ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಅಕ್ರಮ ಒತ್ತುವರಿ ತೆರವು

ಜಿಲ್ಲಾಧಿಕಾರಿ ಕರೀಗೌಡ ನೇತೃತ್ವದಲ್ಲಿ ಕಾರ್ಯಾಚರಣೆ
Last Updated 20 ಅಕ್ಟೋಬರ್ 2018, 12:39 IST
ಅಕ್ಷರ ಗಾತ್ರ

ದೇವನಹಳ್ಳಿ: ಪುರಸಭೆ 20ನೇ ವಾರ್ಡಿನ ವ್ಯಾಪ್ತಿಯಲ್ಲಿನ ಸೂಲಿಬೆಲೆ ರಸ್ತೆಗೆ ಹೊಂದಿಕೊಂಡಿರುವ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದ್ದ ಅಕ್ರಮ ಕಟ್ಟಡಗಳನ್ನು ಜಿಲ್ಲಾಧಿಕಾರಿ ಕರೀಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಹದ್ದಿನಗಿಡದಹಳ್ಳ ಎಂದೆ ಕರೆಯಲ್ಪಡುವ ಸರ್ವೇ ನಂ.301, 302, 340 ಹಾಗೂ 347ರ ಮಧ್ಯೆ ಹಾದು ಹೋಗುವ ರಾಜಕಾಲುವೆಯನ್ನು ಖಾಸಗಿಯವರು 14 ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದರು. ಇದರ ಬಗ್ಗೆ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗಿತ್ತು.

ದಾಖಲೆಗಳನ್ನು ಪರಿಶೀಲಿಸಿದ್ದ ಲೋಕಾಯುಕ್ತ ಸಹಾಯಕ ನಿಬಂಧಕರು ಸೂಕ್ತ ಕ್ರಮ ಕೈಗೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ದಂಡಾಧಿಕಾರಿಗೆ ಆದೇಶ ನೀಡಿದ ಕಾರಣ ಅಧಿಕಾರಿಗಳ ತಂಡ ತೆರವು ಕಾರ್ಯಾಚರಣೆ ಕೈಗೊಂಡಿತು.

ತೆರವು ಕಾರ್ಯಾಚರಣೆಗೆ ಮೊದಲು ಅಕ್ರಮ ಒತ್ತುವರಿದಾರರಿಗೆ ಕಂದಾಯ ಇಲಾಖೆ ನೋಟಿಸ್ ನೀಡಲಾಗಿತ್ತು ಎಂದು ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಜಿಲ್ಲಾಧಿಕಾರಿ ಕರೀಗೌಡ ಮಾತನಾಡಿ, ಲೋಕಾಯುಕ್ತರಿಂದ ಸೂಚನೆ ಇತ್ತು, ಇದಕ್ಕಾಗಿ ಪುರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಬೆಸ್ಕಾಂ ಹಾಗೂ ಪೊಲೀಸರು ಒತ್ತವರಿ ತೆರವು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾರೆ ಎಂದರು.

ರಾಜಕಾಲುವೆ ಆರಂಭದ ಹಂತ ಇದಾಗಿದೆ. ರಾಷ್ಟ್ರೀಯ ಹೆದ್ದಾರಿ 207ರ ರಸ್ತೆಯಲ್ಲಿ ಸುರಿಯುವ ಮಳೆ ನೀರು ಮುಂದುವರೆದು ಹರಿಯದೆ ರಸ್ತೆಗಳೇ ಕೆರೆಯಂತಾಗುತ್ತಿತ್ತು.ಯಾಕೆ ಎಂದು ಮಾಹಿತಿ ಪಡೆದಾಗ ರಾಜಕಾಲುವೆ ಒತ್ತುವರಿ ಎಂಬುದು ಗೊತ್ತಾಯಿತು ಎಂದರು.

40 ಅಡಿ ಆರಂಭದ ಜಾಗದಲ್ಲಿ 3ರಿಂದ 4 ಅಡಿ ಎಂದರೆ ನೀರು ಹೇಗೆ ಸರಾಗವಾಗಿ ಹರಿಯಲು ಸಾಧ್ಯ. ಪ್ರಸ್ತುತ ನಾಲ್ಕು ಸರ್ವೇ ನಂಬರ್ ವ್ಯಾಪ್ತಿಯಲ್ಲಿ 12 ಗುಂಟೆ ರಾಜಕಾಲುವೆ ಜಾಗ ಒತ್ತುವರಿಯಾಗಿರಬಹುದು ಎಂಬ ಅಂದಾಜಿದೆ ಎಂದರು.

‘ಕಾನೂನಾತ್ಮಕ ಕ್ರಮಕೈಗೊಳ್ಳವುದು ನಮ್ಮ ಜವಾಬ್ದಾರಿ, ಯಾವುದೇ ಜಾಗದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದರೆ ಯಾವುದೇ ಸಂದರ್ಭದಲ್ಲಿ ಏನಾಗೋತ್ತೊ ಹೇಳಲಿಕ್ಕಾಗದು ಅಕ್ರಮ ಎಂದು ಗೊತ್ತಿದ್ದರು ಅಕ್ರಮಕ್ಕೆ ಮುಂದಾಗಬಾರದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬೆಳಿಗ್ಗೆ 6 ಕ್ಕೆ ನಡೆದ ತೆರವು ಕಾರ್ಯಚರಣೆಯಲ್ಲಿ 4 ಜೆ.ಸಿ.ಬಿ, ಒಂದು ಇಟಾಚಿ ವಾಹನ ಬಳಕೆ ಮಾಡಿಕೊಳ್ಳಲಾಗಿತ್ತು. ಉಪವಿಭಾಗಧಿಕಾರಿ ಮಂಜುನಾಥ್, ತಹಶೀಲ್ದಾರ್ ಎಂ.ರಾಜಣ್ಣ, ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರ ಪುರಸಭೆ ಅಧಿಕಾರಿ ನಾಗರಾಜ್, ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ್ ಸೇರಿದಂತೆ 60 ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT