ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒತ್ತುವರಿ ತೆರವು ಮೊದಲ ಆದ್ಯತೆಯಾಗಲಿ: ನ್ಯಾಯಾಧೀಶ ಪಣೀಂದ್ರ

ತಿಂಗಳಿಗೊಮ್ಮೆ ಕಂದಾಯ ಅಧಿಕಾರಿಗಳ ಸಭೆ ನಡೆಸಲು ಉಪಲೋಕಾಯುಕ್ತ ಸೂಚನೆ
Published 21 ಜನವರಿ 2024, 7:41 IST
Last Updated 21 ಜನವರಿ 2024, 7:41 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಸರ್ಕಾರಿ ಭೂಮಿ, ಗೋಮಾಳ, ಸರ್ಕಾರಿ ರಸ್ತೆಗಳ ಒತ್ತುವರಿ ಕುರಿತಂತೆಯೇ ಹೆಚ್ಚಿನ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿ ತಿಂಗಳಿಗೊಮ್ಮೆ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ದೂರುಗಳನ್ನು ಶೀಘ್ರ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಉಪಲೋಕಾಯುಕ್ತ ನ್ಯಾಯಾಧೀಶರಾದ ಪಣೀಂದ್ರ ಸೂಚಿಸಿದರು.

ತಾಲ್ಲೂಕು ಕಚೇರಿಗೆ ಶನಿವಾರ ದೀಢೀರ್‌ ಭೇಟಿಯ ನಂತರ ಸಭಾಂಗಣದಲ್ಲಿ ಸಾರ್ವಜನಿಕರೊಂದಿಗೆ ನಡೆದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು.

ಸಕಾಲ ಜಾರಿ ಬಳಿಕ ಸರ್ಕಾರಿ ಕಚೇರಿಗಳಲ್ಲಿ ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಕೆಲಸಗಳು ಆಗಬೇಕು. ಇಲ್ಲವಾದರೆ ಈ ಕುರಿತಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಇರುವ ಲೋಕಾಯುಕ್ತರಿಗೆ ಲಿಖಿತ ರೂಪದಲ್ಲಿ ದೂರು ನೀಡಬೇಕು. ಒಮ್ಮೆ ದೂರು ನೀಡಿದ ನಂತರ ಸಮಸ್ಯೆ ಇತ್ಯಾರ್ಥವಾಗುವವರೆಗೂ ಲೋಕಾಯುಕ್ತ ಅಧಿಕಾರಿಗಳು ನಿಗಾವಹಿಸಲಿದ್ದಾರೆ. ಸಾರ್ವಜನಿಕರು ಸುಳ್ಳು ದೂರು ನೀಡಿದರೆ ಅವರ ವಿರುದ್ಧವು ಕ್ರಮ ಕೈಗೊಳ್ಳಲಾಗುವುದು ಎಂದರು.

ಲೋಕಾಯುಕ್ತ ಪೊಲೀಸರು ಪ್ರತಿ ತಾಲ್ಲೂಕು ಹಂತದಲ್ಲೂ ಸಾರ್ವಜನಿಕರ ಕುಂದು ಕೊರತೆ ಸಭೆ ನಡೆಸುತ್ತಲೇ ಇದ್ದಾರೆ. ಸಾರ್ವಜನಿಕರು ದೂರು ನೀಡುವಾಗ ಲೋಕಾಯುಕ್ತ ಇಲಾಖೆ ಸಿದ್ದಪಡಿಸಿರುವ ಅರ್ಜಿಗಳ ಮೂಲಕವೇ ಸೂಕ್ತ ದಾಖಲಾತಿಗಳೊಂದಿಗೆ ಲಿಖಿತವಾಗಿ ದೂರುಗಳನ್ನು ನೀಡಬೇಕು. ಇದರಿಂದ ಸಮಸ್ಯೆ ಶೀಘ್ರವಾಗಿ ಪರಿಹರಿಸಲು ಸಾಧ್ಯವಾಗಲಿದೆ ಎಂದರು.

ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಎನ್‌.ಶಿವಶಂಕರ್‌ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆಯೇ ಹೆಚ್ಚಿನ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ. ಈ ಕುರಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಆದ್ಯತೆಯ ಮೇರೆಗೆ ಒತ್ತುವರಿ ತೆರವಿನ ದೂರುಗಳನ್ನು ತುರ್ತಾಗಿ ವಿಲೇವಾರಿ ಮಾಡಲಾಗುವುದು. ಸರ್ವೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದ ಕಾರಣದಿಂದ ಒತ್ತುವರಿ ಗುರುತಿಸುವಿಕೆಯು ವಿಳಂಬವಾಗುತಿತ್ತು. ಈಗ ಹೊಸದಾಗಿ ಸರ್ವೇ ಸಿಬ್ಬಂದಿ ಬಂದಿದ್ದಾರೆ ಎಂದರು.

ಜಿಲ್ಲೆಯಲ್ಲಿ ಜ.5 ರಿಂದ ಫೆ.5 ರವರೆಗೂ ಪೌತಿ ಖಾತೆ ಆಂದೋಲನ ನಡೆಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಶುಲ್ಕ ಇಲ್ಲದೆಯೇ ಸೂಕ್ತ ದಾಖಲಾತಿಗಳನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡುವ ಮೂಲಕ ಪೌತಿಖಾತೆಗಳನ್ನು ಮಾಡಿಸಿಕೊಳ್ಳಬೇಕು. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದರು.

ಬಾಗಿಲುಗಳಿಗೆ ನೋಟಿಸ್‌: ಮಧ್ಯಾಹ್ನ 12 ಗಂಟೆ ಸುಮಾರಿಗೆ ತುಮಕೂರು ಜಿಲ್ಲಾ ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ವಲೀ ಭಾಷಾ ಅವರ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿದ ಲೋಕಾಯುಕ್ತ ಪೊಲೀಸರು, ತಾಲ್ಲೂಕು ಕಚೇರಿಯಲ್ಲಿನ ಎಲ್ಲಾ ವಿಭಾಗದ ಬಾಗಿಲುಗಳನ್ನು ಬಂದ್‌ ಮಾಡುವ ಮೂಲಕ ನೋಟಿಸ್‌ ಅಂಟಿಸಿ ಬಾಗಿಲು ತೆರೆಯದಂತೆ ಸೂಚನೆ ನೀಡಿದರು. ನಂತರ ಪ್ರತಿ ವಿಭಾಗಕ್ಕೂ ಭೇಟಿ ನೀಡಿ ಸ್ಥಳದಲ್ಲಿದ್ದ ಸಾರ್ವಜನಿಕರಿಂದ ಕುಂದು ಕೊರತೆ ಕೇಳಿ ಬರೆದುಕೊಂಡು ಬಾಗಿಲುಗಳನ್ನು ತೆರೆದರು.

ತಹಶೀಲ್ದಾರ್‌ ವಿಭಾ ವಿದ್ಯಾರಾಥೋಡ್‌,ಗ್ರೇಡ್‌-2 ತಹಶೀಲ್ದಾರ್‌ ಪ್ರಕಾಶ್‌ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿನ ವಿವಿಧ ವಿಭಾಗದ ಬಾಗಿಲುಗಳಿಗೆ ಲೋಕಾಯುಕ್ತ ಪೊಲೀಸರು ಅಂಟಿಸಲಾಗಿದ್ದ ನೋಟಿಸ್‌
ದೊಡ್ಡಬಳ್ಳಾಪುರ ತಾಲ್ಲೂಕು ಕಚೇರಿಯಲ್ಲಿನ ವಿವಿಧ ವಿಭಾಗದ ಬಾಗಿಲುಗಳಿಗೆ ಲೋಕಾಯುಕ್ತ ಪೊಲೀಸರು ಅಂಟಿಸಲಾಗಿದ್ದ ನೋಟಿಸ್‌

ಲೋಕಾಯುಕ್ತಕ್ಕೆ ತಪ್ಪು ಮಾಹಿತಿ

ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಸ್ಮಶಾನ ಗುಂಡುತೋಪು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಆದರೆ ಸ್ಥಳ ಪರಿಶೀಲನೆ ನಡೆಸದೇ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಮಾಡಲಾಗಿದೆ ಎಂದು ಸುಳ್ಳುವರದಿ ನೀಡಿದ್ದಾರೆ. ಈ ಬಗ್ಗೆ ದಾಖಲೆಗಳ ಸಮೇತ ಮತ್ತೊಮ್ಮೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ತಪ್ಪು ವರದಿ ನೀಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಡ್ಡರಹಳ್ಳಿ ಗ್ರಾಮದ ತಿಪ್ಪಯ್ಯ ಅರುಣ್‌ ಉಪಲೋಕಾಯುಕ್ತ ನ್ಯಾಯಾಧೀಶರಿಗೆ ಲಿಖಿತವಾಗಿ ದೂರು ನೀಡಿದರು.

ದಾಖಲಾತಿಗಳ ಕೊಠಡಿಗೆ ಬೀಗ

ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬರುತ್ತಿರುವುದೇ ಹಳೇ ದಾಖಲಾತಿ ವಿಭಾಗದ ಕುರಿತಂತೆ. ಯಾವುದೇ ಜಮೀನಿಗೆ ಸಂಬಂಧಿಸಿದಂತೆ ಒಂದು ಸಣ್ಣ ದಾಖಲಾತಿ ಪಡೆಯಬೇಕಿದ್ದರು ಅರ್ಜಿ ನೀಡಿ ಹತ್ತಾರು ಬಾರಿ ರೈತರು ಅಲೆದಾಡುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಲೋಕಾಯುಕ್ತ ಪೊಲೀಸರ ಬಳಿ ದೂರು ಹೇಳಿಕೊಂಡರು. ಲೋಕಾಯುಕ್ತ ಪೊಲೀಸರು ತಾಲ್ಲೂಕು ಕಚೇರಿಗೆ ಮಧ್ಯಾಹ್ನ ಭೇಟಿ ನೀಡಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮೊದಲು ಹಳೇ ಕಡತಗಳ ದಾಖಲಾತಿ ಕೊಠಡಿಗೆ ಬೀಗಿ ಹಾಕಲಾಯಿತು. ಲೋಕಾಯುಕ್ತರು ತಾಲ್ಲೂಕು ಕಚೇರಿಯಿಂದ ಹೊರಗೆ ಹೋಗುವವರೆಗೂ ಈ ಕೊಠಡಿಯ ಬಾಗಿಲು ತರೆದಿರಲಿಲ್ಲ.

ಮಂಜೂರಿ ಜಮೀನುಗಳದ್ದೇ ಹೆಚ್ಚು ದೂರು

ತಾಲ್ಲೂಕು ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಉಪಲೋಕಾಯುಕ್ತ ನ್ಯಾಯಾಧೀಶರ ಮುಂದೆ ಹೆಚ್ಚಿನ ದೂರುಗಳನ್ನು ಸಾರ್ವಜನಿಕರು ಹೇಳಿಕೊಂಡಿದ್ದು ಸರ್ಕಾರದಿಂದ ಬಡವರಿಗೆ ಮಂಜೂರಾಗಿರುವ ಜಮೀನಿನ ಕುರಿತಂತೆಯೇ ಆಗಿದ್ದವು. ಅದರಲ್ಲೂ ಪೋಡಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿ ಹತ್ತಾರು ವರ್ಷಗಳು ಕಳೆದಿದ್ದರು ಸಹ ಕೆಲಸ ಆಗದೇ ಇರುವ ಬಗ್ಗೆ ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ದೂರುಗಳನ್ನು ಉಪಲೋಕಾಯುಕ್ತರ ಗಮನಕ್ಕೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT