ಭಾನುವಾರ, ಜನವರಿ 19, 2020
20 °C

ಸಾವಿತ್ರಿಬಾಯಿ ಫುಲೆ ಮಹಿಳಾ ಸ್ವಾಭಿಮಾನದ ಸಂಕೇತ: ಚಿ.ಮಾ.ಸುಧಾಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಮಹಿಳಾ ಸ್ವಾಭಿಮಾನದ ಸಂಕೇತದಂತಿದ್ದ ಸಾವಿತ್ರಿಬಾಯಿ ಫುಲೆ ಅವರು ಶೋಷಣೆಗೊಳಗಾಗಿದ್ದ ಕೆಳ ಸಮುದಾಯದವರಿಗೆ ಶಿಕ್ಷಣ ನೀಡಿದರು. ಅವರ ತತ್ವಾದರ್ಶಗಳನ್ನು ಎಲ್ಲರು ಅಳವಡಿಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ಹೇಳಿದರು.

ಇಲ್ಲಿನ ಗಾಂಧಿಚೌಕದಲ್ಲಿರುವ ಕಸಾಪ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರೆ ಅದಕ್ಕೆ ಸಾವಿತ್ರಿ ಅವರು 1848 ರಲ್ಲಿ ಆರಂಭಿಸಿದ್ದ ಶಿಕ್ಷಣ ಕ್ರಾಂತಿಯೇ ಕಾರಣ. ನಾವು ಇತಿಹಾಸವನ್ನು ಅರಿತರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಹೀಗಾಗಿ ಬುದ್ಧ, ಬಸವ, ಅಂಬೇಡ್ಕರ್, ಶಾಹು ಮಹಾರಾಜ, ಮತ್ತು ಮಹಾತ್ಮ ಜ್ಯೋತಿಭಾ ಫುಲೆ, ಸಾವಿತ್ರಿಬಾಯಿ ಫುಲೆ ಹೋರಾಟದ ಕುರಿತು ತಿಳಿಯುವುದು ಮುಖ್ಯ ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕಿ ಎಸ್.ರವಿಕಲಾ ಮಾತನಾಡಿ, ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು ಮಹಿಳಾ ಸಮಾಜಕ್ಕೆ ಸ್ಫೂರ್ತಿ. ಸಮಾಜದಲ್ಲಿದ್ದ ಅಸಮಾನತೆಯನ್ನು ಹೊಡೆದೋಡಿಸಲು ಫುಲೆ ದಂಪತಿ ಶ್ರಮಿಸಿದ್ದರು. ಹಲವು ಅಡೆತಡೆಗಳನ್ನು ಎದುರಿಸಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಮಹಿಳಾ ಸಮುದಾಯಕ್ಕೆ ಆದರ್ಶಪ್ರಾಯರಾದರು ಎಂದರು.

ಸಾಹಿತಿ ವಿ.ಎನ್.ರಮೇಶ್ ಮಾತನಾಡಿ, ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳವಳಿ ಮಾಡಿದ್ದು ಸಾವಿತ್ರಿಬಾಯಿ ಫುಲೆ. ಅಂದಿನ ಸಮಾಜದಲ್ಲಿ ಮಕ್ಕಳಿಗೆ ಮೊದಲು ಅಕ್ಷರ ಕಲಿಸಿದ ಸಾವಿತ್ರಿ ಬಾಯಿ ಅವರ ಹೆಸರಿನಲ್ಲಿಯೇ ಶಿಕ್ಷಕರ ದಿನವನ್ನು ಆಚರಿಸುವುದು ಸೂಕ್ತ ಮತ್ತು ಅರ್ಥಪೂರ್ಣವಾಗಿರುತ್ತದೆ ಎಂದು ಹೇಳಿದರು.

ಟ್ರಸ್ಟಿನ ಸಂಸ್ಥಾಪಕಿ ಎಸ್.ರವಿಕಲಾ, ದೇವನಹಳ್ಳಿ ಆಕ್ಸ್‌ಫರ್ಡ್ ಶಾಲಾ ಶಿಕ್ಷಕಿ ಕಾವೇರಿ ಅವರನ್ನು ಸನ್ಮಾನಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ರಾಜಗೋಪಾಲ್, ನಗರ ಘಟಕದ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ, ಪ್ರಧಾನ ಕಾರ್ಯದರ್ಶಿ ಮುನಿವೆಂಕಟರಮಣಪ್ಪ, ಪರಮೇಶಯ್ಯ, ಸುರೇಶ್, ಚಂದ್ರಕಲಾ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು