ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು ತಡೆಯಲು ಕಟ್ಟುನಿಟ್ಟಿನ ಕ್ರಮ: ತಹಶೀಲ್ದಾರ್ ಪಿ.ದಿನೇಶ್

Last Updated 27 ಏಪ್ರಿಲ್ 2021, 3:37 IST
ಅಕ್ಷರ ಗಾತ್ರ

ಆನೇಕಲ್: ತಾಲ್ಲೂಕಿನಲ್ಲಿ ಒಟ್ಟು 2,297 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ಪಿ.ದಿನೇಶ್‌ ತಿಳಿಸಿದರು.

ಸರ್ಕಾರದ ಮಾರ್ಗಸೂಚಿಯಂತೆ ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಶಿಕ್ಷಕರ ತಂಡಗಳನ್ನು ರಚಿಸಲಾಗಿದ್ದು ಈ ತಂಡಗಳು ಪ್ರತಿ ಗ್ರಾಮದ ಮಾಹಿತಿಯನ್ನು ನೀಡಲು ಮತ್ತು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುತ್ತಿವೆ. ಪ್ರತಿ ಗ್ರಾಮ ಪಂಚಾಯಿತಿಗೂ ನೋಡೆಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ನೋಡೆಲ್‌ ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರೊನಾ ಸಂಬಂಧ ಸಂಪೂರ್ಣ ಉಸ್ತುವಾರಿಯನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ ಎಂದರು.

ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿಗಳು ಜೊತೆಗೂಡಿ ಕೆಲಸ ಮಾಡಲಿದ್ದಾರೆ. ಪ್ರತಿ ಗ್ರಾಮದಲ್ಲಿ ಯಾವುದೇ ಸಮಸ್ಯೆಗಳು ಉಂಟಾದಲ್ಲಿ ಗ್ರಾಮ ಪಂಚಾಯಿತಿ ನೋಡಲ್‌ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ತಾಲ್ಲೂಕು ಸಮನ್ವಯ ಸಮಿತಿಯನ್ನು ಸಂಪರ್ಕಿಸಿ ಯಾವುದೇ ಸಮಸ್ಯೆ ಬರದಂತೆ ಕ್ರಮ ಕೈಗೊಳ್ಳಲು ವ್ಯವಸ್ಥಿತ ನೆಟ್‌ವರ್ಕ್‌ನ್ನು ರೂಪಿಸಲಾಗಿದೆ. ತಾಲ್ಲೂಕಿನಲ್ಲಿ ಬೆಡ್‌ಗಳ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾಲ್ಲೂಕಿನ ತೆಲಗರಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಜಿಗಣಿಯ ವಿದ್ಯಾರ್ಥಿ ನಿಲಯವನ್ನು ಗುರುತಿಸಲಾಗಿದೆ. ಇಲ್ಲಿ ಕೊರೊನಾ ಕೇಂದ್ರಗಳನ್ನು ಪ್ರಾರಂಭಿಸಲು ಪರಿಶೀಲನೆ ಮಾಡಲಾಗಿದೆ ಎಂದರು.

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ವೈದ್ಯಾಧಿಕಾರಿಗಳ ಜೊತೆಗೆ ವೃತ್ತ ನಿರೀಕ್ಷಕರಾದ ಕೃಷ್ಣ, ಕೆ.ವಿಶ್ವನಾಥ್, ಗೌತಮ್, ರವೀಂದ್ರ, ಶೇಖರ್‌ ಅವರ ತಂಡವನ್ನು ರಚಿಸಲಾಗಿದ್ದು ನೋಡಲ್‌ ಅಧಿಕಾರಿಗಳು ತಂಡದೊಂದಿಗೆ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಆನೇಕಲ್‌ ತಾಲ್ಲೂಕಿನ ಆಕ್ಸ್‌ಫರ್ಡ್‌ ಮತ್ತು ನಾರಾಯಣ ಹೃದಯಾಲಯದಲ್ಲಿ ಕೊರೊನಾ ಸೋಂಕಿತರ ದಾಖಲಾತಿಗೆ ಕ್ರಮ ಕೈಗೊಳ್ಳಲಾಗಿದೆ. ರೋಗಿಗಳ ದಾಖಲಾತಿ, ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡುವ ಸಲುವಾಗಿ ಬೊಮ್ಮಸಂದ್ರದ ನಾರಾಯಣ ಹೃದಯಾಲಯದಲ್ಲಿ ಎರಡು ಪಾಳಿಗಳಲ್ಲಿ ಕೆಲಸ ಮಾಡುವಂತೆ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ವೈದ್ಯರಾದ ಡಾ.ಮನೀಷಾ ಮತ್ತು ಡಾ.ಮಾನಸ ಅವರು ಎರಡು ಪಾಳಿಗಳಲ್ಲಿ ತಂಡದೊಂದಿಗೆ ಕಾರ್ಯನಿರ್ವಹಿಸುವರು, ಆಕ್ಸ್‌ಫರ್ಡ್‌ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯರಾದ ಡಾ.ಸೌಮ್ಯ ಮತ್ತು ಡಾ.ಮೇಘನಾ ಭಟ್‌ ಅವರನ್ನು ನಿಯೋಜಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಸೇರಿದಂತೆ ಯಾವುದೇ ಸಮಸ್ಯೆಗಳಿಗೂ ಸ್ಥಳದಲ್ಲೇ ಸ್ಪಂದಿಸಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ ಎಂದರು.

ಆನೇಕಲ್‌ ತಾಲ್ಲೂಕಿಗೆ ಇದುವರೆಗೆ 435 ವೈಯಲ್ಸ್‌ ರೆಮ್‌ಡಿಸಿವಿರ್‌ ನೀಡಲಾಗಿದೆ. ರೆಮ್‌ಡಿಸಿವಿರ್‌ ಕೊರೊನಾ ರೋಗಿಗಳಿಗೆ ಜೀವರಕ್ಷಕ ಔಷಧವಾಗಿದ್ದು ಇದನ್ನು ಅವಶ್ಯಕವಿರುವವರಿಗೆ ಬಳಸಲು ಕ್ರಮಕೈಗೊಳ್ಳಲಾಗಿದೆ. ಯಾವುದೇ ಅವ್ಯವಹಾರಗಳು ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನಯ್‌ ತಿಳಿಸಿದರು.

ಕೊರೊನಾ ಸೋಂಕಿತರಿಗೆ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ 769 ಬೆಡ್‌ಗಳ ವ್ಯವಸ್ಥೆಯಿದೆ. 23 ವೆಂಟಿಲೇಟರ್‌ ವ್ಯವಸ್ಥೆಯಿದೆ, ಆಕ್ಸಿಜನ್‌ ಪೂರೈಕೆಗಾಗಿ 170 ಜಂಬೋ ಆಕ್ಸಿಜನ್ ಸಿಲಿಂಡರ್, 156 ಸಣ್ಣ ಸಿಲಿಂಡರ್‌ಗಳನ್ನು ಪೂರೈಕೆ ಮಾಡಲಾಗಿದೆ. ಆನೇಕಲ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಕೊರೊನಾ ಸಂಬಂಧ ಬೆಡ್‌ಗಾಗಿ ಆನೇಕಲ್‌ ಹೆಲ್ಪ್‌ ಲೈನ್‌ ತುರ್ತು ಪರಿಸ್ಥಿತಿ 1912 ಅಥವಾ 8884111160 ಸಂಪರ್ಕಿಸಲು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT