ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತೆರಿಗೆಗೆ ಒಳಪಡದ ಆಸ್ತಿ ಸಮೀಕ್ಷೆಗೆ ಚಾಲನೆ

Last Updated 21 ಅಕ್ಟೋಬರ್ 2022, 6:11 IST
ಅಕ್ಷರ ಗಾತ್ರ

ವಿಜಯಪುರ (ಬೆಂ.ಗ್ರಾಮಾಂತರ):ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಭೂಮಿ ಮತ್ತು ಕಟ್ಟಡಗಳ ಮ್ಯಾನ್ಯುಯಲ್ ಸಮೀಕ್ಷೆ ನಡೆಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸಿ ಪಂಚತಂತ್ರ 2.0 ತಂತ್ರಾಂಶದಲ್ಲಿ ಅಳವಡಿಕೆಗೆ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಬೂದಿಗೆರೆ ಗ್ರಾಮ ಪಂಚಾಯಿತಿಯಿಂದ ಸಮೀಕ್ಷಾ ಕಾರ್ಯಕ್ಕೆ ಗುರುವಾರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್.ಡಿ. ವಸಂತ್ ಕುಮಾರ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪಂಚಾಯಿತಿಗಳ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಆಸ್ತಿಗಳ ತೆರಿಗೆ ವ್ಯಾಪ್ತಿಯನ್ನು ವಿಸ್ತರಣೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಬೆಂಗಳೂರು ನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಸಂಪೂರ್ಣ ಮಾಹಿತಿಯ ಡಿಜಿಟಲೀಕರಣಕ್ಕೆ ಸೂಚಿಸಲಾಗಿದೆ ಎಂದರು.

ತುಮಕೂರು ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳ ಸಂಪೂರ್ಣ ಮಾಹಿತಿಯನ್ನು ಮ್ಯಾನ್ಯೂಯಲ್ ಸಮೀಕ್ಷೆ ಮೂಲಕ ಅನುಷ್ಠಾನಗೊಳಿಸಲು ಸರ್ಕಾರ ಆದೇಶಿಸಿದೆ. ಕೃಷಿ ತೆರಿಗೆ ನಿರ್ಧರಣೆಗೆ ಒಳಪಟ್ಟಿರದ ಎಲ್ಲಾ ಭೂಮಿ ಮತ್ತು ಕಟ್ಟಡಗಳ ಮ್ಯಾನುಯಲ್ ಸಮೀಕ್ಷಾ ಕಾರ್ಯ ನಡೆಸಿ ಅಂತಹ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

ನರೇಗಾ ಯೋಜನೆ ಸಹಾಯಕ ನಿರ್ದೇಶಕ ಸುನೀಲ್ ಮಾತನಾಡಿ, ಸಮೀಕ್ಷೆ ಮೂಲಕ ಗುರುತಿಸಿದ ಕೃಷಿ ತೆರಿಗೆಯೇತರ ಆಸ್ತಿಗಳಿಗೆ ವೈಜ್ಞಾನಿಕವಾಗಿ ತೆರಿಗೆ ನಿರ್ಧರಿಸಲು ಸಹಕಾರಿಯಾಗುತ್ತದೆ. ಆಸ್ತಿಗಳ ವಿವರವನ್ನು ನಿಖರವಾಗಿ ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಆಸ್ತಿಗಳ ಮಾಲೀಕರ ವಿವರವನ್ನು ಪಾರದರ್ಶಕವಾಗಿ ಸ್ವಯಂಚಾಲಿತ ತೆರಿಗೆ ಲೆಕ್ಕಾಚಾರಕ್ಕೆ ಸೇರಿಸಲಾಗುತ್ತದೆ. ಆ ಮೂಲಕ ತೆರಿಗೆ ಪಾವತಿ ಸಂಬಂಧ ಕ್ರಮವಹಿಸಲು ಅನುಕೂಲವಾಗಲಿದೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನರ್ಮದಾ ಮಾತನಾಡಿ, ಸಾರ್ವಜನಿಕರು ಸೂಕ್ತ ದಾಖಲೆ ಹಾಗೂ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಕೋರಿದರು.

ಪಂಚಾಯಿತಿ ಅಧ್ಯಕ್ಷೆ ಗೀತಾ ಆನಂದ್, ಉಪಾಧ್ಯಕ್ಷೆ ರಿಜ್ವಾನ ನಜೀರ್ ಅಹಮದ್, ರಾಮಾಂಜಿನೇಯ ದಾಸ್, ಮೋಹನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT