ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ರಾಗಿ ಪೈರು ನಾಟಿ

ರಸ್ತೆ ಕಾಮಗಾರಿ ವಿಳಂಬ ಖಂಡಿಸಿ ಜೆಡಿಎಸ್‌ ಪ್ರತಿಭಟನೆ
Last Updated 8 ನವೆಂಬರ್ 2022, 7:01 IST
ಅಕ್ಷರ ಗಾತ್ರ

ದೇವನಹಳ್ಳಿ: ತಾಲ್ಲೂಕಿನಾದ್ಯಂತ ತೀವ್ರವಾಗಿ ರಸ್ತೆಗಳು ಹಾಳಾಗಿರುವುದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಡಿ ದೇವನಹಳ್ಳಿ ಹಾಗೂ ವಿಜಯಪುರ ಅವಳಿ ಪಟ್ಟಣದಲ್ಲಿನ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಸೋಮವಾರ ಜೆಡಿಎಸ್‌ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ಪ್ರತಿಭಟನಾ ಜಾಥಾ ನಡೆಯಿತು.

ಜೆಡಿಎಸ್‌ ಮುಖಂಡರ ಕಾಲ್ನಡಿಗೆ ಜಾಥಾವೂ ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡಿತು. ಬಳಿಕ ಬಿ.ಬಿ ರಸ್ತೆ, ಹಳೇ ಬಸ್‌ ನಿಲ್ದಾಣದಿಂದ ಹೊಸ ಬಸ್‌ ನಿಲ್ದಾಣ ವೃತ್ತದವರೆಗೂ ಸಾಗಿತು. ರಸ್ತೆಗಳಲ್ಲಿ ಸೃಷ್ಟಿಯಾಗಿದ್ದ ಗುಂಡಿಗಳಲ್ಲಿ ಶಾಸಕರು ಮತ್ತು ಕಾರ್ಯಕರ್ತರು ರಾಗಿ ಪೈರು ನಾಟಿ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ದೇವನಹಳ್ಳಿ ಪೊಲೀಸ್‌ ಠಾಣೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ದುರಾಡಳಿತ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕರು, ‘ಸದನದಲ್ಲಿ ಎರಡೆರಡು ಬಾರಿ ರಸ್ತೆ ದುರಸ್ತಿಗೆ ಒತ್ತಾಯಿಸಿದ್ದರಿಂದ ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ಪ್ರಾರಂಭ ಮಾಡಿಲ್ಲ. ಟೆಂಡರ್‌ನಲ್ಲಿ ಬ್ಲಾಕ್‌ ಲಿಸ್ಟ್‌ನಲ್ಲಿರುವ ಗುತ್ತಿಗೆದಾರರ ಪರ ಪ್ರಭಾವಿಗಳು ಲಾಬಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅನರ್ಹ ಗುತ್ತಿಗೆದಾರರಿಗೆ ಟೆಂಡರ್‌ ನೀಡಲು ಸಚಿವರೊಬ್ಬರು ಶಿಫಾರಸು ಪತ್ರ ಬರೆಯುತ್ತಾರೆ. ಈಗಾಗಲೇ, ಟೆಂಡರ್‌ ಆಗಿರುವವರು ಕಾಮಗಾರಿ ಪ್ರಾರಂಭಕ್ಕೆ ಕೋರ್ಟ್‌ ಮೋರೆ ಹೋಗಿರುವುದು ಅವಾಂತರಕ್ಕೆ ಕಾರಣವಾಗಿದೆ. ರಸ್ತೆಗಳ ದುಃಸ್ಥಿತಿಯಿಂದ ಸಾರ್ವಜನಿಕರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಎಚ್ಚೆತ್ತುಕೊಂಡು ಮುಂದಿನ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಆರ್‌. ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ. ರವೀಂದ್ರ, ಪುರಸಭಾ ಅಧ್ಯಕ್ಷೆ ಗೋಪಮ್ಮ, ಮುಖಂಡರಾದ ಕೋಡಿ ಮಂಚೇನಹಳ್ಳಿ ನಾಗೇಶ್, ರಬ್ಬನಹಳ್ಳಿ ಪ್ರಭಾಕರ್, ಮುನಿನಂಜಪ್ಪ, ಕಾಳಪ್ಪನವರ ವೆಂಕಟೇಶ್, ಎಸ್ಎಲ್ಎನ್‌ ಮುನಿರಾಜು, ಹುರಳಗುರ್ಕಿ ಶ್ರೀನಿವಾಸ್, ಹೊಸಳ್ಳಿ ರವಿ, ರೆಡ್ಡಿಹಳ್ಳಿ ಚೇತನ್‌ಗೌಡ, ಬಿ.ವಿ. ನಾಗರಾಜ್, ಮಂಜುನಾಥ್, ಮುನಿನಂಜಪ್ಪ, ದಿನ್ನೂರು ರಾಮಣ್ಣ, ದುದ್ದನಹಳ್ಳಿ ಮುನಿರಾಜು, ಹೋಬಳಿ ಅಧ್ಯಕ್ಷರಾದ ಲಕ್ಷ್ಮಣ್, ಮುನಿರಾಜು, ಭರತ್, ವೈ.ಪಿ. ಪ್ರವೀಣ್, ಆನಂದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT