ಪೊಲೀಸ್ ಇಲಾಖೆಗೆ ನಿವೃತ್ತರ ಸಹಕಾರ ಬೇಕು

ಮಂಗಳವಾರ, ಜೂಲೈ 16, 2019
25 °C

ಪೊಲೀಸ್ ಇಲಾಖೆಗೆ ನಿವೃತ್ತರ ಸಹಕಾರ ಬೇಕು

Published:
Updated:
Prajavani

ವಿಜಯಪುರ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವಷ್ಟು ಕಾಲ ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಸದಾ ಜನರ ಮನಸ್ಸಿನಲ್ಲಿ ಉಳಿಯಲಿಕ್ಕೆ ಸಾಧ್ಯವಾಗುತ್ತದೆ ಎಂದು ಸಿ.ಐ.ಪ್ರಕಾಶ್ ಹೇಳಿದರು.

ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಸೊಣ್ಣಪ್ಪ ಹಾಗೂ ವರ್ಗಾವಣೆಗೊಂಡಿರುವ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ವೆಂಕಟೇಶ್ ಅವರನ್ನು ಬೀಳ್ಕೊಡುಗೆ ನೀಡಿ ಅವರು ಮಾತನಾಡಿದರು.

ಸದಾ ಜಾಗೃತವಾಗಿರಬೇಕಾಗಿರುವ ಇಲಾಖೆಗೆ ನಿವೃತ್ತರಾಗುತ್ತಿರುವ ಸಿಬ್ಬಂದಿಯ ಸಹಕಾರವೂ ಅಗತ್ಯವಾಗಿದೆ. ಅವರ ಅನುಭವವನ್ನು ಸದಾಕಾಲ ಇಲಾಖೆಗೆ ಹಂಚಿಕೊಳ್ಳಬೇಕು. ಪ್ರಾಮಾಣಿಕ ಅಧಿಕಾರಿಗಳ ಮಾರ್ಗದರ್ಶನ ಪಡೆದುಕೊಂಡು ದಕ್ಷತೆಯಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಸಬ್‌ ಇನ್‌ಸ್ಪೆಕ್ಟರ್ ನಂದೀಶ್ ಮಾತನಾಡಿ, ಜನರ ಬವಣೆಗಳಿಗೆ ಇಲಾಖಾ ಅಧಿಕಾರಿಗಳು ಕಾನೂನು ರೀತಿಯಲ್ಲಿ ನ್ಯಾಯಯುತ ಸ್ಪಂದನೆ ನೀಡಿದಾಗ ಸಮಾಜ ಹಾಗೂ ಜನರು ತಪ್ಪು ದಾರಿಗಿಳಿಯುವುದಿಲ್ಲ. ಜನರಿಂದ ಸಮಾಜದಲ್ಲಿ ಶಾಂತಿ ನೆಮ್ಮದಿ ಕಾಣಬೇಕಾಗಿದೆ ಎಂದು ತಿಳಿಸಿದರು.

ಸಮಾಜದ ಕುಂದು ಕೊರತೆಗಳನ್ನು ಅರಿತುಕೊಂಡು ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು ಎಂದರು.

ನಿವೃತ್ತ ಪೊಲೀಸ್ ಅಧಿಕಾರಿ ಸೊಣ್ಣಪ್ಪ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸೇವಾ ಮನೋಭಾವ ಮತ್ತು ಧೈರ್ಯವಿದ್ದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು ಎಂದರು.

ಪಿಎಸ್‌ಐ ವೆಂಕಟೇಶ್ ಮಾತನಾಡಿ, ‘ಸಾರ್ವಜನಿಕರ ಸೇವೆ ಮಾಡಲು ಪೊಲೀಸ್ ಇಲಾಖೆ ನಮಗೆ ನೀಡಿರುವ ದೊಡ್ಡ ಅವಕಾಶ ಇದಾಗಿದೆ. ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಜನರ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಕೇವಲ ಒಬ್ಬರು, ಇಬ್ಬರಿಂದ ಸಾಧ್ಯವಾಗಲ್ಲ, ಇಲಾಖೆಯ ಮೇಲಧಿಕಾರಿಗಳ ಮಾರ್ಗದರ್ಶನ, ಸಿಬ್ಬಂದಿಯ ಸಹಕಾರದಿಂದ ಮಾತ್ರ ನಾವು ಏನು ಬೇಕಾದರೂ ಸಾಧನೆ ಮಾಡಬಹುದಾಗಿದೆ’ ಎಂದರು.

ಇಲಾಖೆಯ ಸಿಬ್ಬಂದಿ ನಾರಾಯಣಸ್ವಾಮಿ, ಮಧು, ನಾಗರಾಜು, ಪ್ರಸನ್ನ, ಮಲ್ಲಪ್ಪ, ಅರುಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !