ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ | ನಾಗರಕೆರೆಗೆ ಹೊಸ ರೂಪ: ತೇಲುವ ದೀಪಗಳು, ಕಾರಂಜಿ ಅತ್ಯಾಕರ್ಷಕ

* ಕಣ್ಮನ ಸೆಳೆಯುವ ನೋಟ
Published 24 ಮೇ 2024, 4:28 IST
Last Updated 24 ಮೇ 2024, 4:28 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ಹೃದಯಭಾಗದ ನಾಗರಕೆರೆ ಪುನಃಶ್ಚೇತನ ಕಾರ್ಯ ವಿಳಂಬದಿಂದಾಗಿ ಕಲುಷಿಗೊಂಡಿದೆ. ಇದು ಜೀವ ವೈವಿಧ್ಯಕ್ಕೆ ಮಾರಕವಾಗಿದೆ. ಈ ದಿಸೆಯಲ್ಲಿ ಡಬ್ಲ್ಯೂ.ಡಬ್ಲ್ಯೂ.ಎಫ್ ಇಂಡಿಯಾ ವತಿಯಿಂದ ಕೈಗೊಂಡಿರುವ ವಿಭಿನ್ನ ಯೋಜನೆಗಳಿಂದಾಗಿ ಕೆರೆ ಪುನಃಶ್ಚೇತನ ಸಾರ್ವಜನಿಕರಲ್ಲಿ ಒಂದಿಷ್ಟು ಭರವಸೆ ಮೂಡಿಸಿದೆ.

2018ರಲ್ಲಿ ಸಿ.ಎಸ್‌.ಕರೀಗೌಡ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆಗಿದ್ದ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ಕೈಗಾರಿಕೆಗಳ ಸಹಕಾರದೊಂದಿಗೆ ನಾಗರಕೆರೆ ಹೂಳು ತೆಗೆಸಿ ನಡುಗಡ್ಡೆಗಳನ್ನು ನಿರ್ಮಿಸಲಾಗಿತ್ತು. ನಾಗಕೆರೆ ಪ್ರದೇಶ ಪ್ರಸ್ತುತ 68 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಕೆರೆ ಏರಿ ಉದ್ದ 1,194 ಮೀಟರ್, ಆಳ ಸುಮಾರು 5 ಮೀ. ಕೆರೆ ಜಲಾನಯನ ಪ್ರದೇಶ 7.60 ಚದರ ಕಿ.ಮೀ. 2.27 ಮಿಲಿಯನ್ ಕ್ಯು.ಮೀ ನೀರು ನಿಲ್ಲುವ ಸಾಮರ್ಥ್ಯ ಹೊಂದಿದೆ.

ನಗರಸಭೆ ವ್ಯಾಪ್ತಿಯಿಂದ ಬರುವ ಎಲ್ಲ ಒಳಚರಂಡಿ ನೀರು ಸಹ ಹರಿದು ಹೋಗುವ ಬೃಹತ್‌ ಪೈಪ್‌ಲೈನ್‌ ಹಾಗೂ ಚೇಂಬರ್‌ ನಾಗರಕೆರೆಯಲ್ಲಿಯೇ ನಿರ್ಮಿಸಲಾಗಿದೆ. ಹಲವು ಬಾರಿ ಈ ಚೇಂಬರ್‌ ಮೂಲಕ ನೀರು ಹೊರಗೆ ಬಂದು ಕೆರೆಗೆ ಸೇರ್ಪಡೆಯಾಗುತ್ತಿದೆ. ನಗರದ ಡಿ.ಕ್ರಾಸ್ ಮುಖ್ಯ ರಸ್ತೆ ಅಯ್ಯಪ್ಪಸ್ವಾಮಿ ದೇವಾಲಯ ಸಮೀಪದ ರಾಜಕಾಲುವೆ ಮೂಲಕ ನಗರದಲ್ಲಿನ ಕೊಳಜೆ ನೀರು ನೇರವಾಗಿ ಕೆರೆ ಅಂಗಳ ಸೇರುತ್ತಿದೆ.

ಈ ರಾಜಕಾಲುವೆ ಮೂಲಕ ನಗರದಲ್ಲಿನ ಪ್ಲಾಸ್ಟಿಕ್‌ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ಕಲುಷಿತ ನೀರಿನಿಂದ ಕೆರೆ ಮಲಿನವಾಗಲು ಕಾರಣವಾಗಿದೆ. ಇದರಿಂದ ಕೆರೆಯಲ್ಲಿನ ಜಲಚರಗಳು ಮೃತಪಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

ತೇಲುವ ದ್ವೀಪಗಳು: ಕೆರೆಯಲ್ಲಿ ನೀರು ಬಳ್ಳಿ, ಕೆನ, ಜೊಂಡು, ಕೆಸವೇದಂಟು ಗಿಡಗಳನ್ನೊಳಗೊಂಡ 10 ತೇಲುವ ದ್ವೀಪಗಳನ್ನು ಕೆರೆಯಲ್ಲಿ ಬಿಡಲಾಗಿದೆ. 10*10 ಅಡಿ ಅಳತೆ ತೇಲುವ ದ್ವೀಪಗಳಲ್ಲಿ ದೇಸಿ ಜಲ ಗಿಡಗಳನ್ನು ಹಾಕಲಾಗಿದೆ. ಇವು ಕೆರೆಯಲ್ಲಿರುವ ಅಕ್ರಮಣಕಾರಿ ಜಲ ಕಳೆಯಾದ ಜಂಬು ಕೆರೆಯಲ್ಲಿ ಅವರಿಸದಂತೆ ತಡೆಯುತ್ತವೆ. ಇವು ಕೆರೆ ನೀರಿನಲ್ಲಿರುವ ಮಲಿನ ಪೋಷಕಾಂಶ ಸೆಳೆದು ನೀರಿನ ಮಲಿನತೆ ಕಡಿಮೆ ಮಾಡುತ್ತವೆ.

ಆಫ್ರಿಕಾ ಮೂಲದ ಅಕ್ರಮಣಕಾರಿ ತೇಲುವ ಜಲ ಕಳೆ ಜಂಬು ಅಥವಾ ವಾಟರ್ ಹಯಾಸಿಂತ್ 20 ಹೆಕ್ಟೇರ್‌ ಹೆಚ್ಚು ಪ್ರದೇಶವನ್ನು ನಾಗರಕೆರೆಯಲ್ಲಿ ಆವರಿಸಿದೆ. ಈ ಜಲ ಕಳೆ ಒಮ್ಮೆ ಯಾವುದಾದರೂ ಜಲಾಮೂಲ ಸೇರಿದರೆ ಇಡೀ ಕೆರೆಯನ್ನೇ ಅಕ್ರಮಿಸಿ ಹಬ್ಬುತ್ತದೆ. ಊರಿನ ನೀರು ಈ ಗಿಡಗಳಿಗೆ ಪೌಷ್ಟಿಕಾಂಶ ನೀಡಿ ಪೋಷಿಸುತ್ತದೆ. ಸಂಸ್ಥೆಯು ಕೆರೆಯಲ್ಲಿ 5 ಹೆಕ್ಟೇರ್ ಜಲಕಳೆ ತೆಗಿಸಿದ್ದು, ಇದನ್ನು ಗೊಬ್ಬರವಾಗಿ ಮಾಡಲು ನಗರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ತಲುಪಿಸಿದೆ ಮತ್ತು ಕೆಲವು ರೈತರು ಕೃಷಿ ಭೂಮಿಗೆ ಬಳಸಿಕೊಂಡಿದ್ದಾರೆ.

ಮನ ಮೋಹಕ ತೇಲುವ ಕಾರಂಜಿ

ಎರಡು ತೇಲುವ ಕಾರಂಜಿಗಳನ್ನು ಕೆರೆಯಲ್ಲಿ ಬಿಡಲಾಗಿದೆ. ಈ ಕಾರಂಜಿಗಳು ನೋಡಲು ಜನರಿಗೆ ಮನಮೋಹಕವಾಗಿವೆ. ಅಲ್ಲದೆ ನೀರನ್ನು ಶುದ್ಧೀಕರಣಗೊಳಿಸುತ್ತದೆ. ಇವಕ್ಕೆ ಇಲ್ಲಿಯೇ ಸೌರಶಕ್ತಿ ಚಾಲಿತ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಈ ಕಾರಂಜಿಗಳು ಕೆರೆಯಡಿಯಿಂದ ನೀರು ಎಳೆದು ಎತ್ತರಕ್ಕೆ ಚಿಮ್ಮವುದರಿಂದ ವಾತಾವರಣದಲ್ಲಿನ ಆಮ್ಲಜನಕ ನೀರು ಸಂಗ್ರಹಿಸಿ ಬೀಳುವುದರಿಂದ ಕೆರೆ ನೀರಿನಲ್ಲಿ ಕರಗಿರುವ ಆಮ್ಲಜನಕ ಪ್ರಮಾಣ ವೃದ್ಧಿಸುತ್ತದೆ. ಇದು ಕೆರೆಯಲ್ಲಿನ ಜಲಚರ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಅನುಕೂಲವಾಗಲಿದೆ. ಇದರ ಜತೆಗೆ ಈಗಾಗಲೇ ಅವಶ್ಯಕತೆಗಿಂತ ಹೆಚ್ಚಿರುವ ಬಿ.ಒ.ಡಿ(ಬಯಾಲಾಜಿಕಲ್ ಆಕ್ಸಿಜನ್ ಡಿಮಾಂಡ್) ಮತ್ತು ಸಿ.ಒ.ಡಿ (ಕೆಮಿಕಲ್ ಆಕ್ಸಿಜನ್ ಡಿಮಾಂಡ್) ಅಂಶಗಳು ಗಣನೀಯವಾಗಿ ಕಡಿಮೆಯಾಗುತ್ತವೆ. ಈ ಮಾದರಿ ಈಗಾಗಲೇ ಬೆಂಗಳೂರಿನ ಮಡಿವಾಳ ಮೊದಲಾದ ಕೆರೆಗಳಲ್ಲಿ ಅಳವಡಿಸಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ ಎನ್ನುತ್ತಾರೆ ವೈ.ಟಿ.ಲೋಹಿತ್‌. ನಾಗರಕೆಯಲ್ಲಿ ಬಾತು ಕೊಕ್ಕರೆ ಸೇರಿದಂತೆ ವಿವಿಧ ಜಾತಿ ಪಕ್ಷಿಗಳು ಜಲಚರ ಸೇರಿದಂತೆ ಹಲವು ರೀತಿಯ ಜೀವ ವೈವಿಧ್ಯತೆಗಳಿವೆ. ಇವುಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಜೀವವೈವಿಧ್ಯ ಫಲಕ‌ ಪ್ರಕಟಿಸಲಾಗಿದೆ.

ಕೆರೆ ಪುನಃಶ್ಚೇತನಕ್ಕೆ ಚಾಲನೆ

ಡಬ್ಲ್ಯೂ.ಡಬ್ಲ್ಯೂ.ಎಫ್ ಇಂಡಿಯಾ (ವಲ್ಡರ್‌ ವೈಡ್ ಫಂಡ್ ಫಾರ್ ನೇಚರ್) ಸಂಸ್ಥೆ ಕ್ಲೈಮೇಟ್ ಸಲ್ಯೂಷನ್ ಪಾರ್ಟನರ್‍ಶಿಪ್ ಕಾರ್ಯಕ್ರಮದಡಿ ಕೆರೆ ಸಂಪರ್ಕ ಕಾಲುವೆ ಪುನಃಶ್ಚೇತನ ಕೆರೆಯಲ್ಲಿನ ನೀರಿನಲ್ಲಿ ತೇಲುವ ಕಾರಂಜಿ ತೇಲುವ ದ್ವೀಪಗಳ ನಿರ್ಮಾಣ ಜೊಂಡು ತೆರವು ಕೆರೆ ಬಗ್ಗೆ ಫಲಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ಮುಂತಾದ ಕೆರೆ ಪುನಃಶ್ಚೇತನ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಡಬ್ಲ್ಯೂ.ಡಬ್ಲ್ಯೂ.ಎಫ್ ಇಂಡಿಯಾದ ಯೋಜನಾಧಿಕಾರಿ ವೈ.ಟಿ.ಲೋಹಿತ್ ಮಾಹಿತಿ ನೀಡಿದರು.

ನಾಗರಕೆರೆ ಏರಿಯಲ್ಲಿನ ಸೂಚನ ಫಲಕ
ನಾಗರಕೆರೆ ಏರಿಯಲ್ಲಿನ ಸೂಚನ ಫಲಕ
ನಾಗರಕೆರೆಯಲ್ಲಿನ ತೇಲುವ ದ್ವೀಪಗಳು
ನಾಗರಕೆರೆಯಲ್ಲಿನ ತೇಲುವ ದ್ವೀಪಗಳು
ಜೊಂಡು ತೆರವು ಮಾಡುತ್ತಿರುವುದು
ಜೊಂಡು ತೆರವು ಮಾಡುತ್ತಿರುವುದು
ಸಂಪರ್ಕ ಕಾಲುವೆಗಳ ಪುನಃಶ್ಚೇತನ
ಸಂಪರ್ಕ ಕಾಲುವೆಗಳ ಪುನಃಶ್ಚೇತನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT