ಗುರುವಾರ , ನವೆಂಬರ್ 14, 2019
23 °C

ಅಸ್ಪೃಶ್ಯತೆ ಹೆಸರಲ್ಲಿ ತಲೆ ತಗ್ಗಿಸುವ ಕೆಲಸ: ಬುಳ್ಳಹಳ್ಳಿ ರಾಜಪ್ಪ ಆಕ್ರೋಶ

Published:
Updated:
Prajavani

ದೇವನಹಳ್ಳಿ: ‘ದಲಿತ ಸಮುದಾಯದ ಸಂಸದರೊಬ್ಬರಿಗೆ ಪಾವಗಡ ತಾಲ್ಲೂಕಿನ ಗೊಲ್ಲರ ಹಟ್ಟಿಗೆ ಪ್ರವೇಶ ನಿಷೇಧಿಸಿ, ಹೊರ ಕಳುಹಿಸಿರುವುದನ್ನು ರಾಜ್ಯ ಮಾದಿಗ ದಂಡೋರ ಸಮಿತಿ ತೀವ್ರವಾಗಿ ಖಂಡಿಸುತ್ತದೆ’ ಎಂದು ಮಾದಿಗ ದಂಡೋರ ರಾಜ್ಯ ಘಟಕ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾದಿಗ ದಂಡೋರ ಸಮಿತಿ ವತಿಯಿಂದ ಸಾಂಕೇತಿಕ ಮುಷ್ಕರ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

‘ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದ ಎ.ನಾರಾಯಣಸ್ವಾಮಿ ಅವರನ್ನು ಸ್ಥಳೀಯರು ಅವಮಾನಿಸಿ, ಮಡಿ ಮೈಲಿಗೆ ಹೆಸರಿನಲ್ಲಿ ಹಟ್ಟಿಗೆ ಪ್ರವೇಶ ನೀಡದಿರುವುದು ಸ್ವಾತಂತ್ರ್ಯ ಪೂರ್ವ ಚಿತ್ರಣವನ್ನು ನೆನಪಿಸುತ್ತದೆ. ಸ್ವಾತಂತ್ರ್ಯ ಪಡೆದು ಎಂಟು ದಶಕಗಳ ಸನಿಹವಿದ್ದರೂ ಸಂಸದರೊಬ್ಬರನ್ನು ಅಸ್ಪೃಶ್ಯತೆ ಹೆಸರಿನಲ್ಲಿ ತಡೆಯುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು’ ಎಂದು ಆರೋಪಿಸಿದರು.

‘ಸಂಸದರು ಸ್ವಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ದಲಿತ ಸಮುದಾಯಗಳಿಗೆ ಮೂಲಸೌಲಭ್ಯ ಒದಗಿಸಲು ಅಧಿಕಾರಿಗಳೊಂದಿಗೆ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ತೆರಳಿದ್ದರು. ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ವಿವಿಧ ಖಾಸಗಿ ಕಂಪನಿಗಳ ಮಾಲೀಕರನ್ನು ಕರೆದುಕೊಂಡು ಹೋಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಅವಮಾನಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಮಾಜ ಕಲ್ಯಾಣ ಸಚಿವರು ಇದಕ್ಕೆ ಉತ್ತರ ನೀಡಬೇಕು’ ಎಂದು ಆಗ್ರಹಪಡಿಸಿದರು.

ಮಾದಿಗ ದಂಡೋರ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಲ್.ಮುನಿರಾಜು, ತಾಲ್ಲೂಕು ಸಮಿತಿ ಅಧ್ಯಕ್ಷ ಕುದುರಪ್ಪ, ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ಉಪಾಧ್ಯಕ್ಷ ಬಾಬು, ವಿಜಯಪುರ ಹೋಬಳಿ ಘಟಕ ಅಧ್ಯಕ್ಷ ಕೆ.ಮಾರಪ್ಪ, ಕೆಪಿಸಿಸಿ ಜಿಲ್ಲಾ ಘಟಕ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾರಾಯಣಸ್ವಾಮಿ, ಕಸಬಾ ಹೋಬಳಿ ಘಟಕದ ಮುನಿಕೃಷ್ಣ, ಮುಖಂಡರಾದ ಚಂದೇನಹಳ್ಳಿ ಮುನಿಯುಪ್ಪ, ಮ್ಯಾಥ್ಯೂ ಮುನಿಯಪ್ಪ, ವೇಣುಗೋಪಾಲ್ ಇದ್ದರು.

ಪ್ರತಿಕ್ರಿಯಿಸಿ (+)