ಆನೇಕಲ್: ಮಹಿಳೆಯನ್ನು ಬಳಸಿ ಕೊಂಡು ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಬನ್ನೇರುಘಟ್ಟದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಐಫೋನ್, ಒಂದು ಜೊತೆ ಓಲೆ, ಸರ, ಉಂಗುರ ಸೇರಿದಂತೆ 68 ಗ್ರಾಂ ಚಿನ್ನದ ಒಡವೆ ಮತ್ತು ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಎಸ್.ವಿ.ರಿತಿಕ್ (23), ಮಹಮದ್ ಆಸೀಫ್ (22), ಯಾಸೀಫ್ ಪಾಷಾ (20), ಶಾಹೀದ್ ಅಲಿ (23), ಸಮೀರ್ (21) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಜೆ.ಪಿ ನಗರದ ಶಶಾಂಕ್ ಎಂಬುವರನ್ನು ಮಹಿಳೆಯೊಬ್ಬಳು ಇನ್‌ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದಳು. ಆ ಬಳಿಕ ಜನವರಿ 12ರಂದು ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೊನಿಯ ಬಂಡೆಗೆ ಕರೆಸಿಕೊಂಡಿದ್ದಳು. ಆಗ ಆರೋಪಿಗಳು ಸ್ಥಳಕ್ಕೆ ಬಂದು ಶಶಾಂಕ್ ಅವರನ್ನು ಬೆದರಿಸಿ ಅವರ ಬಳಿ ಇದ್ದ ಒಡವೆಗಳನ್ನು ದೋಚಿ ಪರಾರಿಯಾಗಿದ್ದರು.