ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟದ ಕೊಳದಲ್ಲಿ ‘ಅಣಬೆ ಕಪ್ಪೆ’

ಕಾರ್ಕಳ ಬಳಿ ಜೀವಂತ ಕಪ್ಪೆ ಮೇಲೆ ಬೆಳೆದ ಪುಟ್ಟ ಅಣಬೆ
ನಟರಾಜ ನಾಗಸಂದ್ರ
Published 9 ಫೆಬ್ರುವರಿ 2024, 19:33 IST
Last Updated 9 ಫೆಬ್ರುವರಿ 2024, 19:33 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಪಶ್ಚಿಮ ಘಟ್ಟದ ಕೊಳವೊಂದರಲ್ಲಿ ಈಚೆಗೆ ಅಪರೂಪದ ‘ಅಣಬೆ ಕಪ್ಪೆ’ಯೊಂದು ಅಧ್ಯಯನ ತಂಡವೊಂದರ ಕಣ್ಣಿಗೆ ಬಿದ್ದಿದೆ.

ಕುದುರೆಮುಖ ಪರ್ವತ ಶ್ರೇಣಿಯ ತಪ್ಪಲಿನ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಕೊಳವೊಂದರಲ್ಲಿ ಕಂಡು ಬಂದ ‘ಗೋಲ್ಡನ್ ಬ್ಯಾಕ್ಡ್’ ಕಪ್ಪೆಯ ಪಕ್ಕೆಯ ಮೇಲೆ ಪುಟ್ಟದಾದ ಅಣಬೆ ಮೊಳಕೆಯೊಡೆದಿದೆ.

ಕೊಳೆತ ವಸ್ತು, ಮಣ್ಣು, ಮರದ ಮೇಲೆ ಮಾತ್ರ ಬೆಳೆಯುವ ಅಣಬೆಯು ಜೀವಂತ ಪ್ರಾಣಿಯ ಮೇಲೆ ಬೆಳೆದಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಶಿಲೀಂಧ್ರ (ಫಂಗೈ) ವರ್ಗಕ್ಕೆ ಸೇರಿದ ಅಣಬೆಯನ್ನು ‘ಮೈಸಿನ್’ ಅಥವಾ ‘ಬಾನೆಟ್ ಮಶ್ರೂಮ್’ ಎಂದು ಕರೆಯುತ್ತಾರೆ.

ಜೀವ ಜಗತ್ತಿನ ಅಚ್ಚರಿಯ ವಿದ್ಯಮಾನ ಮತ್ತು ಹೊಸ ಸಂಶೋಧನೆಗಳನ್ನು ಪ್ರಕಟಿಸುವ ಅಂತರರಾಷ್ಟ್ರೀಯ ನಿಯತಕಾಲಿಕ ‘ರೆಪ್ಟೈಲ್ಸ್‌ ಆ್ಯಂಡ್‌ ಅಂಫಿಬಿಯನ್ಸ್’ನ ಜನವರಿ ಸಂಚಿಕೆಯಲ್ಲಿ ‘ಅಣಬೆ ಕಪ್ಪೆ’ ಕುರಿತಾದ ಸಂಶೋಧನಾ ಲೇಖನ ಪ್ರಕಟವಾಗಿದೆ. 

ಬೆಂಗಳೂರು ಮತ್ತು ದೊಡ್ಡಬಳ್ಳಾಪುರದಲ್ಲಿ ಕಚೇರಿ ಹೊಂದಿರುವ ವರ್ಲ್ಡ್‌ ವೈಡ್‌ ಫಂಡ್‌ ಫಾರ್‌ ನೇಚರ್‌ (ಡಬ್ಲ್ಯುಡಬ್ಲ್ಯುಎಫ್‌) ಸಂಸ್ಥೆಯ ಯುವ ಸಂಶೋಧಕರ ತಂಡ ‘ಕಪ್ಪೆ ಮತ್ತು ಹಾವುಗಳ ಚಲನವಲನ’ ಅಧ್ಯಯನಕ್ಕೆ ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮಕ್ಕೆ ತೆರಳಿತ್ತು. ಆಗ ಆಕಸ್ಮಿಕವಾಗಿ ಕಣ್ಣಿಗೆ ಬಿದ್ದ ಅಪರೂಪದ ‘ಅಣಬೆ ಕಪ್ಪೆ’ಯನ್ನು ತಂಡ ಕ್ಯಾಮೆರಾ
ದಲ್ಲಿ ಸೆರೆ ಹಿಡಿದಿದೆ.  

ಮಾಳ ಗ್ರಾಮದ ಕೊಳದಲ್ಲಿ 40ಕ್ಕೂ ಹೆಚ್ಚು ‘ಗೋಲ್ಡನ್ ಬ್ಯಾಕ್ಡ್’ ಕಪ್ಪೆಗಳಿವೆ. ಅದರಲ್ಲಿ ಒಂದು ಕಪ್ಪೆಯ ಮೇಲೆ ಮಾತ್ರ ಅಣಬೆ ಬೆಳೆದಿದೆ ಎಂದು ಹಿರಿಯ ಯೋಜನಾಧಿಕಾರಿ ಹಾಗೂ ಕೀಟ, ಜೇಡಗಳ ಸಂಶೋಧಕ ದೊಡ್ಡಬಳ್ಳಾಪುರದ ವೈ.ಟಿ.ಲೋಹಿತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ತಂಡದಲ್ಲಿದ್ದ ಚಿನ್ಮಯ್ ಸಿ.ಮಳಿಯೆ, ನವೀನ್ ಅಯ್ಯರ್, ಬಿ.ಜಿ.ನಿಶಾ ಹಾಗೂ ಎಸ್‌.ಆಶಾ ಸೇರಿದಂತೆ ಅನೇಕರು ಸಂಶೋಧನಾ ಪ್ರಬಂಧ ಸಿದ್ಧಪಡಿಸಿ ವಿಜ್ಞಾನ ನಿಯತಕಾಲಿಕಕ್ಕೆ ಕಳಿಸಿದ್ದರು. ಕಪ್ಪೆಯ ಚಿತ್ರ ಗಮನಿಸಿದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಪರಿಸರ ಆಸಕ್ತರು, ಇದೊಂದು ಕೃತಕ ಬುದ್ಧಿಮತ್ತೆ (ಆರ್ಟಿಫಿಸಿಯಲ್‌ ಇಂಟೆಲಿಜೆನ್ಸ್‌) ತಂತ್ರಜ್ಞಾನ ಬಳಸಿ ಸೃಷ್ಟಿಸಿದ ಚಿತ್ರ ಅಥವಾ ಫೋಟೊಶಾಪ್ ಚಿತ್ರ ಇರಬಹುದು ಎಂದು ಅನುಮಾನಿಸಿದ್ದರು.

‘ಐ ನ್ಯಾಚುರಲಿಸ್ಟ್ ಮತ್ತು ಇಂಡಿಯಾ ಬಯೋಡೈವರ್ಸಿಟಿ’ ಪೋರ್ಟಲ್‌ ಈ ಚಿತ್ರವನ್ನು ನೈಜವಾದ ಛಾಯಾಚಿತ್ರ ಎಂದು ದೃಢೀಕರಿಸಿತು. ಆ ಅನುಮಾನ ನಿವಾರಣೆಯಾದ ಬಳಿಕ ನಿಯತಕಾಲಿಕದಲ್ಲಿ ಲೇಖನ ಪ್ರಕಟವಾಯಿತು. 

ಕಪ್ಪೆಯಂತಹ ಉಭಯವಾಸಿಗಳು ಶಿಲೀಂಧ್ರ (ಫಂಗೈ) ಸಂಬಂಧಿತ ಕಾಯಿಲೆಗಳಿಂದ ಸಾವನ್ನಪ್ಪುವುದು ಸಹಜ. ಈ ಸಮಸ್ಯೆಯನ್ನು ಕೀಟ ಮತ್ತು ಜೇಡಗಳಲ್ಲೂ ಕಾಣಬಹುದು. ಆದರೆ ಜೀವಂತ ಕಪ್ಪೆಯ ಮೇಲೆ ಅಣಬೆ ಬೆಳೆದಿರುವ ಬಗ್ಗೆ ವೈಜ್ಞಾನಿಕ ಅಧ್ಯಯನ, ಆಳವಾದ ಸಂಶೋಧನೆ ಅಗತ್ಯವಿದೆ ಎನ್ನುವುದು ಲೋಹಿತ್‌ ಅಭಿಪ್ರಾಯ.

ವೈ.ಟಿ.ಲೋಹಿತ್‌
ವೈ.ಟಿ.ಲೋಹಿತ್‌
ಡಾ.ವಿವೇಕ್ ಫಿಲಿಪ್ಸಿರಿಯಾಕ್
ಡಾ.ವಿವೇಕ್ ಫಿಲಿಪ್ಸಿರಿಯಾಕ್
ಜೀವಂತ ಕಪ್ಪೆಯ ಮೇಲೆ ಬೆಳೆದಿರುವ ಅಣಬೆ
ಜೀವಂತ ಕಪ್ಪೆಯ ಮೇಲೆ ಬೆಳೆದಿರುವ ಅಣಬೆ
ಜೀವಂತ ಕಪ್ಪೆಯ ಮೇಲೆ ಬೆಳೆದಿರುವ ಅಣಬೆ
ಜೀವಂತ ಕಪ್ಪೆಯ ಮೇಲೆ ಬೆಳೆದಿರುವ ಅಣಬೆ
ಜೀವಂತ ಕಪ್ಪೆಯ ಮೇಲೆ ಬೆಳೆದಿರುವ ಅಣಬೆ
ಜೀವಂತ ಕಪ್ಪೆಯ ಮೇಲೆ ಬೆಳೆದಿರುವ ಅಣಬೆ

ಸಂಶೋಧನೆಗೆ ಪ್ರೇರಣೆ

ಇದೊಂದು ಕುತೂಹಲಕಾರಿ ದಾಖಲಾತಿ ಮತ್ತು ಸಂಶೋಧನೆ. ಕೆಲವೊಂದು ಶಿಲೀಂಧ್ರಗಳು (ಫಂಗೈ) ಕೆಲ ಪ್ರಾಣಿಗಳ ಜೀವನಕ್ಕೆ ಪೂರಕವಾಗಿರುತ್ತವೆ. ಇನ್ನೂ ಕೆಲವು ಶಿಲೀಂಧ್ರ ಮಾರಕವಾಗಿರುತ್ತವೆ. ಕಪ್ಪೆ ಮತ್ತು ಅಣಬೆಯ ಸಂಬಂಧದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಕಪ್ಪೆ ಮತ್ತು ಶಿಲೀಂಧ್ರಗಳಿಗಿರುವ ಸಂಕೀರ್ಣ ಸಂಬಂಧದ ಬಗ್ಗೆ ಆಳವಾದ ಅಧ್ಯಯನಕ್ಕೆ ಈ ಅಪರೂಪದ ಕಪ್ಪೆ ಸಂಶೋಧಕರಿಗೆ ಪ್ರೇರಣೆ ನೀಡಿದೆ. ಡಾ.ವಿವೇಕ್ ಫಿಲಿಪ್‌ ಸಿರಿಯಾಕ್ ಸೆಂಟರ್ ಫಾರ್ ಇಕಾಲಜಿಕಲ್ ಸೈನ್ಸಸ್‌ (ಐಐಎಸ್‌ಸಿ) ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT