ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರು ‘ಪುಟ್ಟಕ್ಕನ ಹೈವೆ’ ಆಗುವುದು ಬೇಡ

ಚಿಕ್ಕಬೆಳವಂಗಲದ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ
Published 9 ಜೂನ್ 2023, 16:02 IST
Last Updated 9 ಜೂನ್ 2023, 16:02 IST
ಅಕ್ಷರ ಗಾತ್ರ

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ತಾಲ್ಲೂಕಿನ ಚಿಕ್ಕಬೆಳವಂಗಲದ ಮೂಲಕ ಹಾದು ಹೋಗುವ ಹೊಸಕೋಟೆ-ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರಾಮಕ್ಕೆ ತೆರಳಲು ಅನುಕೂಲವಾಗುವಂತೆ ಅಂಡರ್‌ ಪಾಸ್‌ ನಿರ್ಮಿಸಬೇಕೆಂದು ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಬೆಳವಂಗಲ ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಸ್.ಧರ್ಮೇಂದ್ರ, ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸಿ.ಎಚ್.ರಾಮಕೃಷ್ಣಯ್ಯ ಅವರು, ಹೊಸಕೋಟೆಯಿಂದ ದಾಬಸ್‍ಪೇಟೆಯವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಕ್ಕಬೆಳವಂಗಲದಲ್ಲಿ ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನವಾಗಿದೆ. ಇದೇ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆಯಿದ್ದು, 500ಕ್ಕೂ ಹೆಚ್ಚು ದನಕರುಗಳಿವೆ. ಗ್ರಾಮದಲ್ಲಿ ಸರ್ಕಾರಿ ಪಶುವೈದ್ಯ ಆಸ್ಪತ್ರೆ ಇದ್ದು, ಅಕ್ಕ ಪಕ್ಕದ ಗ್ರಾಮಗಳಿಂದ ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಚಿಕಿತ್ಸೆಗಾಗಿ ಕರೆತರುತ್ತಿದ್ದಾರೆ. ಆದರೆ ರಸ್ತೆ ವಿಸ್ತರಣೆಯಿಂದ ರಸ್ತೆ ದಾಟಲು ತುಂಬಾ ಸಮಸ್ಯೆಯಾಗುತ್ತಿದೆ.

ಚಿಕ್ಕಬೆಳವಂಗಲ ಗ್ರಾಮದ ಮೂಲಕ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ, ಕೊಳಾಲ, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಿಗೆ ಹಾಗೂ ಮಧುಗಿರಿಯಿಂದ ಬೆಂಗಳೂರು ಕಡೆಗೆ ಹೋಗುವ ಮುಖ್ಯರಸ್ತೆಯಾಗಿದೆ. ಇದರಿಂದ ಚಿಕ್ಕಬೆಳವಂಗಲ ಗ್ರಾಮದ ಜನ ಹಾಗೂ ಜಾನುವಾರುಗಳು ಹಾದು ಹೋಗಲು ತೊಂದರೆಯಾಗುತ್ತದೆ. ಈ ದಿಸೆಯಲ್ಲಿ ರಸ್ತೆ ವಿಸ್ತರಣೆ ಮಾಡುವಾಗ ಚಿಕ್ಕಬೆಳವಂಗಲ ಗ್ರಾಮಕ್ಕೆ ಹಾದುಹೋಗಲು ಅಂಡರ್ ಪಾಸ್‌ ನಿರ್ಮಿಸಿ, ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಹೆದ್ದಾರಿ ರಸ್ತೆ ವಿಸ್ತರಣೆಯಿಂದ ನಮ್ಮ ಗ್ರಾಮ ಎರಡು ಭಾಗವಾಗಿದೆ. ಇಷ್ಟು ವರ್ಷಗಳಿಂದ ಒಂದೇ ಊರಿನಂತೆ ಇದ್ದವರು ಹೆದ್ದಾರಿಯಿಂದಾಗಿ ಎರಡು ಗ್ರಾಮಗಳಾಗುವಂತೆ ಆಗಿದೆ. ರಸ್ತೆ ಬದಿಯಲ್ಲಿಯೇ ಇದ್ದರೂ ಆ ಭಾಗದಿಂದ ಈ ಭಾಗದ ಕಡೆಗೆ ಬರಲು ಸುಮಾರು ಅರ್ಧ ಕಿ.ಮೀ ಸುತ್ತು ಹಾಕಿಕೊಂಡು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ನಮ್ಮೂರಿನ ಜನರ ಸ್ಥಿತಿ ಈಗ ‘ಪುಟ್ಟಕ್ಕನ ಹೈವೆ’ ಸಿನಿಮಾ ರೀತಿಯಲ್ಲಿ ಆಗಿದೆ. ಅಂಡರ್‌ ಪಾಸ್‌ ನಿರ್ಮಿಸಿದರೆ ಈ ಸಮಸ್ಯೆ ಬಗೆಹರಿದು ಈ ಹಿಂದಿನಂತೆಯೇ ಒಂದೇ ಊರಿನ ಜನರಂತೆ ಬಾಳಲು ಸಹಕಾರಿಯಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ವಿಜಯ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯೆ ಭಾಗ್ಯಮ್ಮ ಚಿಕ್ಕಣ್ಣ, ಮುಖಂಡರಾದ ಸಿ.ಆರ್.ಮುನಿರಾಜು, ಶಿವಕುಮಾರ್, ಮಲ್ಲಿಕಾರ್ಜುನಯ್ಯ, ಹರೀಶ್, ಗೋವಿಂದರಾಜು, ಸದಾಶಿವಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT