ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆಗೆ ಅಗತ್ಯ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ
Last Updated 1 ಡಿಸೆಂಬರ್ 2019, 13:40 IST
ಅಕ್ಷರ ಗಾತ್ರ

ದೇವನಹಳ್ಳಿ: ಹೊಸಕೋಟೆ ವಿಧಾನಸಭಾ ಕ್ಷೇತ್ರದ (178) ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ಸಂಬಂಧಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚುನಾವಣಾ ಮಾದರಿ ನೀತಿ ಸಂಹಿತೆಯು ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಅನ್ವಯವಾಗದೆ ಜಿಲ್ಲಾದ್ಯಂತ ಜಾರಿಯಲ್ಲಿರುತ್ತದೆ. 2019ರ ಜನವರಿ 1ರ ಅರ್ಹತಾ ದಿನಾಂಕದಂತೆ ಈಗಾಗಲೇ ಪ್ರಕಟಿಸಲಾಗಿರುವ ಮತದಾರರ ಪಟ್ಟಿ ಆಧಾರದ ಮೇಲೆ ಉಪ ಚುನಾವಣೆ ನಡೆಯಲಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 2,12,748 ಮತದಾರರಿದ್ದು, ಅದರಲ್ಲಿ 1,07,766 ಪುರುಷರು, 1,04,956 ಮಹಿಳಾ ಮತದಾರರು ಹಾಗೂ 26 ಇತರೆ ಮತದಾರರಿದ್ದಾರೆ ಎಂದರು.

ಬಿ.ಇ.ಎಲ್ ಸಂಸ್ಥೆಯ ಎಂ3 ಮಾದರಿಯ ಇ.ವಿ.ಎಂಗಳನ್ನು ಬಳಸಿ ಉಪ ಚುನಾವಣೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿ, ಮತಗಟ್ಟೆಗಳ ವ್ಯವಸ್ಥೆ, ಚುನಾವಣಾ ಅಕ್ರಮ ಸೇರಿದಂತೆ ಉಪ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ, ದೂರವಾಣಿ ಸಂಖ್ಯೆ 1950 ಗೆ ಉಚಿತ ಕರೆ ಮಾಡುವ ಮೂಲಕ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಎಲ್ಲ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಹೊಸ ಯೋಜನೆ, ಕಾಮಗಾರಿಗಳನ್ನು ಆರಂಭಿಸಬಾರದು, ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಬೇಕು. ಹೊಸಕೋಟೆ ತಾಲ್ಲೂಕಿನಲ್ಲಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ದೂರು ನಿರ್ವಹಣಾ ಕೇಂದ್ರ ಮತ್ತು ಎಲ್ಲ‌ ತಪಾಸಣಾ ತಂಡಗಳನ್ನು ಕಾರ್ಯಗತಗೊಳಿಸಬೇಕು ಎಂದರು.

ತಾಲ್ಲೂಕಿನಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಮೂಲಸೌಕರ್ಯಗಳ ಭೌತಿಕ ಪರಿಶೀಲನೆ ಮತ್ತು ದೃಢೀಕರಣ ಪತ್ರ ಸಲ್ಲಿಸಬೇಕು. ಜಿಲ್ಲೆಯ ನಾಲ್ಕು ತಾಲ್ಲೂಕು ಕಚೇರಿಯಲ್ಲಿ 24/7 ನಿರ್ವಹಣಾ ಕೇಂದ್ರ ಸ್ಥಾಪಿಸಬೇಕು. ಹೊಸ ಎಂ3 ಇವಿಎಂ ಗಳ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ಅಧಿಕಾರಿಗಳಲ್ಲಿ ಜಾಗೃತಿ ಕಾರ್ಯಕ್ರಮ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಸ್ವೀಪ್ ಚಟುವಟಿಕೆಗಳ ಮೂಲಕ ಆಯೋಜಿಸಬೇಕು ಎಂದು ಸೂಚಿಸಿದರು.

ಅಂಗವಿಕಲ ಮತದಾರರನ್ನು ಗುರುತಿಸಿ, ಸದರಿಯವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಪೊಲೀಸ್ ವರರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ಮಾತನಾಡಿ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳನ್ನು ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ನೇತೃತ್ವದಲ್ಲಿ ಚೆಕ್‌ಪೋಸ್ಟ್‌ಗಳಿಗೆ ಎಸ್‌ಎಸ್‌ಟಿ ತಂಡಗಳನ್ನು ನಿಯೋಜಿಸಲಾಗಿದೆ. ಎಂಟು ಚೆಕ್‌ಪೋಸ್ಟ್‌ಗಳನ್ನು ತೆರೆಯಲು ಸ್ಥಳಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲಿ ಸ್ಥಾಪಿಸಲಾಗುವುದು ಎಂದರು.

ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿರುವ ರೌಡಿಶೀಟರ್‌ಗಳ ಪರೇಡ್ ನಡೆಸಲಾಗುವುದು. ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗುವುದು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜಿಸುವ ಮೂಲಕ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಉಪ ಚುನಾವಣೆಯಲ್ಲಿ ಸುಗಮ ಹಾಗೂ ಪಾರದರ್ಶಕ ಮತದಾನದ ಹಿನ್ನೆಲೆಯಲ್ಲಿ 3 ರೌಡಿ ಶೀಟರ್ ಮತ್ತು 6 ಮಂದಿಗೆ ಗಡಿಪಾರು ಮಾಡುವ ಚಿಂತನೆ ನಡೆಸಲಾಗುತ್ತಿದೆ. ಅಹಿತಕರ ಘಟನೆಗೆ ಕಾರಣವಾಗುವ ಸಾಧ್ಯತೆ ಇರುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು. ಈ ಕ್ಷೇತ್ರದಲ್ಲಿ 398 ರೌಡಿ ಶೀಟರ್‌ಗಳು ಇದ್ದು ಎಲ್ಲ‌ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಗುತ್ತಿದೆ ಎಂದರು.

3,866 ಪರವಾನಗಿ ಶಸ್ತ್ರಗಳನ್ನು ಪೋಲೀಸ್ ಸುಪರ್ದಿಗೆ ಪಡೆಯಲಾಗುತ್ತಿದೆ. ಪೊಲೀಸರು ಸಾರ್ವಜನಿಕರ ಸ್ನೇಹಿ ಆಗಿದ್ದಾರೆ. ಅಕ್ರಮ ತಡೆಗೆ ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ನಾಗರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ್, ಜಿಲ್ಲಾ ಮಟ್ಟದ ಅಧಿಕಾರಿಗಳು, ನಾಲ್ಕು ತಾಲ್ಲೂಕುಗಳ ತಹಶೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT