ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿಯ ಕೊಯಿರಾ ಬೆಟ್ಟ: ಕಲ್ಲು ಗಣಿಗಾರಿಕೆಗೆ ವಿರೋಧ

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸರ್ವೆಗೆ 6 ಜನರ ತಂಡ ರಚನೆ
Last Updated 26 ಆಗಸ್ಟ್ 2021, 9:25 IST
ಅಕ್ಷರ ಗಾತ್ರ

ದೇವನಹಳ್ಳಿ: ಜೀವವೈವಿಧ್ಯದ ತಾಣವಾಗಿರುವ ಕೊಯಿರಾ ಬೆಟ್ಟದಲ್ಲಿ ಮತ್ತೆ ಕಲ್ಲು ಗಣಿಗಾರಿಕೆಯ ಸದ್ದು ಮೊಳಗಿಸಲು ತೆರೆಮರೆಯ ಸಿದ್ಧತೆ ನಡೆದಿದ್ದು, ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.

ಕೊಯಿರಾ ಬೆಟ್ಟ ಅರ್ಕಾವತಿ ನದಿಯ ಕ್ಯಾಚ್‌ಮೆಂಟ್ ಪ್ರದೇಶವಾಗಿದೆ. ಹಾಗಾಗಿ, 2005ರಿಂದ ಸರ್ಕಾರ ಇಲ್ಲಿ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಬೆಟ್ಟದಲ್ಲಿ ಕಲ್ಲಿನ ನಿಕ್ಷೇಪ ತೆಗೆಯುವ ಮುನ್ನ ಗಣಿಗಾರಿಕೆಯಿಂದ ಅಲ್ಲಿ ಆಗುವ ದುಷ್ಪರಿಣಾಮದ ಮಾಹಿತಿ ಪಡೆದು ಗಣಿಗಾರಿಕೆಗೆ ಕೈಹಾಕಬೇಕು. ಗಣಿಗಾರಿಕೆ ನಡೆಸಿದರೆ ಭವಿಷ್ಯದಲ್ಲಿ ಬೆಟ್ಟದ ಸುತ್ತಲೂ ವಾಸಿಸುವವರಿಗೆ ತೊಂದರೆಯಾಗಲಿದೆ ಎಂಬುದು ಗ್ರಾಮಸ್ಥರ ಕಳವಳ.

ಕಲ್ಲಿನ ನಿಕ್ಷೇಪ ತೆಗೆಯಲು ಸರ್ಕಾರಕ್ಕೆ 2020ರ ಸೆ. 10ರಂದು ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 28ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಪ್ರಸ್ತಾವದಲ್ಲಿ ತಿಪ್ಪಗೊಂಡನಹಳ್ಳಿ ಜಲಾನಯನಕ್ಕೆ ನೀರು ಹರಿಯುವುದರಿಂದ ಜಲಾನಯನಕ್ಕೆ ತೊಂದರೆ ಆಗಲಿದೆಯೇ ಎಂದು ಪ್ರಶ್ನಿಸಲಾಗಿತ್ತು.

ವಾಸ್ತವದಲ್ಲಿ ಗಣಿಗಾರಿಕೆ ಪ್ರದೇಶ ಅರ್ಕಾವತಿ ಕ್ಯಾಚ್‌ಮೆಂಟ್ ಏರಿಯ ಪ್ರದೇಶವಾಗಿದೆ. ಈ ಪ್ರದೇಶದಿಂದ ಮನಗೊಂಡನಹಳ್ಳಿ, ರಾಮನಾಥಪುರ ಮತ್ತು ಅರುವನಹಳ್ಳಿ ಕೆರೆಗಳಿಗೆ ನೀರು ಹರಿಯುತ್ತಿದೆ. ನೀರು ಹರಿಯುವ ಕಾಲುವೆ ಮತ್ತು ಗ್ರಾಮಗಳನ್ನು ರಾಜ್ಯ ಸರ್ಕಾರ ಕಾವೇರಿ ನೀರಾವರಿ ಯೋಜನೆಗೆ ಸೇರಿಸಿದ್ದು, 2010-2011ನೇ ಸಾಲಿನಲ್ಲಿ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಕೊಯಿರಾ ಬೆಟ್ಟದ ಕಲ್ಲುಗಳನ್ನು ವಿಧಾನಸೌಧ ನಿರ್ಮಾಣಕ್ಕೆ ಬಳಸಲಾಗಿದೆ. ವಿದೇಶಗಳಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ದೇವಸ್ಥಾನ ಹಾಗೂ ಇತರೆ ಶಿಲ್ಪಕಲೆಗೆ ಈ ಕಲ್ಲನ್ನು ಬಳಸಿದ್ದಾರೆ.

ಈ ಪ್ರದೇಶ ಚಿರತೆಗಳ ಆವಾಸ ಸ್ಥಾನವಾಗಿದೆ. ಅಲ್ಲದೇ ವಿವಿಧ ಪ್ರಭೇದಕ್ಕೆ ಸೇರಿದ ಪ್ರಾಣಿ, ಪಕ್ಷಿಗಳು ಇವೆ. ಹಾಗಾಗಿ, ಇಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಜೀವಸಂಕುಲಕ್ಕೆ ತೊಂದರೆಯಾಗಲಿದೆ ಎಂಬುದು ಪರಿಸರ ಪ್ರೇಮಿಗಳ
ಆತಂಕ.

‘ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕೊಯಿರಾ ಬೆಟ್ಟವನ್ನು ವೈಜ್ಞಾನಿಕವಾಗಿ ಸರ್ವೆ ಕಾರ್ಯ ಮಾಡಲು 6 ಜನರ ತಂಡ ರಚಿಸಿದೆ. ಅಲ್ಲಿನ ವಸ್ತುಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ತಂಡಕ್ಕೆ ಸೂಚಿಸಿದೆ’ ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿರೇಣುಕಾ ಸ್ಪಷ್ಟಪಡಿಸಿದರು.

‘ಪ್ರಸ್ತುತ ಸರ್ವೆ ಕಾರ್ಯ ನಡೆಯುತ್ತಿದೆ. ಬೆಟ್ಟದಲ್ಲಿ ನದಿಯ ಕ್ಯಾಚ್‌ಮೆಂಟ್ ಏರಿಯ ಬರುವುದರಿಂದ ಸರ್ಕಾರ ಗಣಿಗಾರಿಕೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತಂಡ ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT