₹18.76 ಲಕ್ಷ ದುರ್ಬಳಕೆ ಆರೋಪ

7
ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗ ಸದಸ್ಯರಿಂದ ಪ್ರತಿಭಟನೆ

₹18.76 ಲಕ್ಷ ದುರ್ಬಳಕೆ ಆರೋಪ

Published:
Updated:
Deccan Herald

ಐಬಸಾಪುರ (ವಿಜಯಪುರ): ಚನ್ನರಾಯಪಟ್ಟಣ ಹೋಬಳಿ ಐಬಸಾಪುರ ಗ್ರಾಮ ಪಂಚಾಯಿತಿಯಲ್ಲಿ 2017–18ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ₹18.76 ಲಕ್ಷ ಹಣ ದುರ್ಬಳಕೆ ಆಗಿದೆ. ಖರ್ಚು ಮಾಡಿರುವ ಹಣಕ್ಕೆ ಸಮರ್ಪಕ ದಾಖಲೆಗಳಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿರುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ತಿಳಿಸಿದ್ದಾರೆ.

ಈ ಕುರಿತು ಸೋಮವಾರ ಐಬಸಾಪುರ ಗ್ರಾಮ ಪಂಚಾಯಿತಿ ಕಾರ್ಯಾಲಯ ಮುಂಭಾಗ ಸದಸ್ಯರು ಪ್ರತಿಭಟನೆ ನಡೆಸಿದರು. ಪಂಚಾಯಿತಿಯಲ್ಲಿ ಪ್ರಭಾರ ಅಭಿವೃದ್ಧಿ ಅಧಿಕಾರಿ ರಾಮಮೂರ್ತಿ ಅವಧಿಯಲ್ಲಿ ಆಗಿರುವ ಅಕ್ರಮಗಳ ಕುರಿತು ತನಿಖೆ ನಡೆಸಬೇಕು. ಕ್ರಿಯಾಯೋಜನೆ ತಯಾರಿಸದೆ ಖರ್ಚು ಸದರಿ ಹಣವನ್ನು ಪುನಃ ಪಂಚಾಯಿತಿಗೆ ವಾಪಸ್‌ ಮಾಡಿಸಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ದಿನ್ನೂರು ವೆಂಕಟೇಶ್ ಮಾತನಾಡಿ, ‘ಸರ್ಕಾರದಿಂದ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾಗುವ ಯಾವುದೇ ಅನುದಾನಗಳಿರಲಿ, ಸ್ಥಳೀಯವಾಗಿ ಎಲ್ಲ ಸದಸ್ಯರನ್ನು ಸಭೆ ಕರೆದು ಬಿಡುಗಡೆಯಾಗಿರುವ ಅನುದಾನ ಕುರಿತು ತಿಳಿಸಿ. ಸದರಿ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸಬೇಕು. ಅದನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಿ ಅನುಮೋದನೆ ಪಡೆದುಕೊಂಡ ನಂತರವಷ್ಟೇ ಹಣ ಖರ್ಚು ಮಾಡಲಿಕ್ಕೆ ಅವಕಾಶವಿದೆ’ ಎಂದು ತಿಳಿಸಿದರು.

‘ಆದರೆ, ಹಿಂದೆ ಇದ್ದ ಪಿಡಿಓ ಅಂತಹ ಯಾವುದೇ ಪ್ರಕ್ರಿಯೆಗಳನ್ನು ಮಾಡದೆ ಹಣ ಖರ್ಚು ಮಾಡಿರುವ ಬಗ್ಗೆ ಅಧಿಕಾರಿಗಳ ಪರಿಶೀಲನೆಯ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಜಿಲ್ಲಾ ಪಂಚಾಯಿತಿಗೆ ದೂರು ಸಲ್ಲಿಸಲಾಗಿದೆ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಐ.ವಿ. ಆಂಜಿನಪ್ಪ ಮಾತನಾಡಿ, ಗ್ರಾಮ ಪಂಚಾಯಿತಿ ಸದಸ್ಯರಾಗಿ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನದ ಕುರಿತು ನಮಗೆ ಮಾಹಿತಿ ನೀಡಿಲ್ಲ. ಅವರು ಹಣ ಖರ್ಚು ಮಾಡಿರುವುದಾಗಿ ತೋರಿಸಿರುವ ದಾಖಲೆಗಳ ಪ್ರಕಾರ ಎಲ್ಲಿಯೂ ಕೆಲಸವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಉಪಾಧ್ಯಕ್ಷ ಹರ್ಷಿತ್ ಗೌಡ ಮಾತನಾಡಿ, ಪಂಚಾಯಿತಿಯ ವ್ಯಾಪ್ತಿಯಲ್ಲಿ ಯಾವ ಕೆಲಸಗಳೂ ಆಗದೆ ಚೆಕ್‌ಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲಾ ಹಿಂದೆ ಇದ್ದ ಪಿಡಿಒ ಮತ್ತು ಅಧ್ಯಕ್ಷರೇ ಕಾರಣ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಅಧ್ಯಕ್ಷರ ಪರವಾಗಿದ್ದ ಸದಸ್ಯರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಜಮ್ಮ, ಮುಖಂಡರಾದ ಮುರಳಿ, ರಾಜು, ಪದ್ಮಮ್ಮ, ಉಮಾದೇವಿ, ರಾಜಣ್ಣ, ಲಕ್ಷ್ಮಣ, ಪ್ರತಿಭಟನೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !