ಗುರುವಾರ , ಜನವರಿ 21, 2021
23 °C

ಕೈಗಾರಿಕಾ ಒಕ್ಕೂಟ ಅಸ್ತಿತ್ವಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ವಿವಿಧ ಕೈಗಾರಿಕಾ ಸಂಘಗಳು ಒಗ್ಗೂಡಿ ಕೈಗಾರಿಕಾ ಸಂಘಗಳ ಒಕ್ಕೂಟ ರಚಿಸಲಾಗಿದ್ದು, ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್‌ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಪ್ರಸಾದ್‌ ಮಾತನಾಡಿ, ಆನೇಕಲ್‌ ತಾಲ್ಲೂಕು ಕೈಗಾರಿಕಾ ಒಕ್ಕೂಟಕ್ಕೆ ಒಳಪಟ್ಟಿರುವ ಬೊಮ್ಮಸಂದ್ರ, ಅತ್ತಿಬೆಲೆ, ವೀರಸಂದ್ರ, ಜಿಗಣಿ, ಕಾಚನಾಯಕನಹಳ್ಳಿ, ನಾರಾಯಣ ಹೆಲ್ತ್‌ ಸಿಟಿ ಕ್ಷೇಮಾಭಿವೃದ್ಧಿ ಸಂಘಗಳು ಒಗ್ಗೂಡಿ ಒಕ್ಕೂಟ ರಚಿಸಿಕೊಳ್ಳಲಾಗಿದೆ. ಈ ಒಕ್ಕೂಟದ ವ್ಯಾಪ್ತಿಯಲ್ಲಿರುವ ಕೈಗಾರಿಕಾ ಪ್ರದೇಶಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಒಕ್ಕೂಟವು ಶ್ರಮಿಸಲಿದೆ ಎಂದರು.

ರಸ್ತೆ, ಸಿಸಿ ಕ್ಯಾಮೆರಾ ಅಳವಡಿಕೆ, ಪೊಲೀಸ್ ಚೌಕಿ ಸೇರಿದಂತೆ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಒಕ್ಕೂಟವು ಕ್ರಿಯಾಯೋಜನೆ ರೂಪಿಸಲಿದೆ. ಅತ್ತಿಬೆಲೆ ಮತ್ತು ವೀರಸಂದ್ರ ಕೈಗಾರಿಕಾ ಪ್ರದೇಶಗಳ ರಸ್ತೆಗಳು ಅತ್ಯಂತ ಹಾಳಾಗಿದ್ದು ವಾಹನಗಳ ಸಂಚಾರಕ್ಕೂ ಯೋಗ್ಯವಾಗಿಲ್ಲ. ಹಾಗಾಗಿ ಈ ಭಾಗದ ರಸ್ತೆಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

ಗ್ರಾಮ ಪಂಚಾಯಿತಿ, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ತೆರಿಗೆ ನಿರ್ಧರಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇವುಗಳನ್ನು ಸರಿಪಡಿಸಿ ಏಕರೂಪ ತೆರಿಗೆ ವ್ಯವಸ್ಥೆ ಜಾರಿಗೆ ತರಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಸುಮಾರು 4 ರಿಂದ 5 ಲಕ್ಷ ಕಾರ್ಮಿಕರು ಆನೇಕಲ್‌ ತಾಲ್ಲೂಕಿನಲ್ಲಿದ್ದಾರೆ. ಇಷ್ಟು ಬೃಹತ್‌ ಸಂಖ್ಯೆಯಲ್ಲಿ ಕಾರ್ಮಿಕರಿದ್ದರೂ ಈ ಭಾಗಕ್ಕೆ ಸುಸಜ್ಜಿತ ಇಎಸ್‌ಐ ಆಸ್ಪತ್ರೆಯಿಲ್ಲ. ಪಿಎಫ್‌ ಕಚೇರಿಯಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಒತ್ತು ನೀಡಲಾಗುವುದು. ಕಾರ್ಮಿಕರ ಕ್ಷೇಮಾಭಿವೃದ್ಧಿ ಮತ್ತು ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಅತ್ತಿಬೆಲೆ ಕೈಗಾರಿಕಾ ಸಂಘದ ಅಧ್ಯಕ್ಷ ಆರ್‌.ಕೆ. ಕೇಶವರೆಡ್ಡಿ, ಜಿಗಣಿ ಸಂಘದ ಅಧ್ಯಕ್ಷ ಮಹದೇವ್‌, ವೀರಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಅನುರಾಗ್‌ ಅಗರವಾಲ್‌, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರಿರಾಜು, ಬೊಮ್ಮಸಂದ್ರ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಮುರಳೀಧರ್‌, ಕಾಚನಾಯಕನಹಳ್ಳಿ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಂಜೀವ್‌ ಸಾವಂತ್, ನಾರಾಯಣ ಹೆಲ್ತ್‌ ಸಿಟಿಯ ನಾಗರಾಜಶೆಟ್ಟಿ, ಅಶ್ವಥ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು