ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Rains | ಧಾರಾಕಾರ ಮಳೆ: ಮತ್ತೆ ಸೋರಿದ ವಿಮಾನ ನಿಲ್ದಾಣ!

ಟರ್ಮಿನಲ್‌–2ರಲ್ಲಿ ಮಳೆ ನೀರು ಸಂಗ್ರಹ* ಪರದಾಡಿದ ಪ್ರಯಾಣಿಕರು* ಸಾಮಾಜಿಕ ಜಾಲತಾಣದಲ್ಲಿ ತರಾಟೆ
Published 11 ಮೇ 2024, 0:20 IST
Last Updated 11 ಮೇ 2024, 0:20 IST
ಅಕ್ಷರ ಗಾತ್ರ

ದೇವನಹಳ್ಳಿ: ಕೆಂಪೇಗೌಡ ಅಂತರ‌ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಗುರುವಾರ ತಡರಾತ್ರಿ ಧಾರಾಕಾರ ಮಳೆ ಸುರಿದಿದೆ. ವಿಮಾನ ನಿಲ್ದಾಣದ ಟರ್ಮಿನಲ್–2ರಲ್ಲಿ ಮಳೆ ನೀರು ಸಂಗ್ರಹವಾದ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು.

ಟರ್ಮಿನಲ್ ಚಾವಣಿಯಿಂದ ಮಳೆ ನೀರು ಸೋರಿ ಪ್ರಯಾಣಿಕರು ಲಗೇಜ್ ಪಡೆಯುವ ಪ್ರದೇಶದಲ್ಲಿ ನೀರು ಸಂಗ್ರಹವಾಗಿತ್ತು. ಇದರಿಂದಾಗಿ ನಿಲ್ದಾಣದ ಸಿಬ್ಬಂದಿ ಸೇರಿದಂತೆ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.

ರಾತ್ರಿ ಸುರಿದ ಭಾರಿ ಮಳೆಗೆ ರನ್ ವೇ ಸ್ಪಷ್ಟವಾಗಿ ಕಾಣದ ಕಾರಣ 18ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಬೇರೆ ವಿಮಾನ ನಿಲ್ದಾಣಗಳಿಗೆ ಕಳಿಸಲಾಯಿತು.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಯಾಣಿಕರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.  

‘ವಿಮಾನ ನಿಲ್ದಾಣದ ಕಾರು ಪಾರ್ಕಿಂಗ್ ಸ್ಥಳ ಮಳೆ ನೀರಿನಿಂದ ತುಂಬಿ ಹೋಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಇದನ್ನು ವಿನ್ಯಾಸ ಮಾಡಿದ ಎಂಜಿನಿಯರ್, ನಿರ್ಮಿಸಿದ ಗುತ್ತಿಗೆದಾರರು ಯಾವ ರೀತಿ ಕೆಲಸ ಮಾಡಿದ್ದಾರೆ ಎನ್ನಲು ಇದು ಕೈಗನ್ನಡಿ’ ಎಂದು  ವೇದಂ ಜಯಶಂಕರ್ ಕಿಡಿಕಾರಿದ್ದಾರೆ.

‘ಒಂದು ಮಳೆಗೆ ವಿಮಾನ ನಿಲ್ದಾಣದ ನೈಜ ಬಣ್ಣ ಬಯಲಾಗಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳು ನೀರಿನಿಂದ ಆವೃತ್ತವಾಗಿವೆ. ರಸ್ತೆ ದೀಪ ಉರಿಯದ ಕಾರಣ ಕತ್ತಲಲ್ಲಿಯೇ ಮಳೆ ನೀರಿನಲ್ಲಿ ಸಂಚರಿಸುವ ದುಸ್ಥಿತಿಗೆ ತಲುಪಿದ್ದೇವೆ’ ಎಂದು ದೀಪ ದೇವಿಕಾ ಎಂಬುವರು ಪ್ರತಿಕ್ರಿಯಿಸಿದ್ದಾರೆ.

ಪ್ರಧಾನಿಗೆ ‘ಎಕ್ಸ್‌’ನಲ್ಲಿ ಈ ಘಟನೆಯನ್ನು ಟ್ಯಾಗ್ ಮಾಡಿರುವ ಡಿ.ರವಿ ಕುಮಾರ ಎಂಬುವರು, ‘ಪ್ರಾಮಾಣಿಕತೆ ಕಣ್ಮರೆಯಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಆಡಳಿತದ ವೈಫಲ್ಯ ಎದ್ದು ಕಾಣುತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ವೇದಂ ಜಯಶಂಕರ್, ‘ಆಳುವ ವರ್ಗ ಪಾರದರ್ಶಕ ಮತ್ತು ದಕ್ಷ ಆಗಿದ್ದರೆ ವಿಮಾನ ನಿಲ್ದಾಣ ನಿರ್ಮಿಸಿದ ಎಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ನೋಡೋಣ’ ಎಂಬ ಪ್ರಶ್ನೆ ಎತ್ತಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಶುಕ್ರವಾರ ಪಾದಚಾರಿ ಮಾರ್ಗ ಮತ್ತು ರಸ್ತೆ ಭಾಗಶಃ ಮುಚ್ಚಿದ್ದವು.

ಬೆಂಗಳೂರಿನ ಜೆಪಿ ನಗರದಲ್ಲಿ ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಶುಕ್ರವಾರ ಪಾದಚಾರಿ ಮಾರ್ಗ ಮತ್ತು ರಸ್ತೆ ಭಾಗಶಃ ಮುಚ್ಚಿದ್ದವು.

–ಪ್ರಜಾವಾಣಿ ಚಿತ್ರ/ ಪುಷ್ಕರ್ ವಿ.

ಚೆನ್ನೈನಲ್ಲಿ ಇಳಿದ 15 ವಿಮಾನ

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾದ ಕಾರಣ ವಿಮಾನಗಳು ಇಳಿಯಲು ಸಾಧ್ಯವಾಗಲಿಲ್ಲ. ಹಾಗಾಗಿ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಬೆಂಗಳೂರಿನಲ್ಲಿ ಇಳಿಯಬೇಕಾಗಿದ್ದ 13 ದೇಶಿಯ ವಿಮಾನ ಮೂರು ಅಂತರರಾಷ್ಟ್ರೀಯ ವಿಮಾನ ಹಾಗೂ ಒಂದು ಅಂತರಾಷ್ಟ್ರೀಯ ಸರಕು ಸಾಗಣೆ ವಾಣಿಜ್ಯ ವಿಮಾನಗಳು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಇಳಿದಿವೆ ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ವಕ್ತಾರರು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ತಡರಾತ್ರಿ ಭಾರಿ ಮಳೆ

ಬೆಂಗಳೂರು: ನಗರದಲ್ಲಿ ಶುಕ್ರವಾರ ತಡರಾತ್ರಿ ಹಲವು ಪ್ರದೇಶಗಳಲ್ಲಿ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆಯಾಯಿತು.

ಶುಕ್ರವಾರ ಸಂಜೆ ವೇಳೆಗೆ ಮೋಡ ಕವಿದಿದ್ದರೂ ಹೆಚ್ಚಿನ ಮಳೆ ಬಂದಿರಲಿಲ್ಲ. ಅಲ್ಲಲ್ಲಿ ಸಾಧಾರಣ ಮಳೆಯಾಗಿತ್ತು. ರಾತ್ರಿ ಸುಮಾರು 11.30ರ ವೇಳೆಗೆ ಭಾರಿ ಗುಡುಗು, ಮಿಂಚಿನೊಂದಿಗೆ ಆರಂಭವಾದ ಮಳೆ, ಬಿರುಗಾಳಿಯೊಂದಿಗೆ, ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಸುರಿಯಿತು.

ಯಲಹಂಕ, ಜಕ್ಕೂರು, ಯಶವಂತಪುರ, ಕೆಂಗೇರಿ, ಬಾಗಲಗುಂಟೆ, ಚೊಕ್ಕಸಂದ್ರ, ಕೊಡಿಗೇಹಳ್ಳಿ, ಹೊರಮಾವು, ವಿಜಯನಗರ, ರಾಜಾಜಿನಗರ, ಜಯನಗರ, ಬನಶಂಕರಿ, ಹೆಬ್ಬಾಳ, ಬಳ್ಳಾರಿ ರಸ್ತೆಗಳಲ್ಲೂ ವರ್ಷಧಾರೆಯಾಗಿದೆ.

ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಹೆಮ್ಮಿಗೆಪುರ, ಮಾರುತಿ ಮಂದಿರ, ವಿದ್ಯಾಪೀಠ, ಜಕ್ಕೂರು, ಉತ್ತರಹಳ್ಳಿ ಸುತ್ತಮುತ್ತ ಒಂದು ಗಂಟೆಯಲ್ಲಿ 5 ಸೆಂ.ಮೀ.ಗೂ ಹೆಚ್ಚಿನ ಮಳೆಯಾಗಿದೆ.

ರಾಜಕಾಲುವೆಗಳಲ್ಲಿ ಅತಿ ಹೆಚ್ಚು ನೀರು ಹರಿದು, ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.


ಮಳೆಗೆ ಬಾಲಕಿ ಸಾವು

ನೆಲಮಂಗಲ: ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಯಲ್ಲಮ್ಮ(8) ಮೃತಪಟ್ಟಿದ್ದಾರೆ.

ರಾಯಚೂರು ದೇವದುರ್ಗದ ಮುಕ್ಕಣ್ಣ ಮತ್ತು ಬಾಲಮ್ಮ ದಂಪತಿ ಗಾರೆ ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದರು. ಪಟ್ಟಣದ ವಾಜರಹಳ್ಳಿ ರಾಮ್ಕಿ ಬಡಾವಣೆಯಲ್ಲಿ ವಕೀಲ ರವಿ ಎಂಬುವವರ ಮನೆಯಲ್ಲಿ ಸಂಜೆ ಬಾಲಮ್ಮ ಮನೆಗೆಲಸ ಮಾಡುವ ವೇಳೆಯಲ್ಲಿ, ಹೊರಗಡೆ ಆಡಿಕೊಂಡಿದ್ದ ಮಗಳು ಯಲ್ಲಮ್ಮಳ ಮೇಲೆ ಮನೆಯ ಗೇಟ್ ಬಿದ್ದು ಮೃತಳಾಗಿದ್ದಾಳೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT