ಶುಕ್ರವಾರ, ಅಕ್ಟೋಬರ್ 7, 2022
24 °C
ಕರ್ನಾಟಕ ಸಂತೆ, ಬೀದಿಬದಿ ವ್ಯಾಪಾರಿಗಳ ಸಂಘ ಉದ್ಘಾಟನೆ

ಆನೇಕಲ್ | ಸಂಘಟಿತ ಹೋರಾಟ: ಅಸಂಘಟಿತರಿಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ಪಟ್ಟಣದ ಶ್ರೀರಾಮ ಕುಟೀರದಲ್ಲಿ ಗುರುವಾರ ಕರ್ನಾಟಕ ಸಂತೆ ಮತ್ತು ಬೀದಿಬದಿ ವ್ಯಾಪಾರಿಗಳ ಸಂಘದ ಉದ್ಘಾಟನೆ ಮತ್ತು ಸಮಾವೇಶ ನಡೆಯಿತು.

ಸಮಾವೇಶ ಉದ್ಘಾಟಿಸಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಅಸಂಘಟಿತ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರು ಸಂಘಟಿತರಾಗುವ ಅವಶ್ಯಕತೆಯಿದೆ. ಆ ಮೂಲಕ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಮಹತ್ಕಾರ್ಯ ಮಾಡಲು ಸಾಧ್ಯವಾಗುತ್ತದೆ ಎಂದರು.

ಬೀದಿಬದಿ ವ್ಯಾಪಾರಿಗಳು ಸೀಮಿತ ಸೌಲಭ್ಯದಲ್ಲಿ ದಿನವಿಡೀ ಕೆಲಸ ಮಾಡುತ್ತಾರೆ. ಅವರಿಗೆ ಎಲ್ಲಾ ಸೌಲಭ್ಯ ಕಲ್ಪಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪಿ.ಎಂ ಸ್ವನಿಧಿ ಯೋಜನೆ, ಜೀವನ್‌ ಜ್ಯೋತಿ ಯೋಜನೆ, ಸುರಕ್ಷಾ ಭೀಮಾ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದೆ. ವ್ಯಾಪಾರಿಗಳಿಗೆ ಸಾಲ, ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಇವುಗಳ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.

ಸರ್ಕಾರಗಳು ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳ ಬಗ್ಗೆ ಪ್ರಚಾರವಾಗದಿದ್ದರೆ ಕಾಗದದಲ್ಲಿಯೇ ಉಳಿಯುತ್ತವೆ. ಹಾಗಾಗಿ, ಅಧಿಕಾರಿಗಳು ಮತ್ತು ವಿದ್ಯಾವಂತರು ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಅರ್ಹರು ಸೌಲಭ್ಯ ಪಡೆಯುವಂತೆ ಮಾಡಬೇಕು ಎಂದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಸೂರು ಕಲ್ಪಿಸಿಕೊಡುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಸ್ವಂತ ಮನೆಯಿಲ್ಲದ ಕುಟುಂಬಗಳು ಅರ್ಜಿ ಸಲ್ಲಿಸಿದರೆ ಸರ್ಕಾರದ ವಿವಿಧ ಯೋಜನೆಯಡಿ ಸೂರು ಕಲ್ಪಿಸಿ ಕೊಡಲಾಗುವುದು. ಸಂಘದ ಮೂಲಕ ಅರ್ಹರನ್ನು ಗುರುತಿಸಿ ಅರ್ಜಿ ಸಲ್ಲಿಸಿದರೆ ತಾಲ್ಲೂಕಿನ ಬಹುವಸತಿ ಸಮುಚ್ಚಯದಲ್ಲಿ ಮನೆಗಳನ್ನು ಮಂಜೂರು ಮಾಡಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.

ಬೀದಿಬದಿ ವ್ಯಾಪಾರಿಗಳು ಸಂಘಟಿತರಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಜನರಿಗೆ ತೊಂದರೆಯಾಗುವಂತಹ ಸಂಚಾರ ದಟ್ಟಣೆ ಮತ್ತಿತರ ಸಂದರ್ಭದಲ್ಲಿ ಹೊಂದಾಣಿಕೆಯಿಂದ ವ್ಯಾಪಾರ ನಡೆಸಬೇಕು. ಈ ಮೂಲಕ ಯಾರಿಗೂ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದು
ತಿಳಿಸಿದರು.

ಕಾರ್ಯಕ್ರಮದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಂಘದ ಗುರುತಿನ ಚೀಟಿ ವಿತರಿಸಲಾಯಿತು. ಬೀದಿಬದಿ ವ್ಯಾಪಾರ ನಡೆಸುವ ನೂರಾರು ಮಹಿಳೆಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಪುರಸಭಾ ಸದಸ್ಯರಾದ ಪ್ರಕಾಶ್‌, ಶ್ರೀಕಾಂತ್‌, ಅನಿತಾ ವೆಂಕಟೇಶ್‌, ಹಾಪ್‌ಕಾಮ್ಸ್‌ ನಿರ್ದೇಶಕ ಮುತ್ತೂರು ನಾರಾಯಣಪ್ಪ, ಮುಖಂಡರಾದ ಟಿ.ವಿ. ಬಾಬು, ಎಂ. ನಾರಾಯಣಸ್ವಾಮಿ, ಆದೂರು ಪ್ರಕಾಶ್‌, ಗಂಡಸಿ ಸದಾನಂದಸ್ವಾಮಿ, ಸಂಘದ ಕಾನೂನು ಸಲಹೆಗಾರ ಎಚ್. ಶ್ರೀನಿವಾಸ್, ಗೌರವಾಧ್ಯಕ್ಷ ವಿ. ವರದರಾಜು, ಅಧ್ಯಕ್ಷ ಸಿ. ವೇಣುಗೋಪಾಲ್‌, ಪದಾಧಿಕಾರಿಗಳಾದ ಬಿ. ಚಂದ್ರಮೋಹನ್‌, ರಾಮಚಂದ್ರ, ಅರುಣ್‌ಕುಮಾರ್, ನಾರಾಯಣ್‌, ಪರಮೇಶ್, ಗೋಪಿ, ರಮೇಶ್, ಕೆ. ಗೋವಿಂದರಾಜು ಹಾಜರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು