರೆ ಸುತ್ತಮುತ್ತಲ ಜನರ ಆತಂಕ
ಅಕ್ಷರ ಗಾತ್ರ

ದೇವನಹಳ್ಳಿ: ಇಲ್ಲಿನ ತೈಲಗೆರೆ ಗಣಿಯಲ್ಲಿ ಬಳ್ಳಾರಿ ಕಲ್ಲಿದ್ದಲು ಗಣಿಯನ್ನು ಮೀರಿಸುವಷ್ಟು ಸ್ಫೋಟಕ ಬಳಕೆ ಮಾಡಲಾಗುತ್ತಿದೆ. ಬಹುತೇಕ ಗಣಿಗಳು ರಾಜಕಾರಣಿಗಳ ಆಪ್ತರಿಗೆ ಸೇರಿದವು. ಇದಕ್ಕೆ ಅಂಕುಶ ಹಾಕುವವರು ಯಾರು ಎನ್ನುವುದೇ ಸಾರ್ವಜನಿಕರ ಯಕ್ಷ ಪ್ರಶ್ನೆ.

ಇಲ್ಲಿ ಮರಳು ದಂದೆ ನಂತರ ಗಣಿಗಾರಿಕೆಯ ಸ್ಫೋಟಕ ಸ್ಥಳೀಯರ ಹೃದಯ ಸ್ತಂಭನವಾಗುವಂತೆ ಮಾಡಿದೆ. ನೂರಾರು ಮೀಟರ್ ಉದ್ದಕ್ಕೂ ಕಲ್ಲುಗಳ ಚೂರು ಸಿಡಿದು ರೈತರ ಹೊಲಗಳತ್ತ ಹಾರಿ ಬೀಳುತ್ತವೆ. ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮತ್ತು ಮಾಲಿನ್ಯ ಇಲಾಖೆಗೆ ದೂರು ನೀಡಿದರೆ ಅಧಿಕಾರಿಗಳು ಮೊದಲೇ ಗಣಿ ಸ್ಥಳ ಪರಿಶೀಲನೆಗೆ ಬರುವುದಾಗಿ ಖುದ್ದು ಮಾಹಿತಿ ನೀಡುತ್ತಾರೆ. ಭೇಟಿಗೆ ಬಂದಾಗ ಗಣಿಗಾರಿಕೆ ಮತ್ತು ಲಾರಿಗಳ ಸಂಚಾರ ಸ್ಥಗಿತಗೊಳಿಸಲಾಗುತ್ತದೆ.

2017 ಏ.24ರಂದು ಗಣಿಗಾರಿಕೆ ಕುಂದುಕೊರತೆ ಸಭೆ ದೇವನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಂದಿನ ಜಿಲ್ಲಾಧಿಕಾರಿ ನಡೆಸಿದಾಗ ರೈತರು ಅಕ್ರೋಶ ವ್ಯಕ್ತಪಡಿಸುತ್ತಾರೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಸಿರು ಸೇನೆ ರಾಜ್ಯ ಘಟಕ ಅಧ್ಯಕ್ಷ ಕೆ.ಎಸ್.ಹರೀಶ್ ಹಾಗೂ ಕೊಯಿರಾ ಗ್ರಾಮದ ಚಿಕ್ಕೇಗೌಡ, ಬೈಯಾಪ ವ್ಯಾಪ್ತಿಯ 25ಕಿ.ಮೀ ಸರಹದ್ದಿನಲ್ಲಿ ಬರುವ ತೈಲಗೆರೆ ಸ.ನಂ.110 ರಲ್ಲಿಅಕ್ರಮ ಗಣಿಗಾರಿಕೆ ಮೇಲೆ ದಾಳಿ ನಡೆಸಿದ ನಂತರವೂ ಅದೇ ಜಾಗದಲ್ಲಿ ಗಣಿಗಾರಿಕೆ ಅನುಮತಿ ನೀಡಲಾಗಿದೆ. ಗಣಿಗಾರಿಕೆ ನಿಯಮ ಮೀರಿ 250ಅಡಿ ಅಳದವರೆಗೆ ಕೊಳವೆ ಬಾವಿಯಂತೆ ಕೊರೆದು ಕಲ್ಲು ಸ್ಫೋಟಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮುಂದೆ ಅಕ್ರೋಶ ವ್ಯಕ್ತಪಡಿಸುತ್ತಾರೆ.

ಮುಂದುವರೆದು ಹತ್ತಾರು ಗ್ರಾಮಗಳಲ್ಲಿರುವ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಸತತ 20 ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿದ್ದು ಕೃಷಿ ಚಟುವಟಿಕೆ ಮಾಡುವಂತಿಲ್ಲ. ದೂಳಿನ ತಾಜ್ಯ ಬೇರೆ. ರೈತರು ಬದುಕ ಬೇಕೋ ಸಾಯಬೇಕೋ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಇದನ್ನು ವಿರೋಧಿಸಿ ಕೆಲ ರೈತರು ದಯಾ ಮರಣಕ್ಕಾಗಿ ರಾಷ್ಟ್ರಪತಿಗೆ ಮನವಿ ಮಾಡುತ್ತಾರೆ. ಈ ಅಕ್ರಮ ಪ್ರಶ್ನೆ ಮಾಡಲು ಹೋದ ರೈತರ ಮೇಲೆ ಕೌಂಟರ್ ದೂರು ದಾಖಲಾಗುತ್ತದೆ. ಪ್ರಕೃತಿ ಸಂಪತ್ತು ಬಗ್ಗೆ ಪ್ರಶ್ನಿಸಿದರೆ ರಕ್ಷಣೆ ಇಲ್ಲವಾಗಿದೆ ಎಂದು ಅಂದಿನ ಸಭೆಯಲ್ಲಿ ಕಿಡಿಕಾರಿದ್ದರು.

ಮಧ್ಯೆ ಪ್ರವೇಶಿಸಿದ್ದ ಅಂದಿನ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಹೊಸಕೋಟೆ ಕೆಂಚೇಗೌಡ, ರೈತರು ಒಂದೆರಡು ಗುಂಟೆ ಖರೀದಿಸುವ ಜಮೀನಿಗೆ ನಮೂನೆ 79 ಎ ಮತ್ತು ಬಿ ಅಡಿಯಲ್ಲಿ ನೋಟಿಸ್ ನೀಡಿ ಅಲೆದಾಡಿಸುತ್ತೀರಾ ? ಕೆರೆಗಳ ಅಕ್ಕಪಕ್ಕ ಜಮೀನು ಇರುವ ರೈತರು ಪಕ್ಕದಲ್ಲಿ ಒಂದೆರಡು ಗುಂಟೆ ಒತ್ತವರಿ ಮಾಡಿದ್ದರೆ ರೈತರಿಗೆ ಮಾಹಿತಿ ನೀಡದೆ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡುತ್ತೀರಾ. ಇದನ್ನು ತಡೆಯಲು ಸಾಧ್ಯವಾಗುವುದಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ರೈತರ ನಿರಂತರ ಪ್ರಶ್ನೆಗಳಿಂದ ಕಸಿವಿಸಿಕೊಂಡ ಅಂದಿನ ಜಿಲ್ಲಾಧಿಕಾರಿ, ಅಸಮರ್ಪಕ ಉತ್ತರ ನೀಡುವ ಮೂಲಕ ಜಾರಿಕೊಂಡಿದ್ದರು ಎಂದು ಎನ್ನುತ್ತಾರೆ ಆರ್.ಟಿ.ಐ ಕಾರ್ಯಕರ್ತ ಆಂಜಿನಪ್ಪ.

ವಿಪರ್ಯಾಸವೆಂದರೆ ವಿಶ್ವನಾಥಪುರ ಪೊಲೀಸ್ ಸಬ್ ಇ‌ನ್‌ಸ್ಪೆಕ್ಟರ್ ಆಗಿದ್ದ ಟಿ.ಆರ್.ಶ್ರೀನಿವಾಸ್‌ ಅವರಿಗೆ ತನಿಖೆಗೆ ಅವಕಾಶ ನೀಡದೆ ಡಿ.ವೈ.ಎಸ್.ಪಿ ವಿಜಯಪುರ ವೃತ್ತ ನಿರೀಕ್ಷರಿಗೆ ಆರೋಪಿಗಳ ಕಡತವನ್ನು ನೀಡಿದ್ದು ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಮತ್ತೊಂದಡೆ ಪಿ.ಎಸ್.ಐ ಶ್ರೀನಿವಾಸ್ ಮತ್ತು ಸಿ.ಪಿ.ಐ ಮಂಜುನಾಥ್ ನಡುವೆ ಹೊಂದಾಣಿಕೆ ಇರಲಿಲ್ಲ. ತನಿಖೆ ಯಾವ ಹಂತಕ್ಕೆ ತಲುಪಿತು ಎಂಬುದೇ ನಿಗೂಢವಾಗಿದೆ. ಇದರ ಬಗ್ಗೆ ಯಾರು ಬಾಯಿ ಬಿಡುವ ಸ್ಥಿತಿಯಲ್ಲಿ ಇಲ್ಲ ಎನ್ನುತ್ತಾರೆ ಆರ್.ಟಿ.ಐ ಕಾರ್ಯಕರ್ತ ಚಿಕ್ಕೇಗೌಡ.

ಸ್ಫೋಟಕ ಬಳಸಿ ಗಣಿಗಾರಿಕೆ: ಬಂಧನ
ತೈಲಗೆರೆ ಮತ್ತು ಮುದ್ದನಾಯಕನಹಳ್ಳಿ ಸುತ್ತಮುತ್ತ ರಾಸಾಯನಿಕ ಸ್ಫೋಟಕ ಬಳಸಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಅರಿತ ಅಂದಿನ ವಿಶ್ವನಾಥಪುರ ಪೊಲೀಸರು ಅಕ್ರಮ ಕಲ್ಲು ಗಣಿ ನಡೆಸಲು ಲಾರಿಯಲ್ಲಿ ಸಾಗಣೆ ಮಾಡುತ್ತಿದ್ದ ₹25.5 ಲಕ್ಷ ಮೌಲ್ಯದ ಸ್ಫೋಟಕ ವಸ್ತುಗಳನ್ನು 2018 ಮಾ.26ರಂದು ರಾತ್ರಿ ವಶಪಡಿಸಿಕೊಂಡಿದ್ದರು. ಪರವಾನಗಿ ಇಲ್ಲದೆ 200 ಜಿಲೆಟಿನ್ ಕಡ್ಡಿ ಮತ್ತು ಲಘು ಸ್ಫೋಟಕ ಉಪಕರಣಗಳ 38 ಬಾಕ್ಸ್‌ಗಳನ್ನುಸಾಗಿಸಲಾಗಿತ್ತಿತ್ತು. ಸ್ಫೋಟಕಗಳ ವಸ್ತುಗಳ ಮಾಲೀಕ ಚಂದ್ರಶೇಖರ್, ಲಾರಿ ಚಾಲಕರಾದ ಬಾಬು, ಮುರುಗ, ಕ್ರಷರ್ ಮಾಲೀಕರ ಮಂಜುನಾಥ್, ಎಸ್.ಕೆ ಕ್ರಷರ್ ಮತ್ತು ಬಂಡೆ ಮಾಲೀಕ ಅಪ್ಪಾಜಿಗೌಡ ಹಾಗೂ ಮೂರ್ತಿ, ಲೋಕೇಶ್ ಗೌಡ, ಅಶ್ವಥ್ ನಾರಾಯಣ ಸೇರಿದಂತೆ 12ಮಂದಿ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಪೈಕಿ 8 ಆರೋಪಿಗಳನ್ನು ಬಂಧಿಸಲಾಗಿತ್ತು. ಉಳಿದವರು ತಲೆ ಮರೆಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT