ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ ಸಂಘರ್ಷಕ್ಕೆ ಸಹಬಾಳ್ವೆಯೇ ಪರಿಹಾರ: ಸಂಜಯ್‌ ಗುಬ್ಬಿ

ಪರಿಸರ ತಜ್ಞ ಸಂಜಯ್‌ ಗುಬ್ಬಿ
Published 11 ಡಿಸೆಂಬರ್ 2023, 15:56 IST
Last Updated 11 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಆನೇಕಲ್ : ತಾಲ್ಲೂಕಿನ ಬನ್ನೇರುಘಟ್ಟ ಜಂಗಲ್‌ಲಾಡ್ಜ್‌ ಅಂಡ್‌ ರೆಸಾರ್ಟ್‌ನಲ್ಲಿ ಬನ್ನೇರುಘಟ್ಟ ನ್ಯಾಷನಲ್‌ ಪಾರ್ಕ್‌ ಮತ್ತು ಹೊಳೆಮತ್ತಿ ನೇಚರ್‌ ಫೌಂಡೇಷನ್‌ ಸಹಯೋಗದಲ್ಲಿ ಚಿರತೆ ಮತ್ತು ಮಾನವ ಸಂಘರ್ಷ ಕಾರ್ಯಾಗಾರ ಆಯೋಜಿಸಲಾಗಿತ್ತು.

ಪರಿಸರ ತಜ್ಞ ಸಂಜಯ್‌ ಗುಬ್ಬಿ ಮಾತನಾಡಿ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷಕ್ಕೆ ಸಹಬಾಳ್ವೆಯೇ ಪರಿಹಾರ. ಹಾಗಾಗಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆ ಪ್ರಾಣಿಗಳಿರುವ ಪ್ರದೇಶದಲ್ಲಿ ಮನುಷ್ಯರು ಎಚ್ಚರಿಕೆಯಿಂದ ಇರುವುದನ್ನು ಕಲಿತುಕೊಳ್ಳಬೇಕು. ವನ್ಯಜೀವಿ ಆವಾಸ ಸ್ಥಾನಗಳಲ್ಲಿ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗುತ್ತಿವೆ. ಇದರಿಂದಾಗಿ ಸಮಸ್ಯೆಗಳು ತಲೆದೂರುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಚಿರತೆ, ಹುಲಿ, ಆನೆ, ಕರಡಿ ಮತ್ತು ಮಾನವರ ಸಂಘರ್ಷಕ್ಕೆ ಕೊನೆ ಎಂಬುದಿಲ್ಲ. ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡರೂ ಶಾಶ್ವತವಾಗಿ ತಡೆಯಲು ಸಾಧ್ಯವಿಲ್ಲ. ವನ್ಯಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜತೆಗೆ ಅರಣ್ಯದಂಚಿನಲ್ಲಿ ವಸತಿ ಸಮುಚ್ಛಯಗಳು ನಿರ್ಮಾಣವಾಗಿ ಜನಸಂದಣಿ ಹೆಚ್ಚಾಗುತ್ತಿದೆ. ಅರಣ್ಯ ವ್ಯಾಪ್ತಿ ಇದ್ದಷ್ಟೇ ಇರುವುದರಿಂದ ವನ್ಯಜೀವಿಗಳು ನಾಡಿನತ್ತ ಬರುತ್ತಿವೆ. ವನ್ಯಜೀವಿಗಳನ್ನು ನಿಭಾಯಿಸಿ ಬದುಕುವುದನ್ನು ಕಲಿಯಬೇಕಾಗಿದೆ. ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದರು.

ನಗರ ಪ್ರದೇಶದಲ್ಲಿ ಚಿರತೆಗಳು ಕಾಣಿಸಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ. ಆದರೆ, ಚಿರತೆ ಸೆರೆ ಹಿಡಿಯುವಲ್ಲಿ ಇಲಾಖೆ ಸಿದ್ಧತೆ, ಅನುಭವ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿಗೆ ಸೂಕ್ತ ತರಬೇತಿ ಮಾರ್ಗದರ್ಶನ ನೀಡುವ ಅವಶ್ಯ ಇದೆ. ಪ್ರಾಣಿಗಳನ್ನು ಸೆರೆ ಹಿಡಿಯುವ ಸಂದರ್ಭದಲ್ಲಿ ಉಪಕರಣಗಳ ಕೊರತೆ ಮತ್ತು ಅವುಗಳ ಬಳಕೆ ಪೂರ್ವಸಿದ್ಧತೆ ಇಲ್ಲದಿರುವುದು ಕಾರ್ಯಾಚರಣೆಗೆ ಹಿನ್ನೆಡೆಯಾಗುತ್ತಿದೆ. ಸಿಬ್ಬಂದಿ ತಾವು ರಕ್ಷಣೆ ಮಾಡಿಕೊಂಡು ಪ್ರಾಣಿಗಳನ್ನು ಹಿಡಿಯಬೇಕಾಗಿದೆ ಎಂದರು.

ಪರಿಸರ ತಜ್ಞ ಉಮಾ ರಾಮಕೃಷ್ಣನ್‌ ಉಪನ್ಯಾಸ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್‌ ಪ್ರಿಯದರ್ಶಿ, ಎಸಿಎಫ್‌ ವಿಠಲ್ ಪಾಟೀಲ್‌, ಬನ್ನೇರುಘಟ್ಟ ವಲಯ ಅರಣ್ಯಾಧಿಕಾರಿಗಳಾದ ಮನ್ಸೂರ್‌, ರಂಜಿತಾ, ಬಿಂದು, ಅಂತೋಣಿ ರೆಗೋ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT