ಗಾಂಜಾ ನಿಯಂತ್ರಿಸದ ಪೊಲೀಸರು – ದೂರು

7
ಅಕ್ರಮ ವ್ಯವಹಾರ ನಿಯಂತ್ರಣಕ್ಕೆ ಶಾಸಕ ವೆಂಕಟರಮಣಯ್ಯ ಸೂಚನೆ

ಗಾಂಜಾ ನಿಯಂತ್ರಿಸದ ಪೊಲೀಸರು – ದೂರು

Published:
Updated:
Deccan Herald

ದೊಡ್ಡಬಳ್ಳಾಪುರ: ದರ್ಗಾಜೋಗಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ 2018-19ನೇ ಸಾಲಿನ ಗ್ರಾಮ ಸಭೆಯಲ್ಲಿ ಗಾಂಜಾ ಸೇದುವ ಪೋಲಿ ಹುಡುಗರ ಹಾವಳಿ ನಿಯಂತ್ರಿಸುವಲ್ಲಿ ಪೊಲೀಸರು ವಿಫಲವಾಗಿರುವ ಕುರಿತಂತೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿಬಂದವು.

ಸಭೆಯಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಲಕ್ಷ್ಮಣ, ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣಕ್ಕೆ ಸೂಕ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಹೀಗಾಗಿ ಸಂಜೆಯಾಗುತ್ತಲೇ ಈ ಆವರಣದಲ್ಲಿ ಗಾಂಜಾ ಸೇದುವ ಹುಡುಗರ ದಂಡೇ ಸೇರುತ್ತದೆ. ಸಂಜೆ ವೇಳೆ ಮಹಿಳೆಯರು ಹೊರ ಬರುವುದೇ ಕಷ್ಟವಾಗಿದೆ. ಈ ಬಗ್ಗೆ ಹಲವಾರು ಬಾರಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ಈ ಕುರಿತಂತೆ ಶಾಸಕರು ಸಭೆಯಲ್ಲಿಯೇ ಹಿರಿಯ ಪೊಲೀಸರ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.

‘ಗಾಂಜಾ ಸೇದುವ, ಮಾರಾಟ ಮಾಡುವ, ಮಟ್ಕಾ, ಇಸ್ಪೀಟ್ ಅಡ್ಡೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಹಲವಾರು ಬಾರಿ ಹೇಳಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಇಲ್ಲಿನ ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಹೇಳುತ್ತಿರುವ ದೂರಿನಿಂದಲೇ ತಿಳಿಯುತ್ತದೆ. ತಕ್ಷಣ ಈ ಭಾಗದಲ್ಲಿ ಸಂಜೆ ವೇಳೆ ಗಸ್ತು ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ದೂರುಗಳು ಸಾರ್ವಜನಿಕರಿಂದ ಮತ್ತೆ ಕೇಳಿ ಬರದಂತೆ ಎಚ್ಚರ ವಹಿಸಬೇಕು’ ಎಂದು ಶಾಸಕ ಟಿ. ವೆಂಕಟರಮಣಯ್ಯ ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಗ್ರಾಮ ಸಭೆಯಲ್ಲಿ ಸ್ಥಳೀಯ ನಿವಾಸಿ ಕಲಾವತಿ ಮಾತನಾಡಿ, ಮಾಂಗಲ್ಯ ಕಲ್ಯಾಣ ಮಂಟಪದವರು ಜನವಸತಿ ಪ್ರದೇಶದಲ್ಲಿಯೇ ಕಲ್ಯಾಣ ಮಂದಿರದಲ್ಲಿನ ತ್ಯಾಜ್ಯವನ್ನು ತಂದು ರಾಶಿಹಾಕಿ ಬೆಂಕಿ ಹಚ್ಚುತ್ತಾರೆ. ಕಸ ಕೊಳೆತಾಗ ದುರ್ನಾತ ಬರುತ್ತಿದೆ ಎಂದು ಅಳಲು ತೋಡಿಕೊಂಡರು.

ಶಾಂತಿನಗರ ನಿವಾಸಿ ಸೋಮಶೇಖರ್, ನಾಯಿಗಳ ಹಾವಳಿ ಮಿತಿಮೀರಿ ಹೋಗಿದೆ. ಕೋಳಿ ಅಂಗಡಿಗಳವರು ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡುತ್ತಿಲ್ಲ. ಗೋಣಿಚೀಲಗಳಲ್ಲಿ ತಂದು ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ರಾತ್ರಿ ವೇಳೆ ರಾಶಿ ಹಾಕುತ್ತಿದ್ದಾರೆ ಎಂದು ದೂರಿದರು.

ನಿವೇಶನ ರಹಿತರಿಗೆ ನಿವೇಶನಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲು ಸರ್ಕಾರಿ ಭೂಮಿಯ ಬಗ್ಗೆ ಮಾಹಿತಿ ನೀಡಿ ಮಂಜೂರಾತಿ ನೀಡುವಂತೆ ತಹಶೀಲ್ದಾರರಿಗೆ ಪಂಚಾಯಿತಿ ವತಿಯಿಂದ ಮನವಿ ಸಲ್ಲಿಸಿ ವರ್ಷಗಳೇ ಕಳೆದಿದೆ. ಆದರೂ ಇದುವರೆಗು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಶಾಸಕರು ಹೆಚ್ಚಿನ ಆಸಕ್ತಿ ವಹಿಸಿ ನಿವೇಶನರಹಿತರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ವರ್ಷಗಳಲ್ಲಿ 10 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ದರ್ಗಾಜೋಗಹಳ್ಳಿ ಗ್ರಾಮ, ಶಾಂತಿನಗರ ವ್ಯಾಪ್ತಿಯಲ್ಲಿನ ಎಲ್ಲ ರಸ್ತೆಗಳಿಗು ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದರು.

ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಕುರಿತು ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಎಚ್.ಎಂ.ದ್ಯಾಮಪ್ಪ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಅನ್ನಪೂರ್ಣ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಬಿ.ಸಿ.ಆನಂದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗವೇಣಿ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ್, ಕಾಂಗ್ರೆಸ್ ಒಬಿಸಿ ರಾಜ್ಯ ಎಸ್.ರಾಜ್ ಕುಮಾರ್, ಮುಖಂಡರಾದ ತಿ.ರಂಗರಾಜು, ಬಿ.ಎಚ್.ಕೆಂಪಣ್ಣ, ನಂಜುಂಡಪ್ಪ, ಪ್ರಕಾಶ್ ರಾವ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೆ.ವೈ.ಮಲ್ಲಪ್ಪ, ನಾಗಭೂಷಣ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !