ಬುಧವಾರ, ಆಗಸ್ಟ್ 4, 2021
23 °C
ದೇವನಹಳ್ಳಿ: ಸೋಂಕು ತಪಾಸಣೆ ಇಲ್ಲದೆ ಕಾರ್ಮಿಕರ ಪ್ರವೇಶ

ಗಣಿಗಾರಿಕೆ: ಕೊರೊನಾ ಸೋಂಕಿಗೆ ದಾರಿ?

ವಡ್ಡನಹಳ್ಳಿ ಭೋಜ್ಯಾನಾಯ್ಕ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ತಾಲ್ಲೂಕಿನ ಕಲ್ಲು ಗಣಿಗಾರಿಕೆ ಪ್ರದೇಶಗಳ ವ್ಯಾಪ್ತಿಯಲ್ಲಿ 68 ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿವೆ. ಆದರೂ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಗಣಿಗಾರಿಕೆ ನಡೆಸಲಾಗುತ್ತಿದೆ. ಕಾರ್ಮಿಕರನ್ನು ತಪಾಸಣೆಗೆ ಒಳಪಡಿಸದೇ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ’ ಎಂಬ ಆರೋಪ ಕೇಳಿಬಂದಿದೆ.  

‘ಒಂದೆಡೆ ಅಸಾಧಾರಣ ಪ್ರಮಾಣದಲ್ಲಿ ಹರಡುತ್ತಿರುವ ದೂಳು ಈ ಪ್ರದೇಶದಲ್ಲಿ ಈಗಾಗಲೇ ಶ್ವಾಸ ಸಂಬಂಧಿ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಈಗಾಗಲೇ ಇಂಥ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸೋಂಕಿನ ಅಪಾಯ ಹೆಚ್ಚು ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

‘ಕೊರೊನಾ ಮಾರ್ಚ್ ತಿಂಗಳಲ್ಲಿ ರಾಜ್ಯಕ್ಕೆ ಕಾಲಿಟ್ಟ ನಂತರ ಲಾಕ್‌ಡೌನ್ ಸಮಯದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಬಳಿಕ ಹಗಲು ರಾತ್ರಿ ನಿರಂತರ ಕಲ್ಲು, ಜಲ್ಲಿ, ಎಂ.ಸ್ಯಾಡ್ ನಿಯಮ ಮೀರಿ ಟನ್‌ಗಟ್ಟಲೆ ಭಾರ ಹೊತ್ತ ಭಾರೀ ವಾಹನಗಳು ನಿರಂತರ ಸಾಗಾಟದಲ್ಲಿ ನಿರತವಾಗಿವೆ. ವಾಹನಗಳು ಸಂಚರಿಸುವ ರಸ್ತೆ, ಗಣಿ ವ್ಯಾಪ್ತಿಯ ಐದಾರು ಕಿಲೋಮಿಟರ್ ಸುತ್ತಮುತ್ತ ಗಣಿ ದೂಳು ಸ್ಥಳೀಯರ ಆರೋಗ್ಯವನ್ನು ಕಸಿಯುತ್ತಿದೆ’ ಎಂಬುದು ತೈಲಗೆರೆ ಗ್ರಾಮಸ್ಥರ ದೂರು.

‘30 ವರ್ಷಗಳಿಂದ ಕಲ್ಲುಗಣಿ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದೆ. ಜಿಲ್ಲಾಡಳಿತ ಭವನದಿಂದ ಕೇವಲ ಆರೇಳು ಕಿ.ಮೀ. ಇರುವ ಗಣಿಗಾರಿಕೆಯ ಬಗ್ಗೆ ಆನೇಕ ಬಾರಿ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಸರ್ಕಾರ ಕೂಡಲೇ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಜನ ಜಾನುವಾರುಗಳ ಹಿತಕಾಯುವ ಕೆಲಸ ಮಾಡಬೇಕು’ ‌ಎಂಬುದಾಗಿ ರೈತ ಮುಖಂಡ ರಮೇಶ್ ಒತ್ತಾಯಿಸಿದರು.

‘ಗಣಿಗಾರಿಕೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಕಾರ್ಮಿಕರು ಸ್ಥಳೀಯರಲ್ಲ. ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳದವರು. ಕೊರೊನಾ ಹರಡಿದ ನಂತರ ಒಂದು ಬಾರಿ ಸ್ವಗ್ರಾಮಗಳಿಗೆ ಹೋಗಿ ಬಂದಿದ್ದಾರೆ. ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸ್ ವ್ಯವಸ್ಥೆ ಇಲ್ಲ. ಈವರೆಗೆ ತಪಾಸಣೆ ನಡೆಸಿಲ್ಲ. ಯಾರಿಗೆ ಸೋಂಕಿದೆ ಯಾರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನು ಗಣಿ ಮಾಲೀಕರು ರಹಸ್ಯ ಬಿಟ್ಟುಕೊಡುತ್ತಿಲ್ಲ. ಆದರೆ ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ಇಬ್ಬರು ಮಕ್ಕಳಿಗೂ ಕೊರೊನಾ ಸೋಂಕು ಈಗಾಗಲೇ ದೃಢಪಟ್ಟಿದೆ’ ಎಂಬುದಾಗಿ ಆರ್.ಟಿ.ಐ ಕಾರ್ಯಕರ್ತ ಚಿಕ್ಕೇಗೌಡ ಮಾಹಿತಿ ನೀಡಿದರು.

ಜೀವಹಾನಿಗೆ ಕಾರಣ

‘ಕೊರೊನಾ ಮಾದರಿಯಲ್ಲಿ ವಿವಿಧ ರೋಗ ಹರಡುವ 198 ವೈರಸ್‌ಗಳಿವೆ ಎಂದು ಈಗಾಗಲೇ ಕಂಡು ಹಿಡಿಯಲಾಗಿದೆ. ಪ್ರಸ್ತುತ ಜೀವ ಹಾನಿಗೆ ಮಾರಕವಾಗುತ್ತಿರುವ ಕೊರೊನಾ ಸೋಂಕು ಅಪಾಯಕಾರಿಯಾದರೂ, ಗಣಿ ದೂಳಿನಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಪುರಾವೆ ಇಲ್ಲ. ಆದರೆ ಶ್ವಾಸಕೋಶ ಸಂಬಂಧಿ ರೋಗಿಗಳಿಗೆ ವೈರಸ್‌ಗೆ ಹೆದ್ದಾರಿ ಇದ್ದಂತೆ. ತ್ವರಿತವಾಗಿ ಶ್ವಾಸಕೋಶವನ್ನು ಹಾಳು ಮಾಡುವ ಕ್ವಾರಿ ಕಲ್ಲಿನ ಕಣಗಳಿಗೆ ಸೋಂಕು ಮತ್ತಷ್ಟು ಪ್ರೇರಣೆಯಾಗಿ ಬಲಿಷ್ಠಗೊಂಡು ಎ2ಎ ಆಗಿ ರೂಪಾಂತರ ಹೊಂದಿ ತ್ವರಿತ ಜೀವ ಹಾನಿಗೆ ಕಾರಣವಾಗುತ್ತದೆ’ ಎನ್ನುತ್ತಾರೆ ತಜ್ಞ ವೈದ್ಯ ಡಾ.ಪವನ್ ಕುಮಾರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.