ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ | ನಿಷೇಧ ಇದ್ದರೂ ಎತ್ತುಗಳ ಜತೆ ಘಾಟಿಗೆ ಬಂದ ರೈತರು

ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಜಾತ್ರೆ ಆರಂಭ
Last Updated 18 ಜನವರಿ 2023, 11:25 IST
ಅಕ್ಷರ ಗಾತ್ರ

ತೂಬಗೆರೆ (ದೊಡ್ಡಬಳ್ಳಾಪುರ): ರಾಸುಗಳಲ್ಲಿ ಚರ್ಮಗಂಟು ರೋಗ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯಸ್ವಾಮಿ ಎತ್ತುಗಳ ಜಾತ್ರೆಯನ್ನು ನವೆಂಬರ್‌ನಲ್ಲಿ ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿತ್ತು. ಆದರೆ, ಈಗ ರೈತರು ಸ್ವಯಂಪ್ರೇರಿತರಾಗಿ ಎತ್ತುಗಳೊಂದಿಗೆ ಜಾತ್ರೆಗೆ ಬಂದಿದ್ದಾರೆ.

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಬ್ರಹ್ಮ ರಥೋತ್ಸವಕ್ಕೂ ಮುನ್ನ ಡಿಸೆಂಬರ್‌ನಲ್ಲಿ ನಡೆಯುವ ದನಗಳ ಜಾತ್ರೆಯು ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿದೆ. ತಮಿಳುನಾಡು, ಆಂಧ್ರಪ್ರದೇಶದ ರೈತರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಕೃಷಿ ಕೆಲಸಕ್ಕೆ ಎತ್ತುಗಳನ್ನು ಖರೀದಿಸಲು ಈ ಜಾತ್ರೆಗೆ ಬರುತ್ತಾರೆ.

2022ರ ಸಾಲಿನ ಘಾಟಿ ದನಗಳ ಜಾತ್ರೆ ಡಿ. 20ರಂದು ನಡೆಯಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಚರ್ಮಗಂಟು ರೋಗ ಉಲ್ಬಣಗೊಂಡಿದ್ದ ಹಿನ್ನೆಲೆಯಲ್ಲಿ ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ ಮತ್ತು ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. 2022ರ ನ. 30ರಿಂದ ಜ. 31ರ ವರೆಗೂ ನಿಷೇಧದ ಆದೇಶ ಜಾಲ್ತಿಯಲ್ಲಿದೆ. ಆದರೆ, ದನಗಳ ಜಾತ್ರೆಗೆ ರೈತರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ನಿಷೇಧದ ನಡುವೆಯೂ ದನಗಳ ಜಾತ್ರೆಗೆ ನೂರಾರು ಜೋಡಿ ಎತ್ತುಗಳು ಬಂದಿವೆ.

ಜಾನುವಾರು ಅವಲಂಬಿಸಿ ರೈತರು ಕೃಷಿ ಮಾಡುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಘಾಟಿ ದನಗಳ ಜಾತ್ರೆಗೆ ಬರುವ ರೈತರು ತಮಗೆ ಬೇಕಾದ ಎತ್ತುಗಳನ್ನು ಖರೀದಿ ಮಾಡುತ್ತಾರೆ. ಜೊತೆಗೆ, ತಾವು ಜೋಡಿ ಮಾಡಿದ ಹೋರಿಗಳನ್ನು ಮಾರುವ ಮೂಲಕ ಲಾಭಗಳಿಸುತ್ತಾರೆ. ಆದೇಶಕ್ಕೆ ಬೆಲೆ ಕೊಟ್ಟು ಸುಮ್ಮನಾಗಿದ್ದ ರೈತರು ಸ್ವಯಂ ಪ್ರೇರಿತರಾಗಿ ಜ. 16ರಿಂದ 23ರ ವರೆಗೂ ದನಗಳ ಜಾತ್ರೆ ನಡೆಸುತ್ತಿದ್ದಾರೆ.

ಪೆಂಡಾಲ್‌ ಹಾಕಿರುವ ರೈತರು ದನಗಳ ವ್ಯಾಪಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಜಾತ್ರೆಯಿಂದ ತೆರಳುವಂತೆ ಪಶು ಆರೋಗ್ಯಾಧಿಕಾರಿಗಳು ರೈತರಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ, ಅಧಿಕಾರಿಗಳ ಮಾತಿಗೆ ಜಗ್ಗದ ರೈತರು ದನಗಳ ಜಾತ್ರೆ ನಡೆಸುವುದಾಗಿ ಹಠ ಹಿಡಿದಿದ್ದಾರೆ.

ಅನುಮತಿ ಇಲ್ಲ:

ಜಾತ್ರೆ ನಡೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿಲ್ಲ. ಹೀಗಾಗಿ ಘಾಟಿ ದೇವಾಲಯದಿಂದ ಜಾತ್ರೆಗೆ ಆಗಮಿಸಿರುವ ರೈತರಿಗೆ ಯಾವುದೇ ರೀತಿಯ ಸೌಲಭ್ಯ ನೀಡಲು ಬರುವುದಿಲ್ಲ. ಜಾತ್ರೆ ನಿಷೇಧ ಮಾಡಿರುವುದು ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದಲೇ ಹೊರತು ರೈತರಿಗೆ ತೊಂದರೆ ನೀಡುವ ಉದ್ದೇದೆಶದಿಂದ ಅಲ್ಲ. ಜಿಲ್ಲಾಡಳಿತದ ಕಾಳಜಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಿ. ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT