ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ವೈಭವದ ದೊಮ್ಮಸಂದ್ರ ಜಾತ್ರೆ

Last Updated 8 ಮಾರ್ಚ್ 2023, 5:53 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನ ದೊಮ್ಮಸಂದ್ರದಲ್ಲಿ ಶ್ರೀಕಾಶಿ ವಿಶ್ವನಾಥೇಶ್ವರ ಸ್ವಾಮಿ ಹಾಗೂ ಮಹಾಗಣಪತಿ ಸುಬ್ರಮಣ್ಯ ದೇವರ ಬ್ರಹ್ಮ ರಥೋತ್ಸವ ಸಡಗರದಿಂದ ಮಂಗಳವಾರ ನೆರವೇರಿತು. ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಮಂದಿ ರಥೋತ್ಸವದಲ್ಲಿ ಭಾಗಿಯಾಗಿದ್ದರು. ರಥೋತ್ಸವದ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಅಲಂಕೃತ ರಥದಲ್ಲಿ ಗಿರಿಜಾ ಸಮೇತ ಕಾಶಿ ವಿಶ್ವನಾಥೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಧ್ಯಾಹ್ನ 1ರ ವೇಳೆಗೆ ಕೂರಿಸಲಾಯಿತು. ದೇವಾಲಯದ ಅರ್ಚಕರು ಧಾರ್ಮಿಕ ಪೂಜೆ ನೆರವೇರಿಸಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು.

ಕಾಶಿ ವಿಶ್ವನಾಥೇಶ್ವರ ಸ್ವಾಮಿ ರಥ ಹಾಗೂ ಗಣೇಶ ಸುಬ್ರಮಣ್ಯ ಸ್ವಾಮಿ ರಥಗಳು ಗ್ರಾಮದ ಮುಖ್ಯಬೀದಿಗಳಲ್ಲಿ ಸಾಗಿದವು. ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೈಭವದ ರಥೋತ್ಸವವನ್ನು ಕಣ್ತುಂಬಿಕೊಂಡರು. ಭಕ್ತರು ದವನ ಚುಚ್ಚಿದ ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಗ್ರಾಮದ ವಿವಿಧೆಡೆ ಅರವಂಟಿಗೆಗಳನ್ನು ಸ್ಥಾಪಿಸಿ ಆಗಮಿಸಿದ್ದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾಯಿತು.

ರಥೋತ್ಸವದಲ್ಲಿ ಮಹಿಳಾ ಡೊಳ್ಳುಕುಣಿತ, ವೀರಗಾಸೆ, ಗಾರುಡಿ ಗೊಂಬೆ, ತಮಟೆ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳು ಪಾಲ್ಗೊಂಡು ಉತ್ಸವಕ್ಕೆ ಮೆರುಗು ನೀಡಿದವು. ರಥೋತ್ಸವದ ಅಂಗವಾಗಿ ಕಾಶಿ ಯಾತ್ರೆ, ಗಿರಿಜಾ ಕಲ್ಯಾಣ, ನಂದಿ ವಾಹನೋತ್ಸವ, ಧೂಳೋತ್ಸವ, ಉಯ್ಯಾಲೋತ್ಸವ ನಡೆದವು. ಮುತ್ಯಾಲಮ್ಮ ದೇವಿ ಕರಗ ಮಹೋತ್ಸವ, ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT