ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೆತೋಪಿಗೆ ಅರಣ್ಯ ಇಲಾಖೆ ಸರ್ಪಗಾವಲು

ಪಾರಂಪರಿಕ ಪಟ್ಟಿಯಲ್ಲಿರುವ ನಲ್ಲೂರು ಹುಣಸೆತೋಪು
Published 4 ಏಪ್ರಿಲ್ 2024, 7:33 IST
Last Updated 4 ಏಪ್ರಿಲ್ 2024, 7:33 IST
ಅಕ್ಷರ ಗಾತ್ರ

ದೇವನಹಳ್ಳಿ: ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ತಾಲ್ಲೂಕು ನಲ್ಲೂರು ಗ್ರಾಮದಲ್ಲಿನ ನಲ್ಲೂರು ಹುಣಸೆತೋಪಿಗೆ ಅರಣ್ಯ ಇಲಾಖೆ ಸರ್ಪಗಾವಲಾಗಿದೆ.

ಸುಮಾರು 400 ವರ್ಷದ ಇತಿಹಾಸವಿರುವ ನಲ್ಲೂರು ಹುಣಸೆತೋಪಿನ ರಕ್ಷಣೆ ಜವಾಬ್ದಾರಿ ಜಿಲ್ಲಾ ಅರಣ್ಯ ಇಲಾಖೆ ಹೆಗಲ ಮೇಲಿದ್ದು, ಖಾಸಗಿ ಬ್ಯಾಂಕ್ ವತಿಯಿಂದ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ (ಸಿಎಸ್‌ಆರ್) ಅನುದಾನದಡಿ ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಇದು ನಲ್ಲೂರು ಪಂಚಾಯಿತಿ ಒತ್ತಾಸೆಯಾಗಿದ್ದು, ಪಾರಂಪರಿಕ ಸ್ಥಳದ ರಕ್ಷಣೆಗೆ ಇಲಾಖೆ ಮುಂದಾಗಿದೆ. ಅಕ್ರಮ ಚಟುವಟಿಕೆಗಳ ತಾಣವಾಗುವತ್ತಾ ಸಾಗಿದ್ದ ಹುಣಸೆತೋಪಿನ ಸ್ಥಳಕ್ಕೆ ಇದೀಗ ಅರಣ್ಯ ಇಲಾಖೆ ಸರ್ಪಗಾವಲಾಗಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಸಿಎಸ್‌ಆರ್ ಅನುದಾನ ಬಳಕೆ: ಪ್ರಮುಖ ಪ್ರವಾಸಿತಾಣಗಳ ಅಭಿವೃದ್ಧಿ ಬಗ್ಗೆ ಈ ಹಿಂದಿನಿಂದಲೂ ಸರ್ಕಾರಗಳು ಗಮನ ನೀಡುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಆಗಾಗ ಅಭಿವೃದ್ಧಿ ಕುರಿತಾಗಿ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಸಲ್ಲಿಸುತ್ತಿದ್ದರೂ ಸರ್ಕಾರಗಳಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಈ ಪಟ್ಟಿಯಲ್ಲಿ ನಲ್ಲೂರು ಹುಣಸೆತೋಪು ಸಹ ಸೇರಿದೆ. ಅನುದಾನ ಕೊರತೆಯಿಂದಾಗಿ ಪ್ರವಾಸೋದ್ಯಮ ಇಲಾಖೆ ಕೈಚೆಲ್ಲಿದೆ. ಈ ಹಿನ್ನೆಲೆಯಲ್ಲಿ ಸಿಎಸ್‌ಆರ್ ಅನುದಾನಕ್ಕೆ ಮೊರೆಹೋದ ಅರಣ್ಯ ಇಲಾಖೆಗೆ ಖಾಸಗಿ ಬ್ಯಾಂಕ್ ಆಡಳಿತ ಮಂಡಳಿಯಿಂದ ಸ್ಪಂದನೆ ಸಿಕ್ಕಿದೆ.

ಅರಣ್ಯ ಇಲಾಖೆಗೆ ಕಂದಾಯ ಇಲಾಖೆಯೂ ಸಹಕಾರ ನೀಡಿದ್ದು ಹುಣಸೆತೋಪಿನ ರಕ್ಷಣೆ ಹಾಗೂ ಅಭಿವೃದ್ಧಿ ಸಹಕಾರಿಯಾಗಿದೆ.

ಪಂಚಾಯಿತಿ ಒತ್ತಾಸೆ: 400 ವರ್ಷಗಳಿಗಿಂತಲೂ ಹಳೆಯದಾದ 300ಕ್ಕೂ ಹೆಚ್ಚು ಬೃಹತ್ ಹುಣಸೆಮರಗಳನ್ನು ಹೊಂದಿರುವ ಈ ತೋಪು 53 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. 2007ರಲ್ಲೇ ಜೀವವೈವಿಧ್ಯ ತಾಣವೆಂದು ಘೋಷಣೆಯಾಗಿದೆ.

ಪಾರಂಪರಿಕ ಹುಣಸೆತೋಪಿನ ರಕ್ಷಣೆ ವಿಚಾರವಾಗಿ ಹೆಚ್ಚು ಕಾಳಜಿ ವಹಿಸಿದ ನಲ್ಲೂರು ಪಂಚಾಯಿತಿ ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು, ಇದರ ಹೊಣೆಯನ್ನು ಅರಣ್ಯ ಇಲಾಖೆಗೆ ವಹಿಸುವಂತೆ ಪಟ್ಟು ಹಿಡಿದಿತ್ತು. ಜತೆಗೆ ಖಾಸಗಿ ಕಂಪನಿಗಳ ಸಿಎಸ್‌ಆರ್ ಅನುದಾನ ಪಡೆಯುವ ಕಸರತ್ತು ನಡೆಸಿತ್ತು. ಇದಕ್ಕೆ ಜಿಲ್ಲಾಧಿಕಾರಿ ಅವರಿಂದಲೂ ಹಸಿರು ನಿಶಾನೆ ದೊರೆತ ಹಿನ್ನೆಲೆಯಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿದ ಅರಣ್ಯ ಇಲಾಖೆ ಸಿಎಸ್‌ಆರ್ ಅನುದಾನ ಬಳಸಿಕೊಂಡು ಹುಣಸೆತೋಪಿನ ರಕ್ಷಣೆಗೆ ಟೊಂಕಕಟ್ಟಿದೆ.

ತಾತ್ಕಾಲಿಕ ತಡೆ: ಕಳೆದ ವರ್ಷ ಹುಣಸೆತೋಪಿನ ಸುತ್ತಾ ಕಬ್ಬಿಣದ ಪೆನ್ಸಿಂಗ್ ಕಾಮಗಾರಿ ಆರಂಭಿಸಲಾಗಿತ್ತು, ಮಳೆ ನೀರು ಇಂಗುವಂತೆ ತೋಪಿನಲ್ಲಿ ಮಣ್ಣು ಹದ (ಡಿ ಸಿಲ್ಟಿಂಗ್) ನಡೆಸಲಾಗಿತ್ತು. ಇಲ್ಲಿನ ಕಲ್ಯಾಣಿಯೊಂದರಲ್ಲಿ ಹೂಳು ತೆಗೆದು ನೀರಿನ ಸೆಲೆಗೆ ಕಾಯಕಲ್ಪ ಕಲ್ಪಿಸಲಾಗಿತ್ತು. ಆದರೆ ಕೆಲವು ತಿಂಗಳಿಂದ ಕಾಮಗಾರಿಗೆ ತಾತ್ಕಾಲಿಕ ತಡೆ ಬಿದ್ದಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪುನಾರಂಭಗೊಳ್ಳಲಿದೆ, ಇಲ್ಲಿ ಸುಸಜ್ಜಿತ ಯಾತ್ರಿನಿವಾಸ, ಶೌಚಗೃಹಗಳು, ಕುಳಿತುಕೊಳ್ಳಲು ಬೆಂಚು ಸೇರಿ ಹಲವು ಮೂಲಸೌಕರ್ಯ ಕಲ್ಪಿಸುವ ಚಿಂತನೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರಂಪರಿಕ ಹುಣಸೆ ತೋಪಿನಲ್ಲಿ ಅರಣ್ಯ ಇಲಾಖೆ ಕಂದಾಯ ಇಲಾಖೆ ನಲ್ಲೂರು ಗ್ರಾಪಂ ಸಿಬ್ಬಂದಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.
ಪಾರಂಪರಿಕ ಹುಣಸೆ ತೋಪಿನಲ್ಲಿ ಅರಣ್ಯ ಇಲಾಖೆ ಕಂದಾಯ ಇಲಾಖೆ ನಲ್ಲೂರು ಗ್ರಾಪಂ ಸಿಬ್ಬಂದಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT