ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ| ಮತದಾರರ ಓಲೈಕೆಗೆ ನಾಯಕರ ಕಸರತ್ತು

₹ 6 ಕೋಟಿ ಮೌಲ್ಯದ ಭೂಮಿ ದಾನ ನೀಡಿದ ಶರತ್‌: ಶಿವೋತ್ಸವಕ್ಕೆ ಮುಂದಾದ ಎಂಟಿಬಿ ನಾಗರಾಜ್‌
Last Updated 18 ಫೆಬ್ರವರಿ 2023, 5:24 IST
ಅಕ್ಷರ ಗಾತ್ರ

ಹೊಸಕೋಟೆ: ಚುನಾವಣೆ ಸಮೀಪಿಸುತ್ತಿರುವಾಗಲೇ ಶಾಸಕ ಶರತ್‌ ಬಚ್ಚೇಗೌಡ ಅವರು ಒಕ್ಕಲಿಗರ ಸಂಘಕ್ಕೆ ₹ 6 ಕೋಟಿ ಮೌಲ್ಯದ ಭೂಮಿಯನ್ನು ದಾನವಾಗಿ ನೀಡಿದ್ದು, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ರಾಜಕೀಯ ತಂತ್ರಗಾರಿಕೆ ಹೂಡಿದ್ದಾರೆ.

ತಾಲ್ಲೂಕಿನ ಒಕ್ಕಲಿಗರ ಸಂಘಕ್ಕೆ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನು ದಾನ ನೀಡಿದ್ದಾರೆ. ಕಳೆದ ಬಾರಿ ಕೆಂಪೇಗೌಡ ಜಯಂತಿಯಲ್ಲಿ ಸಮುದಾಯಕ್ಕೆ ಭೂಮಿ ನೀಡುವುದಾಗಿ ಆಶ್ವಾಸನೆ ನೀಡಲಾಗಿತ್ತು. ಅದನ್ನು ಅಧಿಕೃತವಾಗಿ ನೋಂದಣಿ ಮಾಡಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕಾರಿ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ದಾನ ನೀಡಿರುವ ಭೂಮಿಯಲ್ಲಿ ಸಮುದಾಯದ ಅಭಿವೃದ್ಧಿಗೆ ಶಾಲಾ, ಕಾಲೇಜು, ಸಮುದಾಯ ಭವನ ಸೇರಿದಂತೆ ಇತರೇ ಸಮಾಜಮುಖಿ ಉಪಯೋಗಕ್ಕೆ ಬಳಸಿಕೊಳ್ಳಬೇಕು ಎಂದ ತಿಳಿಸಿರುವ ಅವರು, ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಇದರಲ್ಲಿ ಯಾವುದೇ ರಾಜಕೀಯ ಲಾಭದ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ.

ಆದರೆ, ರಾಜಕೀಯ ವಲಯದಲ್ಲಿ ಇದೊಂದು ಉಡುಗೊರೆ ರಾಜಕೀಯ ಎಂದೆನಿಸಿಕೊಂಡಿದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಸುಮಾರು 45 ಸಾವಿರ ಮತಗಳಿದ್ದು ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಹಿನ್ನೆಲೆಯಲ್ಲಿ ದಾನ ಮಾಡಲಾಗಿದೆ ಎನ್ನಲಾಗಿದೆ.

ಇನ್ನೂ ಶಿವರಾತ್ರಿ ಹಿನ್ನೆಲೆಯಲ್ಲಿ ಸಚಿವ ಎಂಟಿಬಿ ನಾಗರಾಜ್‌ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಶಿವೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಲಿಮ್ಲಾ ಬುಕ್ಸ್‌ ಆಫ್‌ ರೆಕಾರ್ಡ್‌ನಲ್ಲಿ ಸೇರುವಂತೆ 60 ಅಡಿ ಅಗಲು, 60 ಅಡಿ ಉದ್ದದ ಅವಿಮುಕ್ತೇಶ್ವರ ಲಿಂಗ ನಿರ್ಮಾಣ ಮಾಡಿದ್ದು, ಅದರಲ್ಲಿ 108 ಪುಟ್ಟ ಲಿಂಗಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಶಿವರಾತ್ರಿಯಲ್ಲಿ ಸಮಸ್ತ ಸಮುದಾಯದ ಆಶೀರ್ವಾದಕ್ಕೆ ಎಂಟಿಬಿ ನಾಗರಾಜ್‌ ಅವರ ಪುತ್ರ ಎಂಟಿಬಿ ರಾಜೇಶ್‌ ಎಲ್ಲಾ ರೀತಿಯ ಆರ್ಥಿಕ ಸಹಾಯ ಮಾಡಿದ್ದಾರೆ. ಅವರದ್ದೇ ಪಕ್ಷದ ಅನೇಕ ಮುಖಂಡ ನೇತೃತ್ವದಲ್ಲಿ ದೊಡ್ಡಮಟ್ಟದಲ್ಲಿ ಮೂರು ದಿನ ಕಾರ್ಯಕ್ರಮ ಆಯೋಜಿಸಿ ಭಕ್ತರನ್ನು ಸೆಳೆಯಲು ಮುಂದಾಗಿದ್ದಾರೆ.

ಇನ್ನೂ ಶರತ್‌ ಬಚ್ಚೇಗೌಡ ಅವರ ಪತ್ನಿ ಪ್ರತಿಭಾ ಕಾಂಗ್ರೆಸ್‌ ಕಾರ್ಯಕರ್ತರೊಂದಿಗೆ ದೇಗುಲದ ಸ್ವಚ್ಛತೆ ಮಾಡುತ್ತಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅತ್ತ ಎಂಬಿಟಿ ಅವಿಮುಕ್ತೇಶ್ವರ ಶಿವೋತ್ಸವದಲ್ಲಿ ತೊಡಗಿಸಿಕೊಂಡರೆ ರಾಜಕೀಯ ಜಾಣ್ಮೆಯಿಂದ ಅವಿಮುಕ್ತೇಶ್ವರ ದೇಗುಲ ಸ್ವಚ್ಛತಾ ಕಾರ್ಯದಲ್ಲಿ ಶರತ್‌ ಕುಟುಂಬ ತೊಡಗಿದೆ.

ಸರ್ವ ಸಮುದಾಯ ಸೆಳೆಯಲು ಯತ್ನ: ಜತೆಗೆ ಮುಸ್ಲಿಂ ಸಮುದಾಯವನ್ನು ತನ್ನತ್ತ ಸೆಳೆಯಲು ಕಳೆದ ತಿಂಗಳಷ್ಟೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕವ್ವಾಲಿ ಕಾರ್ಯಕ್ರಮ ನಡೆಸಿದ್ದ ಎಂಟಿಬಿ ನಾಗರಾಜ್ ಮತ್ತೆ ನಗರದ ಜನರನ್ನು ಸೆಳೆಯಲು ಶಿವರಾತ್ರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ 60 ಅಡಿ ಶಿವಲಿಂಗ ನಿರ್ಮಾಣ ಮಾಡಿದ್ದಾರೆ. ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT