ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ, ಮತದಾರರಿಗೆ ಚೂರಿ ಹಾಕಿದ ಎಂಟಿಬಿ: ಸಿದ್ದರಾಮಯ್ಯ ವಾಗ್ದಾಳಿ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ
Last Updated 16 ನವೆಂಬರ್ 2019, 22:47 IST
ಅಕ್ಷರ ಗಾತ್ರ

ಹೊಸಕೋಟೆ: ಸುಪ್ರೀಂ ಕೋರ್ಟ್ ತೀರ್ಪಿನಂತೆ ಅನರ್ಹಗೊಂಡಿರುವ ಶಾಸಕ ಎಂ.ಟಿ.ಬಿ ನಾಗರಾಜ್ ಅವರನ್ನು ಹೊಸಕೋಟೆಯ ಜನತಾ ನ್ಯಾಯಾಲಯವೂ ಅನರ್ಹಗೊಳಿಸಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ಹೊಸಕೋಟೆ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರ ನಾಮಪತ್ರ ಸಲ್ಲಿಕೆ ವೇಳೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವದಲ್ಲಿ ಮತದಾರರೇ ಮಾಲೀಕರು. ಅನರ್ಹಗೊಂಡಿರುವ ವ್ಯಕ್ತಿಯನ್ನು ಮತದಾರರು ಸೋಲಿಸಿ ಅವರಿಗೆ ರಾಜಕೀಯವಾಗಿ ಪಾಠ ಕಲಿಸಬೇಕು. ನೀವು ಅವರನ್ನು ಸೋಲಿಸಿದರೆ ಇಡೀ ದೇಶಕ್ಕೆ ಸಂದೇಶ ಹೋಗುತ್ತದೆ. ಮುಂದಿನ ದಿನಗಳಲ್ಲಿ ವ್ಯಕ್ತಿ ಯಾವ ಪಕ್ಷದಿಂದ ಗೆಲ್ಲುತ್ತಾನೊ ಆ ಪಕ್ಷಕ್ಕೆ ಮೋಸ ಮಾಡಿ ಬೇರೆ ಪಕ್ಷಕ್ಕೆ ಹೋಗುವುದಿಲ್ಲ’ ಎಂದು ತಿಳಿಸಿದರು.

‘ಕಾಂಗ್ರೆಸ್ ಪಕ್ಷವು ನಾಗರಾಜ್ ಅವರನ್ನು ಮೂರು ಬಾರಿ ಶಾಸಕರನ್ನಾಗಿ, ಮಂತ್ರಿಯನ್ನಾಗಿ, ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಎಲ್ಲ ರೀತಿಯ ಅಧಿಕಾರ ಕೊಟ್ಟಿದೆ. ಆದರೂ, ಉಂಡ ಮನಗೆ ದ್ರೋಹ ಬಗೆದು, ಕೋಮುವಾದಿ ಬಿಜೆಪಿಯನ್ನು ಸೇರಿದ್ದಾರೆ. ಅವರು ಪಕ್ಷಕ್ಕೆ ಹಾಗೂ ಅವರ ಮೇಲೆ ವಿಶ್ವಾಸವಿಟ್ಟು ಅವರನ್ನು ಗೆಲ್ಲಿಸಿದ ಮತದಾರರಿಗೆ ಚೂರಿ ಹಾಕಿದ್ದಾರೆ’ ಎಂದು ಆರೋಪಿಸಿದರು.

‘ದೇಶದಲ್ಲಿ ಸುಪ್ರೀಂ ಕೋರ್ಟ್‌ಗಿಂತ ಹೆಚ್ಚಿನ ಯಾವುದೂ ನ್ಯಾಯಾಲಯಗಳಿಲ್ಲ. ಅದು ಇದ್ದರೆ ಅದು ಜನತಾ ನ್ಯಾಯಾಲಯ ಮಾತ್ರ. ಇಲ್ಲಿ ಮತದಾರರೇ ಪ್ರಭುಗಳು. ಹಾಗಾಗಿ ನೀವು ಅನರ್ಹ ಶಾಸಕನಿಗೆ ಸರಿಯಾಗಿ ಬುದ್ಧಿ ಕಲಿಸಿ’ ಎಂದು ಮನವಿ ಮಾಡಿದರು.

‘ತಾಲ್ಲೂಕಿನಲ್ಲಿ ಯಾವುದಾದರೂ ಅಭಿವೃದ್ಧಿ ಕಾರ್ಯಗಳು ಆಗಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ರೂಪಾಯಿಯನ್ನು ತಾಲ್ಲೂಕಿಗೆ ನೀಡಿದ್ದೇನೆ, ಮೊನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿಲಾನ್ಯಾಸ ಮಾಡಿದ ಯೋಜನೆಗಳು ನಾನು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಅನುದಾನಗಳು ಎಂದರು.

ನಾಮಪತ್ರ ಸಲ್ಲಿಕೆಗೆ ಮೊದಲು ನಗರದ ಕೆಇಬಿ ವೃತ್ತದಿಂದ ತೆರೆದ ವಾಹನದಲ್ಲಿ ಪದ್ಮಾವತಿ ಸುರೇಶ್, ಶಾಸಕರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಸುದರ್ಶನ್, ನಂಜೇಗೌಡ ಮುಂತಾದವರು ಸಾವಿರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದರು.

ನಗರದ ದೇವಸ್ಥಾನಗಳ ಭೇಟಿ: ಬೆಳಗ್ಗಿನಿಂದಲೇ ಪತಿ ಬೈರತಿ ಸುರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ, ಎಂಟಿಬಿ ನಾಗರಾಜ್ ಅಣ್ಣ ಪಿಳ್ಳಣ್ಣ ಹಾಗೂ ಕಾರ್ಯಕರ್ತರೊಂದಿಗೆ ನಗರದ ಅವಿಮುಕ್ತೇಶ್ವರ ದೇವಾಲಯ, ಬೈರತಿಯ ಆಂಜನೇಯ ದೇವಾಲಯ, ತಾವರೇಕೆರೆಯ ಮನೆದೇವರ ದೇವಾಲಯಗಳಲ್ಲಿ ಉಮೇದುವಾರಿಕೆಯ ಪ್ರತಿಗಳಿಗೆ ಪೂಜೆ ಮಾಡಿಸಿದ ಪದ್ಮಾವತಿ ಸುರೇಶ್ ಎಲ್ಲ ದೇವರ ಆಶೀರ್ವಾದ ಬೇಡಿದರು.

ಪದ್ಮಾವತಿ ನಿಮ್ಮ ಮನೆಮಗಳಂತೆ: ಐದು ವರ್ಷಕ್ಕಾಗಿ ಗೆಲ್ಲಿಸಿದ ಜನಪ್ರತಿನಿಧಿ ಎಂಟಿಬಿ ನಾಗರಾಜ್, ತನ್ನ ಸ್ವಾರ್ಥಕ್ಕಾಗಿ ಮತದಾರರ ನಂಬಿಕೆಗೆ ದ್ರೋಹ ಬಗೆದು ತಾಲ್ಲೂಕಿನ ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ. ಅಂತಹ ವ್ಯಕ್ತಿಯನ್ನು ದೇಶದ ಒಳಿತಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಬೈರತಿ ಸುರೇಶ್‌ ತಿಳಿಸಿದರು.

‘ನಾವು ಮುಂದೆ ನಾಗರಾಜ್ ಅವರಂತೆ ಯಾರಿಗೂ ಮಾರಾಟವಾಗುವುದಿಲ್ಲ. ನಮ್ಮನ್ನು ಯಾರೂ ಕೊಳ್ಳಲು ಸಾದ್ಯವಿಲ್ಲ’ ಎಂದರು. ‘ಡಿ.ಕೆ ಶಿವಕುಮಾರ್ ಬಗ್ಗೆ ಮಾತನಾಡಲು ನಾಗರಾಜ್‌ಗೆ ಯಾವುದೇ ನೈತಿಕ ಹಕ್ಕಿಲ್ಲ’ ಎಂದು ಕಿಡಿಕಾರಿದರು. ’ಡಿ.ಕೆ ಶಿವಕುಮಾರ್ ಜನಸೇವಕರು ನಾಗರಾಜ್ ವ್ಯಾಪಾರಿ’ ಎಂದು ಹೇಳಿದರು.

ಎಂಟಿಬಿ ಸುಳ್ಳುಗಾರ: ಸೋದರ ಟೀಕೆ
ಹೊಸಕೋಟೆ:
‘ಎಂ.ಟಿ.ಬಿ ನಾಗರಾಜ್ ಜನರನ್ನು ನಂಬಿಸಿ ಕೆಲಸವಾದ ಮೇಲೆ ಕೈ ಬಿಡುತ್ತಾರೆ. ಅವರು ಬಾಯಿ ಬಿಟ್ಟರೆ ಕೇವಲ ಸುಳ್ಳೇ ಬರುತ್ತದೆ’ ಎಂದು ಅವರ ಹಿರಿಯ ಸಹೋದರ ಪಿಳ್ಳಣ್ಣ ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ನಾನೂ ಸಹ 50 ವರ್ಷ ರಾಜಕೀಯ ಮಾಡಿಯೇ ಬಂದಿರುವವನು. ಒಳ್ಳೆಯದನ್ನು ಮಾಡಿದವರಿಗೆ ಅವನು ಬೈಯ್ಯುತ್ತಾನೆ. ಸಿದ್ದರಾಮಯ್ಯ ಹತ್ತಿರ ನನ್ನ ಬಗ್ಗೆ ಹೇಳಿ ನನ್ನ ಅಧಿಕಾರ ಕಿತ್ತು ಹಾಕಿಸಿದ್ದು ನಾಗರಾಜ್’ ಎಂದು ದೂರಿದರು.

‘ನಾನು ಅವನಿಗೆ ತಂದೆ ಸಮಾನ. ನನಗೇ ಮೋಸ ಮಾಡಿದ್ದಾನೆ. ಸಿದ್ದರಾಮಯ್ಯ ಕೊಟ್ಟ ಅನುದಾನದಿಂದ ತಾಲ್ಲೂಕಿನ ಅಭಿವೃದ್ಧಿ ಆಗಿದೆ. ಮನೆಯಿಂದ ಹಣ ತಂದು ಮಾಡಿಲ್ಲ. ಬೇಕಿದ್ದರೆ ದೇವರ ಮುಂದೆ ಬರಲಿ, ಅವನು ಮಾಡಿದ ಮೋಸಗಳನ್ನು ಹೇಳುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT