ಡ್ರಗ್ಸ್ ಜಾಲ ನಿಗ್ರಹಕ್ಕೆ ಮೊದಲ ಆದ್ಯತೆ: ಎಸ್‌ಪಿ ವಂಶಿ ಕೃಷ್ಣ

ನೆಲಮಂಗಲ: ‘ಮಾದಕ ವ್ಯಸನದಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಾದಕ ವಸ್ತುಗಳ ಸರಬರಾಜು ಜಾಲ ಮತ್ತು ಅದರ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಲು ಆದ್ಯತೆ ನೀಡಲಾಗುವುದು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಕೋನ ವಂಶಿ ಕೃಷ್ಣ ತಿಳಿಸಿದರು.
ನೆಲಮಂಗಲ ಉಪವಿಭಾಗದ ಪೊಲೀಸರು ಪತ್ತೆ ಹಚ್ಚಿದ ವಿವಿಧ ಅಪರಾಧ ಪ್ರಕರಣಗಳ ಸಂಬಂಧ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಶೀಘ್ರದಲ್ಲೇ ಕಾಲ್ನಡಿಗೆ ಗಸ್ತನ್ನು ಪ್ರಾರಂಭಿಸಲಾಗುವುದು. ಸಾರ್ವಜನಿಕರ ಸುರಕ್ಷತೆಗಾಗಿ ಹೆಚ್ಚು ಜನ ಸಂದಣಿಯಾಗುವ ಮಳಿಗೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ. ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸಾರ್ವಜನಿಕರೊಂದಿಗೆ ಮೃದುವಾಗಿ ಮಾತನಾಡಲು ಕೌಶಲ ತರಬೇತಿ ನೀಡಲಾಗುತ್ತಿದೆ’ ಎಂದರು.
‘ಒಂದು ತಿಂಗಳಲ್ಲಿ 10 ಅಪರಾಧ ಪ್ರಕರಣಗಳಿಂದ ಅಂತರರಾಜ್ಯ ಆರೋಪಿಗಳು ಸೇರಿದಂತೆ 14 ಮಂದಿಯನ್ನು ಬಂಧಿಸಲಾಗಿದೆ. ₹19.13 ಲಕ್ಷ ಬೆಲೆ ಬಾಳುವ 490 ಗ್ರಾಂ ಚಿನ್ನಾಭರಣ, ಮೀನು ಪೆಟ್ಟಿಗೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹3 ಲಕ್ಷ ಮೌಲ್ಯದ 12 ಕೆ.ಜಿ. ಗಾಂಜಾ, ₹4.61 ಲಕ್ಷ ನಗದು ಸೇರಿದಂತೆ ಒಟ್ಟು ₹26.74 ಲಕ್ಷ ಮೌಲ್ಯದ ಮಾಲು ಜಪ್ತಿ ಮಾಡಲಾಗಿದೆ’ ಎಂದರು.
ಪೊಲೀಸ್ ಅಧಿಕಾರಿಗಳಾದ ಜಗದೀಶ್, ಎ.ವಿ.ಕುಮಾರ್, ಹರೀಶ್, ಮಂಜುನಾಥ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.