ಭಾನುವಾರ, ಜನವರಿ 17, 2021
26 °C

ಪಕ್ಷಾಂತರ ಗೊಂದಲ: ಜೆಡಿಎಸ್‌ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ಜೆಡಿಎಸ್ ಬೆಂಬಲಿತ ಬಿದಲೂರು ಗ್ರಾಮ ಪಂಚಾಯಿತಿ ಸದಸ್ಯ ನಂದಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ಪ್ರಚಾರ ಮಾಡುತ್ತಿರುವುದು ಆ ಪಕ್ಷಕ್ಕೆ ಶೋಭೆ ತರಲ್ಲ ಎಂದು ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಬಿ. ಶ್ರೀನಿವಾಸ್ ಕಿವಿಮಾತು ಹೇಳಿದರು.

ಇಲ್ಲಿನ ಪಿ.ಎಲ್.ಡಿ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ಜೆಡಿಎಸ್ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿದರು.

ಪಕ್ಷ ಬೇರೆ, ವೈಯಕ್ತಿಕ ವಿಶ್ವಾಸ ಬೇರೆ. ವಿಶ್ವಾಸದಿಂದ ಮಾತನಾಡಿಸಿದವರನ್ನು ಶಾಸಕ ಕೃಷ್ಣ ಭೈರೇಗೌಡರಿಂದ ಹಾರ ಹಾಕಿಸಿ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಸೇರ್ಪಡೆ ಎಂದು ಬಿಂಬಿಸುವುದು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಘನತೆಗೆ ತಕ್ಕದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಪಕ್ಷದ ಬೆಂಬಲಿತರಾಗಿ ಆಯ್ಕೆಗೊಂಡಿರುವ ಸದಸ್ಯರು ಇತರೆ ಪಕ್ಷಗಳ ಆಸೆ, ಆಮಿಷಗಳಿಗೆ ಬಲಿಯಾದರೆ ಭವಿಷ್ಯದ ರಾಜಕೀಯ ಅವರಿಗೆ ಮುಳುವಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಸದಸ್ಯರ ಸಂಕಷ್ಟಕ್ಕೆ ಸ್ಪಂದಿಸಲು ಪಕ್ಷದ ಮುಖಂಡರಿದ್ದಾರೆ. ಯಾವುದೇ ಸದಸ್ಯರು ಮುಕ್ತವಾಗಿ ಬೇರೆ ಪಕ್ಷಕ್ಕೆ ಹೋಗಲಿ ಮತ್ತು ಬರಲಿ. ಯಾವುದೇ ಅಡ್ಡಿ ಇಲ್ಲ. ಆಸೆ, ಆಕಾಂಕ್ಷೆ ಸಲ್ಲದು. ನೂರಾರು ಜನರು ವೈಯಕ್ತಿಕ ಕೆಲಸ ಕಾರ್ಯಗಳಿಗೆ ಪ್ರತಿದಿನ ನನ್ನ ಬಳಿ ಕೆಲಸಕ್ಕೆ ಬರುತ್ತಾರೆ. ಅವರಿಗೆಲ್ಲರಿಗೂ ನಾನು ಹಾರ ಹಾಕಿ ಸೇರ್ಪಡೆಯಾಗಿದ್ದಾರೆ ಎಂದು ವಾಟ್ಸ್‌ಆ್ಯಪ್ ಗ್ರೂಪ್‌ಗೆ ಹಾಕಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪಂಚಾಯಿತಿ ಸದಸ್ಯ ನಂದಕುಮಾರ್ ಮಾತನಾಡಿ, ‘ನಾನು ಆಕಸ್ಮಿಕವಾಗಿ ಸಾವಕನಹಳ್ಳಿಗೆ ಹೋದಾಗ ಕಾಂಗ್ರೆಸ್ ಮುಖಂಡರು ಶಾಸಕ ಕೃಷ್ಣ ಭೈರೇಗೌಡರಿಗೆ ಹಾರ ಹಾಕುತ್ತಿದ್ದರು. ಅವರನ್ನು ಮಾತನಾಡಿಸಲು ಹೋದಾಗ ಅವರ ಕೊರಳಲ್ಲಿದ್ದ ಅದೇ ಹಾರವನ್ನು ನನ್ನ ಕೊರಳಿಗೆ ಹಾಕಿದರು. ಸೇರ್ಪಡೆ ಎಂಬ ಪದವೇ ಬರಲಿಲ್ಲ. ನನಗೆ ಯಾವುದೇ ಆಮಿಷ ನೀಡಿರಲಿಲ್ಲ. ನಾನು ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತ’ ಎಂದು ಸ್ಪಷ್ಟನೆ ನೀಡಿದರು.

ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್. ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಪಿ.ಎಲ್.ಡಿ. ಬ್ಯಾಕ್ ಅಧ್ಯಕ್ಷ ಮುನಿರಾಜು, ವಿವಿಧ ಘಟಕದ ಪದಾಧಿಕಾರಿಗಳಾದ ಚಿಕ್ಕನಾರಾಯಣಸ್ವಾಮಿ, ಭರತ್ ಕುಮಾರ್, ನರಗನಹಳ್ಳಿ ಶ್ರೀನಿವಾಸ್, ವೆಂಕಟೇಶ್ ಮೂರ್ತಿ, ಜಗದೀಶ್, ಮಂಜುನಾಥ್, ರಾಮಸ್ವಾಮಿ, ರಾಮಾಂಜಿನಪ್ಪ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು