ಶನಿವಾರ, ಅಕ್ಟೋಬರ್ 24, 2020
23 °C
ವಿಜಯಪುರ: ಜೆಡಿಎಸ್ ಮುಖಂಡರ ಸಭೆಯಲ್ಲಿ ಶಾಸಕ ನಾರಾಯಣಸ್ವಾಮಿ

ಸ್ಥಳೀಯ ಅಧಿಕಾರಕ್ಕೆ ಶ್ರಮ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಸ್ಥಳೀಯವಾಗಿ ಅಧಿಕಾರ ಹಿಡಿಯುವಂತಹ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಹೋಬಳಿಯ ಗೊಡ್ಲು ಮುದ್ದೇನ ಹಳ್ಳಿ ಗ್ರಾಮದಲ್ಲಿ ಜ್ಯಾತ್ಯತೀತ ಜನತಾದಳ ಹೋಬಳಿ ಘಟಕದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಕ್ಷೇತ್ರಕ್ಕೆ ನೀಡಿರುವಷ್ಟು ಅನುದಾನವನ್ನು ಬಿಜೆಪಿ ಸರ್ಕಾರ ಜಾರಿಗೆ ಬಂದ ನಂತರ ನೀಡಲಿಲ್ಲ. ₹290 ಕೋಟಿ ವಾಪಸ್‌ ಪಡೆದುಕೊಂಡಿದ್ದಾರೆ. ಆದರೂ ಶಾಸಕರ ನಿಧಿಯಡಿ ಲಭ್ಯವಿರುವ ಅನುದಾನ ಸದ್ಬಳಕೆ ಮಾಡಿಕೊಂಡು ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆಗಿನ ಸಂಸದ ಎಂ.ವೀರಪ್ಪ ಮೊಯಿಲಿ ಅವರ ಶಿಫಾರಸ್ಸಿನ ಪತ್ರವನ್ನು ಹಿಡಿದುಕೊಂಡು ನಮ್ಮದೇ ಯೋಜನೆ ಎಂದು ಹೇಳಿಕೊಂಡಿದ್ದರು. ಆದರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ. ಈಗ ಕುಮಾರಸ್ವಾಮಿ ಅವರು ನೇರವಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ ನಂತರ ₹30 ಕೋಟಿ ಬಿಡುಗಡೆ ಮಾಡಿದ್ದಾರೆ. ಅದನ್ನು 3 ಹಂತದಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ‘ಹಳ್ಳಿಗಳು ಅಭಿವೃದ್ಧಿಯಾದಾಗ ಮಾತ್ರವೇ ರಾಷ್ಟ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರ ಹಿಡಿದು ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ನೀವು ಬದ್ಧರಾಗಿ ನಿಲ್ಲಬೇಕು. ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಬಂದರೆ ಅವರನ್ನು ನೋಡಲು ಬರುವ ಜನ ಮತಗಟ್ಟೆಯಲ್ಲಿ ಮತ ಹಾಕುತ್ತಿಲ್ಲ. ಪಕ್ಷದ ಮೇಲೆ ವಿಶ್ವಾಸವಿರುವ ಪ್ರತಿಯೊಬ್ಬರಿಂದಲೂ ಮತ ಹಾಕಿಸುವ ಕೆಲಸ ಮಾಡಬೇಕು’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಹಳ್ಳಿಗಳಲ್ಲಿ ಬಡವರಿಗೆ ಮನೆಗಳು ಸೇರಿದಂತೆ ಯಾವುದೇ ಸೌಲಭ್ಯ ಕಲ್ಪಿಸಬೇಕಾದರೆ ಗ್ರಾಮ ಪಂಚಾಯಿತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಸಂಘಟಿತರಾಗಿ ಶ್ರಮಿಸಬೇಕು. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿ, ವಿಧಾನಸಭೆ ಚುನಾವಣೆಯಲ್ಲೂ ಜೆಡಿಎಸ್‌ನ್ನು ಸದೃಢಗೊಳಿಸಬೇಕು’ ಎಂದರು.

ಮುಖಂಡರಾದ ಕಾರಹಳ್ಳಿ ಮುನೇಗೌಡ, ಕೋರಮಂಗಲ ವೀರಪ್ಪ, ಚಿಕ್ಕನಹಳ್ಳಿ ಸುಬ್ಬಣ್ಣ, ಸುರೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮಂಡಿಬೆಲೆ ರಾಜಣ್ಣ, ಕಲ್ಯಾಣ್ ಕುಮಾರ್ ಬಾಬು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.