ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆ ಗೀಳಿಗೆ ಕೃಷಿ ಬಲಿ: ಸಂಸದ ಬಿ.ಎನ್.ಬಚ್ಚೇಗೌಡ

ಬೆಂಡಿಗಾನಹಳ್ಳಿ ಗ್ರಾಮದಲ್ಲಿ ‘ಸುಗ್ಗಿ-ಹುಗ್ಗಿ’ ಕಾರ್ಯಕ್ರಮ
Last Updated 14 ಫೆಬ್ರುವರಿ 2020, 12:43 IST
ಅಕ್ಷರ ಗಾತ್ರ

ಸೂಲಿಬೆಲೆ: ‘ಗ್ರಾಮಾಂತರ ಪ್ರದೇಶದ ಪರಂಪರೆಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದ್ದು, ಸುಗ್ಗಿ-ಹುಗ್ಗಿಯಂತಹ ಗ್ರಾಮೀಣ ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮಗಳ ಪ್ರೋತ್ಸಾಹಕ್ಕೆ ಸರ್ಕಾರ ಸದಾ ಬದ್ಧ’ ಎಂದು ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಂಯುಕ್ತಾಶ್ರಯದಲ್ಲಿ ಸೂಲಿಬೆಲೆ ಹೋಬಳಿ, ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘ಸುಗ್ಗಿ-ಹುಗ್ಗಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದೆಡೆ ಬರದ ಪರಿಸ್ಥಿತಿ, ಮತ್ತೊಂದೆಡೆ ಆಧುನಿಕತೆಗೆ ಮಾರು ಹೋಗುತ್ತಿರುವ ಯುವ ಸಮುದಾಯ ಕೃಷಿ ಮರೆತು, ಪಟ್ಟಣಕ್ಕೆ ವಲಸೆ ಹೋಗಿ, ಕಾರ್ಖಾನೆಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಪರಿಣಾಮವಾಗಿ ದೇಶದ ಪ್ರಧಾನ ಕಸುಬಾದ ಕೃಷಿ ಅವಸಾನದ ಹಂತ ತಲುಪಿದೆ. ಸರ್ಕಾರ ಕೃಷಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆರ್ಥಿಕ ನೆರವು ನೀಡುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು’ ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ‘ತಂತ್ರಜ್ಞಾನದ ಬಿರುಸಿಗೆ ಸಿಲುಕಿ ಗ್ರಾಮೀಣ ಸೊಗಡು ವಿನಾಶದತ್ತ ಸಾಗುತ್ತಿದೆ. ಮುಂದಿನ ಪೀಳಿಗೆ ಎಚ್ಚೆತ್ತುಕೊಳ್ಳದಿದ್ದರೆ ವ್ಯವಸಾಯ ಕ್ಷೇತ್ರ ಸಂಕಷ್ಟಕ್ಕೆ ಸಿಲುಕುತ್ತದೆ. ಗ್ರಾಮಗಳಲ್ಲಿ ಸಾಮರಸ್ಯದ ಆಶಯಗಳೊಂದಿಗೆ ಸಂಕ್ರಾತಿ ಹಬ್ಬದಲ್ಲಿ ಮಾಡುವ ಆಚರಣೆಯನ್ನು, ಸರ್ಕಾರ ಹೋಬಳಿ ಕೇಂದ್ರಗಳಲ್ಲಿ ಸುಗ್ಗಿ-ಹುಗ್ಗಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ’ ಎಂದರು.

ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಂಜುನಾಥ್ ಆರಾಧ್ಯ ಮಾತನಾಡಿ, ‘ರಾಜ್ಯ ಸರ್ಕಾರ 2013ರಿಂದ ಸುಗ್ಗಿ ಹುಗ್ಗಿ ಕಾರ್ಯಕ್ರಮ ಪ್ರಾರಂಭಿಸಿ, ಜಿಲ್ಲಾ ಮಟ್ಟದಲ್ಲಿ ಆಚರಣೆ ಮಾಡುತ್ತಿದೆ. ಹೊಸಕೋಟೆ ತಾಲ್ಲೂಕಿನಲ್ಲಿ 4ನೇ ಬಾರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.

ಟಿಎಪಿಎಂಎಸ್ ಉಪಾಧ್ಯಕ್ಷ ಗೋಪಾಲಗೌಡ ಮಾತನಾಡಿದರು.

ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡಊಟದ ವ್ಯವಸ್ಥೆ ಕಲ್ಪಿಸಿದ್ದರು ಹಾಗೂ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ, ಅಭಿನಂದಿಸಿದರು.

ಸವಿತಾ ಗಣೇಶ್ ತಂಡ ಸುಗಮ ಸಂಗೀತ, ಡಿ.ಲಕ್ಷ್ಮೀನಾರಾಯಣ ಅವರಿಂದ ಪೌರಾಣಿಕ ನಾಟಕ ಹಾಗೂ ವಿವಿಧ ಕಲಾ ತಂಡಗಳಿಂದ ಸುಗ್ಗಿ ಹಾಡು, ಸೋಬಾನೆ ಪದ, ರಂಗ ಗೀತೆ, ಭರತನಾಟ್ಯ, ಸಮೂಹ ನೃತ್ಯ, ಪೂಜಾ ಕುಣಿತ, ತಮಟೆ ವಾದನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಟಿ.ವೆಂಕಟೇಶ್, ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನಕೃಷ್ಣಪ್ಪ, ಉಪಾಧ್ಯಕ್ಷ ಮುನಿಶಾಮಿಗೌಡ, ಮುಖಂಡರು, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT