ಶುಕ್ರವಾರ, ಜೂಲೈ 3, 2020
22 °C
ಕೊರೊನಾ ವಾರಿಯರ್ಸ್‌ ಆರೋಗ್ಯವೂ ನಮಗೆ ಮುಖ್ಯವಾಗಬೇಕು: ಶಾಸಕ

ನೆರೆ ರಾಜ್ಯದಿಂದ ಬಂದವರ ತಪಾಸಣೆ ನಡೆಸಿ ಶಾಸಕರ ಕಟ್ಟುನಿಟ್ಟಿನ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್‌: ತಾಲ್ಲೂಕಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ.ಶಿವಣ್ಣ ಅವರ ಅಧ್ಯಕ್ಷತೆಯಲ್ಲಿ  ಅತ್ತಿಬೆಲೆ ಪುರಸಭಾ ಸಭಾಂಗಣದಲ್ಲಿ ಪುರಸಭಾ ಮುಖ್ಯಾಧಿಕಾರಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಪೊಲೀಸರ ಸಭೆ ಸೋಮವಾರ ನಡೆಯಿತು.

‘ಅತ್ತಿಬೆಲೆಯು ರಾಜ್ಯದ ಗಡಿಭಾಗದಲ್ಲಿದೆ. ನೆರೆರಾಜ್ಯ ತಮಿಳುನಾಡಿನಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ತಮಿಳುನಾಡಿನಿಂದ ರಾಜ್ಯಕ್ಕೆ ಬರುವವರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು. ಯಾವುದೇ ಕಾರಣಕ್ಕೂ ಸೋಂಕಿತರು ರಾಜ್ಯಕ್ಕೆ ಬರದಂತೆ ತಡಯಬೇಕು’ ಎಂದು ಶಾಸಕ ಬಿ.ಶಿವಣ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಅತ್ತಿಬೆಲೆ ಚೆಕ್‌ಪೋಸ್ಟ್‌ನಲ್ಲಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ, ಕಂದಾಯ, ಶಿಕ್ಷಣ, ಪೊಲೀಸ್‌ ಇಲಾಖೆಯ ಸಿಬ್ಬಂದಿಗೆ ಸಮರ್ಪಕವಾಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ಇವರ ಆರೋಗ್ಯವನ್ನು ಕಾಪಾಡಲು ಸರ್ಕಾರ ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆನೇಕಲ್‌ನಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯ ಮತ್ತು ನರ್ಸ್‌ ಒಬ್ಬರಿಗೆ ಮತ್ತು ಪೊಲೀಸರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಹಾಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ’ ಎಂದರು.

ಪುರಸಭಾ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷೆ ಮಂಜುಳ ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್‌, ಪುರಸಭಾ ಮುಖ್ಯಾಧಿಕಾರಿ ಮಂಜುನಾಥ್‌, ಸಬ್‌ಇನ್‌ಸ್ಪೆಕ್ಟರ್‌ ನವೀನ್‌ ಹಾಜರಿದ್ದರು.

ಐವರಿಗೆ ಸೋಂಕು ದೃಢ, ಒಂದು ಸಾವು

ಆನೇಕಲ್: ‘ತಾಲ್ಲೂಕಿನಲ್ಲಿ ಐದು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಒಬ್ಬರು ಮೃತಪಟ್ಟಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಜ್ಞಾನಪ್ರಕಾಶ್‌ ತಿಳಿಸಿದರು.

‘ತಾಲ್ಲೂಕಿನ ಜಿಗಣಿಯಲ್ಲಿ 45 ವರ್ಷದ ಹಣ್ಣಿನ ವ್ಯಾಪಾರಿಗೆ ಸೋಂಕು ತಗುಲಿದ್ದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಇವರು ಸಿಂಗೇನಅಗ್ರಹಾರ ಮಾರುಕಟ್ಟೆಯಿಂದ ಪ್ರತಿದಿನ ಹಣ್ಣು ತರುತ್ತಿದ್ದರು’ ಎಂದರು.

‘ತಾಲ್ಲೂಕಿನ ಚಂದಾಪುರದಲ್ಲಿ ಎರಡು ಪ್ರಕರಣ, ಕಮ್ಮಸಂದ್ರದಲ್ಲಿ ಒಂದು ಮತ್ತು ಮಂಟಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಯರಾಮ್‌ ಬಡಾವಣೆಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು