ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌: ಕೃಷ್ಣಪ್ಪ ಅಧ್ಯಕ್ಷ

1,498 ಮತ ಪಡೆದು ಜಯಭೇರಿ
Last Updated 22 ನವೆಂಬರ್ 2021, 6:24 IST
ಅಕ್ಷರ ಗಾತ್ರ

ದೇವನಹಳ್ಳಿ:ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಬಿ.ಎನ್. ಕೃಷ್ಣಪ್ಪ ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿ ಮಹಾಲಿಂಗಯ್ಯ ಅವರ ವಿರುದ್ಧ ಕೃಷ್ಣಪ್ಪ ಅವರು 241 ಮತಗಳ ಅಂತರದಿಂದ ಜಯಗಳಿಸಿದ್ದು, ನಿಕಟಪೂರ್ವ ಅಧ್ಯಕ್ಷ ಚಿ.ಮಾ. ಸುಧಾಕರ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ವಿಜಯಪುರ, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಕನಸವಾಡಿ ಮತಗಟ್ಟೆಗಳಲ್ಲಿ ಭಾನುವಾರ ಸಾಹಿತ್ಯ ಪ್ರೇಮಿಗಳು ಉತ್ಸಾಹದಿಂದ ಸಾಲುಗಟ್ಟಿ ಮತದಾನ ಮಾಡಿದರು.

ಚುನಾವಣೆಯಲ್ಲಿ ಬಿ.ಎನ್. ಕೃಷ್ಣಪ್ಪ, ಮಹಾಲಿಂಗಯ್ಯ, ಲಕ್ಷ್ಮೀ ಶ್ರೀನಿವಾಸ್, ನಿಕಟಪೂರ್ವ ಅಧ್ಯಕ್ಷ ಚಿ.ಮಾ. ಸುಧಾಕರ್ ಕಣದಲ್ಲಿದ್ದರು. ಕಳೆದ ಒಂದು ತಿಂಗಳಿಂದ ಚುನಾವಣಾ ಪ್ರಚಾರ ನಡೆಸಿದ್ದರ ಪರಿಣಾಮ ಪ್ರಾಂಶುಪಾಲರಾಗಿ, ಸಾಹಿತಿಗಳಾಗಿ ಕರ್ತವ್ಯ ನಿರ್ವಹಿಸಿ ಅಪಾರ ಪ್ರಮಾಣದ ಶಿಷ್ಯ ವೃಂದವನ್ನು ಹೊಂದಿದ್ದ ಕೃಷ್ಣಪ್ಪ ಅವರು, ದೇವನಹಳ್ಳಿಯಲ್ಲಿ ಸಮನ್ವಯ ಸಮಿತಿ ರಚಿಸಿಕೊಂಡು ಸಂಘಟಿತರಾಗಿ ಕೆಲಸ ಮಾಡಿದ್ದರ ಫಲವಾಗಿ ಚುನಾಯಿತರಾಗಿದ್ದಾರೆ.

ಸ್ಪರ್ಧೆಯಲ್ಲಿ ನಾಲ್ಕು ಮಂದಿ ಇದ್ದರೂ, ಮೂವರು ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ಇತ್ತು. ಕೊನೆಗೂ ಇಬ್ಬರನ್ನು ಮಣಿಸುವ ಮೂಲಕ ಸಾಹಿತ್ಯ ಪರಿಷತ್‌ನ ನೂತನ ಸಾರಥಿಯಾಗಿ ಕೃಷ್ಣಪ್ಪ ಹೊರಹೊಮ್ಮಿದ್ದಾರೆ.

ಜಿಲ್ಲೆಯಲ್ಲಿ 7,416 ಮತದಾರರ ಪೈಕಿ 4,383 ಮಂದಿ ಮತ ಚಲಾವಣೆ ಮಾಡಿದ್ದಾರೆ. ಶೇ 59ರಷ್ಟು ಮತದಾನವಾಗಿದೆ.ದೊಡ್ಡಬಳ್ಳಾಪುರ1,559, ದೇವನ ಹಳ್ಳಿ1,730, ಹೊಸಕೋಟೆ 510, ನೆಲಮಂಗಲದಲ್ಲಿ584 ಮಂದಿ ಮತಚಲಾಯಿಸಿದ್ದರು.

ಬಿ.ಎನ್. ಕೃಷ್ಣಪ್ಪ1,498, ಮಹಾಲಿಂಗಯ್ಯ1,256, ಲಕ್ಷ್ಮೀ ಶ್ರೀನಿವಾಸ್463, ಚಿ.ಮಾ. ಸುಧಾಕರ್ 1,074 ಮತಗಳನ್ನು
ಪಡೆದಿದ್ದಾರೆ.

ನೂತನ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಇದು ಕನ್ನಡಮ್ಮನ ಸೇವೆಗಾಗಿ ಸಿಕ್ಕಿರುವ ಅವಕಾಶ. ಪರಾಜಿತ ಅಭ್ಯರ್ಥಿಗಳನ್ನು ಕಡೆಗಣಿಸದೆ, ಅವರ ಸಲಹೆ ಸೂಚನೆ ಪಡೆದು, ಸಾಹಿತ್ಯ ಪರಿಷತ್‌ನ ಅಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

‘ಪ್ರತಿಯೊಂದು ತಾಲ್ಲೂಕಿನಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಭವನಗಳ ನಿರ್ಮಾಣ ಸೇರಿದಂತೆ ಚುನಾವಣಾ ಪೂರ್ವದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಗ್ರಾಮೀಣ ಯುವ ಸಾಹಿತಿಗಳಿಗೆ ಕಾವ್ಯ ಕಮ್ಮಟ ಆಯೋಜಿಸಿ, ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯ ಘಟಕದ ಅಧ್ಯಕ್ಷರ ಗಮನ ಸೆಳೆಯುತ್ತೇನೆ’ ಎಂದರು.

ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಮಾತನಾಡಿ, ‘ಚುನಾವಣೆಯಲ್ಲಿ ಸೋಲು ಕಂಡಿರುವುದಕ್ಕೆ ಬೇಸರವಿಲ್ಲ. ಸಾಹಿತ್ಯ ಪ್ರೇಮಿಗಳು ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ. ಹಿಂದಿನ ಸಾಲಿನಲ್ಲಿ ನನಗೆ ನೀಡಿದ್ದ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಉತ್ತಮವಾದ ಕಾರ್ಯಕ್ರಮಗಳನ್ನು ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT