ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಹೆಚ್ಚಳ: ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದ ಆರ್. ಅಶೋಕ್

Last Updated 3 ಮೇ 2021, 3:32 IST
ಅಕ್ಷರ ಗಾತ್ರ

ದೇವನಹಳ್ಳಿ (ವಿಜಯಪುರ): ‘ಕೊರೊನಾ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಬೇಕು. ಸಾವಿನ ಪ್ರಮಾಣವನ್ನು ಕಡಿಮೆ ಮಾಡುವ ಕಡೆಗೆ ಹೆಚ್ಚು ಗಮನಹರಿಸಬೇಕು. ಮನೆಯ ವಾತಾವರಣ ನಿರ್ಮಾಣ ಮಾಡಬೇಕು. ಅವರು ಶೀಘ್ರವಾಗಿ ಚೇತರಿಕೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ವೈದ್ಯರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೂರುಗಳು ಕೇಳಿ ಬಂದ ಬಗ್ಗೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿ ಅವರು ಮಾತನಾಡಿದರು.

ಆಸ್ಪತ್ರೆಯ ವೈದ್ಯರ ತಂಡದೊಂದಿಗೆ ಅವರು ಸುದೀರ್ಘವಾಗಿ ಚರ್ಚಿಸಿದ ಅವರು, ಆಸ್ಪತ್ರೆಯಲ್ಲಿ ಸಾವಿನ ಪ್ರಕರಣಗಳು ಹಾಗೂ ರೋಗಿಗಳಿಗೆ ನೀಡುತ್ತಿರುವ ಊಟದ ವ್ಯವಸ್ಥೆಯನ್ನು ಪರಿಶೀಲಿಸಿದರು.

‘ಆಸ್ಪತ್ರೆಯಲ್ಲಿ 650 ಬೆಡ್ ವ್ಯವಸ್ಥೆಯಿದೆ. ಎಲ್ಲಾ ಬೆಡ್‌ಗಳು ಭರ್ತಿಯಾಗಿದೆ. ಆಸ್ಪತ್ರೆಗೆ 8 ಕೆ.ಎಲ್ ಆಕ್ಸಿಜನ್ ಸಹ ಸರಬರಾಜು ಮಾಡಲಾಗಿದೆ. ಆಕ್ಸಿಜನ್ ಕೊರತೆ ಇಲ್ಲ. ರೆಮ್‌ಡಿಸಿವರ್ ಮೆಡಿಸಿನ್ ಸಮಸ್ಯೆಯಿದ್ದು ಬಂದವರಿಗೆಲ್ಲ ರೆಮ್‌ಡಿಸಿವರ್ ಮೆಡಿಸಿನ್ ನೀಡಲು ಸಾಧ್ಯವಿಲ್ಲ. ಅಗತ್ಯವಿರುವ ರೋಗಿಗೆ ಮಾತ್ರ ನೀಡಲು ಸೂಚಿಸಿದ್ದೇನೆ. ಅಂಗವಿಕಲರಿಗೆ ಪ್ರಥಮ ಆದ್ಯತೆ ನೀಡಿ ಔಷಧಿ ನೀಡಬೇಕು’ ಎಂದು ತಿಳಿಸಿದರು.

‘ಪ್ರಕರಣಗಳು ಹೆಚ್ಚಾ ದಂತೆಲ್ಲ ಅಗತ್ಯಕ್ಕೆ ತಕ್ಕಂತೆ ಆಕ್ಸಿಜನ್, ಔಷಧಿಗಳನ್ನು ಕೇಂದ್ರ ಸರ್ಕಾರ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಎಲ್ಲೆಡೆಯಿಂದ ಔಷಧಗಳು ಬಂದರೆ 3-4 ದಿನಗಳಲ್ಲಿ ಎಲ್ಲಾ ವ್ಯವಸ್ಥೆಗಳು ಸರಿಹೋಗಲಿವೆ. ಅಲ್ಲಿಯವರೆಗೆ ಈಗಿರುವ ಔಷಧಗಳನ್ನು ಅಗತ್ಯವಿರುವರಿಗೆ ಬಳಸಿಕೊಳ್ಳಿ. ದೊಡ್ದಬಳ್ಳಾಪುರದಲ್ಲಿ 100 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಲಾಗುವುದು. ಗ್ರಾಮಾಂತರ ಜಿಲ್ಲೆ ಬೆಂಗಳೂರಿಗೆ ಹೊಂದಿ ಕೊಂಡಿರುವುದರಿಂದ ಬಹಳಷ್ಟು ಹೊರಜಿಲ್ಲೆಯ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆ ದೃಷ್ಟಿಯಿಂದ ಆಸ್ಪತ್ರೆಯ ಮುಖ್ಯಸ್ಥರು ಆಸ್ಪತ್ರೆಯನ್ನು ಸಮರ್ಪಕವಾಗಿ ನಡೆಸಬೇಕಿರುವುದರಿಂದ ಆಡಳಿತ ವರ್ಗಕ್ಕೆ ಹಲವಾರು ಸೂಚನೆಗಳನ್ನು ನೀಡಿದ್ದೇನೆ’ ಎಂದರು.

ಹೋಂ ಐಸೋಲೇಷನ್ ಆದವರಿಗೆ ಆದ್ಯತೆ ನೀಡಿ: ಜಿಲ್ಲೆಯಲ್ಲಿ ಶೇ 95ರಷ್ಟು ಜನ ಕೊವಿಡ್ ಪಾಸಿಟಿವ್ ಬಂದು ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಅಂತಹವರಿಗೆ 10 ದಿನಗಳಿಗಾಗುವಷ್ಟು ಔಷಧಿಯನ್ನು ತಲುಪಿಸಲಾಗುವುದು. ಈಗಾಗಲೆ 9 ತರಹದ ಮಾತ್ರೆಗಳನ್ನು ಸೂಚಿಸಲಾಗಿದ್ದು, ಅಂತಹ ಮಾತ್ರೆಗಳನ್ನು ಜಿಲ್ಲಾಧಿಕಾರಿಗಳು ತಕ್ಷಣ ಖರೀದಿ ಮಾಡಲು ಅಧಿಕಾರ ನೀಡಲಾಗಿದೆ ಎಂದರು.

ಮನೆಯಲ್ಲಿರುವ ರೋಗಿಗಳಿಗೆ ಎಲ್ಲಾ ಔಷಧಗಳುಳ್ಳ ಕಿಟ್ ಜೊತೆಗೆ ಅದರ ಬಳಕೆ ಹಾಗೂ ಮುಂಜಾಗ್ರತಾ ಕ್ರಮಗಳುಳ್ಳ ಹ್ಯಾಂಡ್‌ಬಿಲ್ ಮುದ್ರಿಸಿ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಅದಕ್ಕೆ ಬೇಕಾದ ಹಣವನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಲಿದೆ. ಸಕಾಲಕ್ಕೆ ಔಷಧಿಗಳನ್ನು ನೀಡಿದರೆ ಅವರು ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಬರುವುದಿಲ್ಲ. ಕೋವಿಡ್ ರೋಗಿಗಳ ಅಂತ್ಯ ಸಂಸ್ಕಾರಕ್ಕೆ ಬೆಂಗಳೂರಿನಲ್ಲಿ 3 ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಂಜುಳಾ ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT